
ಐಐಟಿ ದೆಹಲಿಯಲ್ಲಿ 31 ವರ್ಷದ ಎಂಎಸ್ಸಿ ವಿದ್ಯಾರ್ಥಿ ರಿಷಿಕೇಶ್ ಕುಮಾರ್ ಸಾವಿನ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ ಎಂದು ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಐಐಟಿಯ ಎರಡನೇ ವರ್ಷದ ಬಿಟೆಕ್ ವಿದ್ಯಾರ್ಥಿ ಸಾಕ್ಷಮ್ ಬುಧವಾರ ಈ ಬಗ್ಗೆ ಮಾತನಾಡಿದ್ದು, ಹೊರಗಿನ ರಾಜಕೀಯ ಪ್ರಭಾವಗಳು ನಮ್ಮ ಹೋರಾಟದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುತ್ತಿವೆ ಎಂದು ಆರೋಪಿಸಿದ್ದಾರೆ. 'ಈ ಚರ್ಚೆಯಲ್ಲಿ ಒಂದು ಸಮಸ್ಯೆಯಿದೆ. ರಾಜಕೀಯ ಅಜೆಂಡಾ ಹೊಂದಿರುವ ಕೆಲವರು ಈ ಹೋರಾಟವನ್ನು ಬೇರೆ ದಿಕ್ಕಿಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಕೇವಲ ವಿಚಾರಣೆಗಳು ಮತ್ತು ರಾಜೀನಾಮೆಗಳಿಗಾಗಿ ಪಟ್ಟು ಹಿಡಿದು, ಯಾವುದೇ ನಿಜವಾದ ಬದಲಾವಣೆ ಆಗದಂತೆ ನೋಡಿಕೊಳ್ಳಲು ಬಯಸುತ್ತಾರೆ' ಎಂದು ಸಾಕ್ಷಮ್ ಎಎನ್‌ಐ ಪ್ರತಿನಿಧಿ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ ಕೇವಲ ವಿದ್ಯಾರ್ಥಿಗಳ ಕಲ್ಯಾಣ ಮತ್ತು ಐಐಟಿ ದೆಹಲಿಯ ವ್ಯವಸ್ಥೆಯಲ್ಲಿನ ಸುಧಾರಣೆಗಳ ಮೇಲೆ ಹೊರತು ರಾಜಕೀಯ ವಿಚಾರ ಅಲ್ಲ ಎಂದು ಸಾಕ್ಷಮ್ ಹೇಳಿದ್ದಾರೆ. ಆದರೆ ಈ ಪ್ರತಿಭಟನೆಯಲ್ಲಿ ಬೇರೆ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಿಂದ ಪ್ರೇರಿತವಾದ ರಾಜಕೀಯ ವೇದಿಕೆ ನಿಧಾನವಾಗಿ ಇಲ್ಲಿಗೂ ನುಸುಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಜೆಎನ್‌ಯು ಪ್ರಭಾವದಿಂದ ಈ ಚರ್ಚೆ ಈಗ ನಿಧಾನವಾಗಿ ರಾಜಕೀಯಗೊಳ್ಳುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ತೀವ್ರ ಕೋಪವಿದೆ. ಯಾಕೆಂದರೆ ಇದು ಐಐಟಿ ದೆಹಲಿಯ ಪ್ರತಿಭಟನೆ, ಜೆಎನ್‌ಯು, ಡಿಯು ಅಥವಾ ಬೇರೆ ಯಾವುದೇ ಸಂಸ್ಥೆಯದ್ದಲ್ಲ. ನಮ್ಮ ಹೋರಾಟದಲ್ಲಿ ಏನು ನಡೆಯಬೇಕು, ಹೇಗೆ ನಡೆಯಬೇಕು ಎಂಬುದನ್ನು ಹೊರಗಿನವರು ನಿರ್ದೇಶಿಸುವುದನ್ನು ನಾವು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪ್ರತಿಭಟನೆಯ ಸಮಯದಲ್ಲಿ ಜಾತಿ ಆಧಾರಿತ ಮತ್ತು ಪಕ್ಷಪಾತದ ಹೇಳಿಕೆಗಳನ್ನು ನೀಡಿರುವುದಕ್ಕೂ ಸಾಕ್ಷಮ್ ಆಕ್ಷೇಪ ವ್ಯಕ್ತಪಡಿಸಿದರು. ಈ ಹೋರಾಟವು ರಾಜಕೀಯ ಬಣಗಳ ವೇದಿಕೆಯಾಗುವುದನ್ನು ವಿದ್ಯಾರ್ಥಿಗಳು ಬಯಸುವುದಿಲ್ಲ. ನಿನ್ನೆ ಜಾತಿ ನಿಂದನೆಯ ಮಾತುಗಳು ಕೇಳಿಬಂದಿವೆ. 'ಎಡಪಂಥೀಯ ಲಾಬಿ' ಮತ್ತು 'ಬಲಪಂಥೀಯ ಲಾಬಿ' ನಡುವಿನ ಪೈಪೋಟಿಯಿಂದಾಗುವ ರಾಜಕೀಕರಣವನ್ನು ವಿದ್ಯಾರ್ಥಿಗಳು ಬಲವಾಗಿ ವಿರೋಧಿಸುತ್ತಾರೆ. ಇಲ್ಲಿ ಯಾವುದೇ ರಾಜಕೀಯ ಅಜೆಂಡಾ ಪ್ರಚಾರವಾಗುವುದಾಗಲಿ, ಯಾವುದೇ ನಿರ್ದಿಷ್ಟ ರಾಜಕೀಯ ಬಣಕ್ಕೆ ಸಂಬಂಧಿಸಿದ ಘೋಷಣೆಗಳು ಅಥವಾ ಪೋಸ್ಟರ್‌ಗಳು ಬಳಕೆಯಾಗುವುದಾಗಲಿ ನಮಗೆ ಇಷ್ಟವಿಲ್ಲ' ಎಂದಿದ್ದಾರೆ.
ಆದರೆ, ಜೆಎನ್‌ಯುನಿಂದ ಬರುತ್ತಿರುವ ಪ್ರಭಾವವು ಕೆಲವು ಸಮಸ್ಯೆಗಳನ್ನು ಸೃಷ್ಟಿಸಲು ಪ್ರಾರಂಭಿಸಿದೆ. ವಿದ್ಯಾರ್ಥಿಗಳು ಕೋಪಗೊಳ್ಳುತ್ತಿದ್ದಾರೆ ಮತ್ತು ಪ್ರತಿಭಟನೆಯ ಸಮಯದಲ್ಲಿ ಇದ್ದ ಒಗ್ಗಟ್ಟು ಈಗ ಅಲುಗಾಡಲು ಆರಂಭಿಸಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯ ಬೇಡಿಕೆಗಳು ವ್ಯವಸ್ಥೆ ಸುಧಾರಣೆಗೆ ಕರೆ
ಅಂದಹಾಗೆ ಒಂದು ದಿನದ ಹಿಂದೆಯಷ್ಟೇ ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ಅಧ್ಯಕ್ಷೆ ನೇಹಾ ಬೋರಾ ಅವರು ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು. ರಿಷಿಕೇಶ್ ಕುಮಾರ್ ಅವರ ಸಾವನ್ನು 'ಸಾಂಸ್ಥಿಕ ಹತ್ಯೆ' ಎಂದು ಕರೆದಿದ್ದ ಅವರು, ವ್ಯವಸ್ಥೆಯ ಒತ್ತಡವೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದರು. ಈ ಉನ್ನತ ಮಟ್ಟದ, ಕೇಂದ್ರೀಕೃತ ಪರೀಕ್ಷಾ ಮಾದರಿಯು ಯುವ ವಿದ್ವಾಂಸರ ಮೇಲೆ ತೀವ್ರ ಒತ್ತಡ ಮತ್ತು ಒಂಟಿತನವನ್ನು ಹೇರುತ್ತದೆ ಎಂದು ಅವರು ಟೀಕಿಸಿದ್ದರು.
ರಿಷಿಕೇಶ್ ಕುಮಾರ್ ಅವರು ಆಗಸ್ಟ್ 22 ರಂದು ಐಐಟಿ ದೆಹಲಿಯ ಲೆಕ್ಚರ್ ಹಾಲ್ ಕಾಂಪ್ಲೆಕ್ಸ್ (LHC) ನ ಆರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಪೊಲೀಸರು ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಮತ್ತು ಸಾವಿನ ಸುತ್ತಲಿನ ಸಂದರ್ಭಗಳ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ರಿಷಿಕೇಶ್ ಸಾವಿನ ನಂತರ ಐಐಟಿ ದೆಹಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಸ್ವತಂತ್ರ ತನಿಖೆ, ಅವರ ಕುಟುಂಬಕ್ಕೆ ಆರ್ಥಿಕ ನೆರವು, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ರಾಜೀನಾಮೆ ಮತ್ತು ಸಂಸ್ಥೆಯ ವಿದ್ಯಾರ್ಥಿ ಕಲ್ಯಾಣ ಹಾಗೂ ಮಾನಸಿಕ ಆರೋಗ್ಯ ಬೆಂಬಲ ವ್ಯವಸ್ಥೆಗಳಲ್ಲಿ ಸುಧಾರಣೆಗಳನ್ನು ತರಬೇಕೆಂದು ಒತ್ತಾಯಿಸುತ್ತಿದ್ದಾರೆ.
ಕೇವಲ ಆಡಳಿತಾತ್ಮಕ ರಾಜೀನಾಮೆಗಳ ಬದಲು 'ವ್ಯವಸ್ಥಿತ ಸುಧಾರಣೆ' ಬೇಕು ಎಂದು ಸಾಕ್ಷಮ್ ಈ ಹಿಂದೆ ಎಎನ್‌ಐಗೆ ತಿಳಿಸಿದ್ದರು. ಪದೇ ಪದೇ ವಿಚಾರಣೆಗಳು ಮತ್ತು ಅಧಿಕಾರಿಗಳ ಬದಲಾವಣೆಯಿಂದ ತಳಮಟ್ಟದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಅವರು ವಾದಿಸಿದ್ದರು.
ವಾಸ್ತವವೆಂದರೆ, ಪ್ರತಿ ಬಾರಿ ಇಂತಹ ಘಟನೆ ನಡೆದಾಗ, ಆಡಳಿತವು ತನಿಖೆ ನಡೆಸುವುದು, ಸಮಿತಿಯನ್ನು ರಚಿಸಲಾಗುವುದು ಎಂದು ಹೇಳುತ್ತದೆ. ಪ್ರತಿ ಬಾರಿಯೂ ಅದೇ ಪುನರಾವರ್ತನೆಯಾಗುತ್ತದೆ. ಸಮಿತಿ ರಚನೆಯಾಗುತ್ತದೆ, ವರದಿ ಸಲ್ಲಿಕೆಯಾಗುತ್ತದೆ, ಎಲ್ಲವೂ ಕಾಗದದ ಮೇಲೆ ಇರುತ್ತದೆ. ಆದರೆ ವಾಸ್ತವವಾಗಿ ಇದರಿಂದ ಏನೂ ಬದಲಾಗುವುದಿಲ್ಲ ಎಂದು ಅವರು ಹೇಳಿದ್ದರು.
ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡಲು ಮತ್ತು ಅವರ ಕುಂದುಕೊರತೆಗಳನ್ನು ಪರಿಹರಿಸಲು ಐಐಟಿ ದೆಹಲಿಯಲ್ಲಿ ಸ್ವತಂತ್ರ ಮತ್ತು ಮೀಸಲಾದ ಮಾನಸಿಕ ಆರೋಗ್ಯ ಘಟಕವನ್ನು ಸ್ಥಾಪಿಸಬೇಕೆಂದು ಅವರು ಕರೆ ನೀಡಿದ್ದಾರೆ.
ಬಾಹ್ಯ ತನಿಖಾ ಸಮಿತಿ ರಚಿಸಿದ ಐಐಟಿ ದೆಹಲಿ
ಈ ಮಧ್ಯೆ, ರಿಷಿಕೇಶ್ ಕುಮಾರ್ ಸಾವಿನ ತನಿಖೆಗಾಗಿ ಐಐಟಿ ದೆಹಲಿ ರಚಿಸಿದ ಬಾಹ್ಯ ತನಿಖಾ ಸಮಿತಿಯ ಅಧ್ಯಕ್ಷರಾಗಿ ಪ್ರಸ್ತಾಪಿಸಲಾಗಿದ್ದ ಉತ್ತರಾಖಂಡದ ಮಾಜಿ ಡಿಜಿಪಿ ಅಶೋಕ್ ಕುಮಾರ್ ಅವರು, ಪೂರ್ವನಿಗದಿತ ಕಾರ್ಯಗಳ ಕಾರಣ ನೀಡಿ ಸಮಿತಿಯಿಂದ ಹೊರಗುಳಿದಿದ್ದಾರೆ ಎಂದು ಐಐಟಿ ದೆಹಲಿಯ ಮೂಲಗಳು ಎಎನ್‌ಐಗೆ ಖಚಿತಪಡಿಸಿವೆ.
ಶೀಘ್ರದಲ್ಲೇ ಹೊಸ ಅಧ್ಯಕ್ಷರ ಹೆಸರನ್ನು ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಐಐಟಿ ದೆಹಲಿ ನಿರ್ದೇಶಕ ಪ್ರೊ. ರಂಗನ್ ಬ್ಯಾನರ್ಜಿ ಅವರು ಪ್ರಸ್ತಾಪಿಸಿದ್ದ ಐದು ಸದಸ್ಯರ ಈ ಬಾಹ್ಯ ತನಿಖಾ ಸಮಿತಿಯಲ್ಲಿ ಅಶೋಕ್ ಕುಮಾರ್, ಏಮ್ಸ್ ನವದೆಹಲಿಯ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಪ್ರತಾಪ್ ಶರ್ಮಾ, ಇಬ್ಬರು ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ಸಂಸ್ಥೆಯ ರಿಜಿಸ್ಟ್ರಾರ್ (ಕಾರ್ಯದರ್ಶಿ ಮತ್ತು ಸಂಚಾಲಕರಾಗಿ) ಇದ್ದರು.
ಕೆಲವು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಸಮಿತಿಯ ಈ ಸಂಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಇದರ ನೇತೃತ್ವ ವಹಿಸಬೇಕೆಂದು ಒತ್ತಾಯಿಸಿದ್ದರು.
ಕುಮಾರ್ ಸಾವಿಗೆ ಕಾರಣವಾದ ಸಂದರ್ಭಗಳನ್ನು ಈ ಬಾಹ್ಯ ಸಮಿತಿ ಪರಿಶೀಲಿಸಲಿದೆ ಮತ್ತು ವಿದ್ಯಾರ್ಥಿ ಬೆಂಬಲ ವ್ಯವಸ್ಥೆಗಳನ್ನು ಬಲಪಡಿಸಲು ಅಗತ್ಯವಿರುವ ಹೆಚ್ಚಿನ ಕ್ರಮಗಳನ್ನು ಗುರುತಿಸಲಿದೆ ಎಂದು ಐಐಟಿ ದೆಹಲಿ ಹೇಳಿದೆ. ಅಸ್ತಿತ್ವದಲ್ಲಿರುವ ಆಂತರಿಕ ಕಾರ್ಯವಿಧಾನಗಳ ಮೂಲಕ ಬಗೆಹರಿಯದ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಪರಿಹರಿಸಲು ಬಾಹ್ಯ ಓಂಬುಡ್ಸ್‌ಮನ್ (ombudsperson) ನೇಮಕಕ್ಕೂ ಸಂಸ್ಥೆ ಪ್ರಸ್ತಾಪಿಸಿದೆ.
ಐಐಟಿ ದೆಹಲಿ ಪ್ರಕಾರ, ಕುಮಾರ್ ಅವರು ಜುಲೈ 2025 ರಲ್ಲಿ ಸಂಸ್ಥೆಗೆ ಸೇರಿದ್ದರು ಮತ್ತು ಕ್ಯಾಂಪಸ್‌ನ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು. ಜುಲೈ ಮತ್ತು ಆಗಸ್ಟ್‌ನಲ್ಲಿ ಅವರಿಗೆ ಕೌನ್ಸೆಲಿಂಗ್ ಮತ್ತು ಚಿಕಿತ್ಸಾ ಬೆಂಬಲವನ್ನು ನೀಡಲಾಗಿತ್ತು ಮತ್ತು ಎರಡನೇ ಹಾಗೂ ಮೂರನೇ ಸೆಮಿಸ್ಟರ್‌ಗಳಿಂದ ಹಿಂದೆ ಸರಿಯಲು ಅವರು ಸಲ್ಲಿಸಿದ್ದ ವಿನಂತಿಗಳನ್ನು ಅನುಮೋದಿಸಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ.
ಬೋಧಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ದೇಣಿಗೆಗಳ ಮೂಲಕ ಕುಮಾರ್ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುತ್ತಿರುವುದಾಗಿಯೂ ಸಂಸ್ಥೆ ಹೇಳಿದೆ. (ANI)