ಕೇರಳದ 5ನೇ ತರಗತಿ ಬಾಲಕಿಯ ಪತ್ರಕ್ಕೆ ಮಾರು ಹೋದ ಸಿಐಜೆ!

By Suvarna NewsFirst Published Jun 9, 2021, 6:46 PM IST
Highlights

ಕೋವಿಡ್ ನಿರ್ವಹಣೆ ಸಂಬಂಧ ಸುಪ್ರೀಂ ಕೋರ್ಟ್ ತೋರುತ್ತಿರುವ  ದಿಟ್ಟತನಕ್ಕೆ ದೇಶವಾಸಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಾಲ ಕಾಲಕ್ಕೆ ನ್ಯಾಯಾಲಯ ನೀಡಿದ ಆದೇಶಗಳ ಫಲವಾಗಿ ಸರ್ಕಾರವು ಸಕ್ರಿಯವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲಕಿಯೊಬ್ಬಳು ಸಿಜಿಐಗೆ ಪತ್ರ ಬರೆದು ಅಭಿನಂದನೆ ಸಲ್ಲಿಸಿರುವುದು ವ್ಯಾಪಕ ಪ್ರಚಾರ ಪಡೆದುಕೊಂಡಿದೆ.

ದೇಶಾದ್ಯಂತ ಮಹಾಮಾರಿ ಕೋವಿಡ್  ೨ನೇ ಅಲೆಗೆ ನಿತ್ಯ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಸಕಾಲಕ್ಕೆ ಆಕ್ಸಿಜನ್ ಸಿಗದೇ ಕೊನೆಯುಸಿರೆಳೆದವರೇ ಹೆಚ್ಚು. ಬಹುತೇಕ ಎಲ್ಲಾ ರಾಜ್ಯಗಳ ಪರಿಸ್ಥಿತಿ ಇದೇ ಆಗಿತ್ತು. ಇಂಥ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್, ಸೂಕ್ತ ಕ್ರಮಗಳನ್ನ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿತು. ಅದರ ಪರಿಣಾಮವಾಗಿ ಸದ್ಯ ಆಕ್ಸಿಜನ್ ಸಮಸ್ಯೆ ಕೊಂಚ ನಿವಾರಣಯಾಗಿದೆ. ಇದಿಷ್ಟೇ ಅಲ್ಲ ಕೋವಿಡ್ ವಿಚಾರವಾಗಿ ಸುಪ್ರೀಂ ಕೋರ್ಟ್ ಪದೇ ಪದೇ ಕೆಲವೊಂದು ಆದೇಶಗಳನ್ನ ನೀಡುತ್ತಾ ಬಂದಿದೆ. ಸರ್ವೊಚ್ಛ ನ್ಯಾಯಾಲಯದ ಕಾರ್ಯ ವೈಖರಿಯನ್ನ ಗಮನಿಸುತ್ತಾ ಬಂದಿರೋ ಬಾಲಕಿಯೊಬ್ಬಳು, ಖುದ್ದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ವಿನೂತನವಾಗಿ ಅಭಿನಂದನೆ ಸಲ್ಲಿಸಿದ್ದಾಳೆ. 

ನೀಟ್ ಪರೀಕ್ಷೆಯನ್ನೂ ರದ್ದು ಮಾಡಲು ತಮಿಳುನಾಡು ಒತ್ತಾಯ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರಿಗೆ ಕೇರಳದ 5ನೇ ತರಗತಿ ವಿದ್ಯಾರ್ಥಿನಿ ಲಿಡ್ವಿನಾ ಜೋಸೆಫ್ ಪತ್ರ ಬರೆದು ಪ್ರಶಂಸೆ ವ್ಯಕ್ತಪಡಿಸಿದ್ದಾಳೆ. ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ಕೋರ್ಟ್ ಹೊರಡಿಸಿದ ಆದೇಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ. 

ತ್ರಿಶೂರ್‌ನ ಕೇಂದ್ರೀಯ ವಿದ್ಯಾಲಯದಲ್ಲಿ 5ನೇ ತರಗತಿ ಓದುತ್ತಿರುವ ಲಿಡ್ವಿನಾ, ಡ್ರಾಯಿಂಗ್ ಬಿಡಿಸಿ ಅದರೊಳಗೆ ಪತ್ರ ಬರೆದು ಸಿಜೆಐಗೆ ಕಳುಹಿಸಿದ್ದಾಳೆ. ಪ್ರತಿದಿನ ಪತ್ರಿಕೆಗಳಲ್ಲಿ ದೆಹಲಿ ಹಾಗೂ ಇತರೆ ಕೆಲವು ಪ್ರದೇಶಗಳಲ್ಲಿ ಕೊರೊನಾದಿಂದ ಆಗುತ್ತಿರುವ ಸಾವಿನ ಸುದ್ದಿ ಓದಿ ಆತಂಕಗೊಂಡಿದ್ದೆ. ಆದ್ರೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ಕೋವಿಡ್‌ ಸಾವುಗಳು ಗಣನೀಯ ಇಳಿಕೆಯಾಗಿವೆ. ಆಕ್ಸಿಜನ್ ಪೂರೈಕೆಗೆ ಆದೇಶ ಹೊರಡಿಸುವ ಮೂಲಕ ಹಲವು ಮಂದಿಯ ಜೀವಗಳನ್ನ ಕಾಪಾಡಿದ್ದಕ್ಕೆ ಬಹಳ ಸಂತೋಷಗೊಂಡಿದ್ದೇನೆ. ಸುಪ್ರೀಂ ಕೋರ್ಟ್‌ನ ದಿಟ್ಟ ಹೆಜ್ಜೆಯಿಂದಾಗಿ ದೇಶಾದ್ಯಂತ ಅದರಲ್ಲೂ ದೆಹಲಿಯಲ್ಲಿ ಡೆತ್ ರೇಟ್ ಬಹಳ ಕಡಿಮೆಯಾಗಿದೆ. ಹೀಗಾಗಿ ನಾನು ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೇರಳದ ಬಾಲಕಿ ಲಿಡ್ವಿನಾ ಪತ್ರದಲ್ಲಿ ಬರೆದಿದ್ದಾಳೆ. 

3322 ಅಪ್ರೆಂಟಿಸ್ ಹುದ್ದೆಗಳಿಗೆ ದಕ್ಷಿಣ ಮಧ್ಯೆ ರೈಲ್ವೆ ಅರ್ಜಿ ಆಹ್ವಾನ

ಬಾಲಕಿ ಬರೆದರುವ ಈ ಪತ್ರಕ್ಕೆ ಉತ್ತರಿಸಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ,  ನನ್ನ ಪ್ರೀತಿಯ ಲಿಡ್ವಿನಾ, ತಮ್ಮ ಕಾರ್ಯಗಳಲ್ಲಿ ನಿರತರಾಗಿರುವ ನ್ಯಾಯಾಧೀಶರ ಸುಂದರ ಚಿತ್ರವಿರುವ ನಿಮ್ಮ ಪತ್ರವನ್ನು ಸ್ವೀಕರಿಸಿದ್ದೇನೆ. ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನ ನೀವು ಗಮನಿಸಿರುವ ರೀತಿ ಹಾಗೂ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜನರ ಯೋಗಕ್ಷೇಮ ಕುರಿತಾಗಿ ನಿಮಗಿರುವ ಕಾಳಜಿಯಿಂದ ನಾನು ಪ್ರಭಾವಿತನಾಗಿದ್ದೇನೆ. ನೀವು ತುಂಬಾ ಜಾಗರೂಕರಾಗಿ, ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಯುವಿರಿ. ಜೊತೆಗೆ ದೇಶಕ್ಕೆ ಉತ್ತಮ ಕೊಡುಗೆ ನೀಡುವಿರಿ ಎಂಬ ಖಾತ್ರಿ ನನಗಿದೆ. ನಿಮ್ಮ ಸರ್ವತೋಮುಖ ಯಶಸ್ಸಿಗೆ ನನ್ನ ಶುಭಾಶಯಗಳು ಎಂದು ಪ್ರತಿಕ್ರಿಯಿಸಿದ್ದಾರೆ.

ಸಿಜೆಐ ರಮಣ ಅವರು, ಬಾಲಕಿಗೆ ಉತ್ತರವಿರೋ ಪತ್ರದ ಜೊತೆಗೆ ತಮ್ಮ ಹಸ್ತಾಕ್ಷರಯುಳ್ಳ ಸಂವಿಧಾನದ ಪ್ರತಿಯೊಂದನ್ನ ಕಳುಹಿಸಿಕೊಟ್ಟಿದ್ದಾರೆ ಅಂತ ತಿಳಿದು ಬಂದಿದೆ. 

ದೇಶದಲ್ಲಿ ಕೊರೊನಾ 2ನೇ ಅಲೆಯ ನಿರ್ವಹಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್,ಸ್ವಯಂ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್, ದೇಶದ ಪರಿಸ್ಥಿತಿ, ಆಮ್ಲಜನಕ ಹಾಗೂ ಅಗತ್ಯ ಔಷಧಿಗಳ ಪೂರೈಕೆ, ವ್ಯಾಕ್ಸಿನೇಷನ್ ವಿಧಾನ ಹಾಗೂ ಲಾಕ್‌ಡೌನ್‌ ಬಗ್ಗೆ ಪ್ರಶ್ನಿಸಿತ್ತು. ಅಲ್ಲದೇ ಕೋವಿಡ್ ನಿರ್ವಹಣೆಗಾಗಿ ರಾಷ್ಟ್ರೀಯ ಯೋಜನೆಯನ್ನು ಮಂಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಮೋದಿ ಅಂಕಲ್, ಮಕ್ಕಳಿಗೇ ಯಾಕೆ ಅಷ್ಟೊಂದು ಕೆಲ್ಸಾ?: 6 ವರ್ಷದ ಕಾಶ್ಮೀರಿ ಪೋರಿಯ ಕ್ಯೂಟ್ ಪ್ರಶ್ನೆ!

ಅಲ್ಲದೇ ಇತ್ತೀಚೆಗೆ ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದಂತೆ 32 ಪುಟಗಳ ಆದೇಶವನ್ನೂ ಸುಪ್ರೀಂ ಕೋರ್ಟ್ ಹೊರಡಿಸಿತ್ತು. ಹೀಗೆ ಕೋವಿಡ್ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೊಟ್ಟ ಆದೇಶಗಳನ್ನ ಗಮನಿಸಿದ ಬಾಲಕಿ, ಸಿಜೆಐಗೆ ಪತ್ರ ಬರೆದು ಪ್ರಶಂಸೆ ವ್ಯಕ್ತಪಡಿಸಿದ್ದಾಳೆ. ಬಾಲಕಿ ಬರೆದಿರುವ ಈ ಪತ್ರ ಹಾಗೂ ಅದಕ್ಕೆ ಸಿಜಿಐ ಬರೆದಿರುವ ಪತ್ರವು ವ್ಯಾಪಕ ಪ್ರಶಂಸೆಯನ್ನ ಗಳಿಸಿದೆ.

click me!