ವರ್ಷಕ್ಕೆ 3 ಪರೀಕ್ಷೆಯ ಪ್ರಯೋಗ ಎಸ್‌ಎಸ್‌ಎಲ್‌ಸಿಯಲ್ಲಿ ಫೇಲ್: ಪಿಯು ಫಲಿತಾಂಶ ಏರಿಕೆ!

By Kannadaprabha NewsFirst Published Oct 19, 2024, 6:29 AM IST
Highlights

ಫಲಿತಾಂಶ ಉತ್ತಮಗೊಳಿಸುವ ಮಹತ್ವಾಕಾಂಕ್ಷೆಯಿಂದ ಸರ್ಕಾರ ಇದೇ ಮೊದಲ ಬಾರಿಗೆ ಪರಿಚಯಿಸಿದ್ದ ವರ್ಷಕ್ಕೆ ಮೂರು ಬೋರ್ ಪರೀಕ್ಷೆ ನಡೆಸುವ ಪ್ರಯೋಗವು ದ್ವಿತೀಯ ಪಿಯುಸಿಯಲ್ಲಿ ಅಲ್ಪ ಪ್ರಮಾಣದಲ್ಲಿ ಯಶಸ್ವಿಯಾದರೆ, ಎಸ್ಸೆಸ್ಸೆಲ್ಸಿಯಲ್ಲಿ ವಿಫಲವಾಗಿದೆ.

• ಲಿಂಗರಾಜು ಕೋರಾ

ಬೆಂಗಳೂರು (ಅ.19): ಫಲಿತಾಂಶ ಉತ್ತಮಗೊಳಿಸುವ ಮಹತ್ವಾಕಾಂಕ್ಷೆಯಿಂದ ಸರ್ಕಾರ ಇದೇ ಮೊದಲ ಬಾರಿಗೆ ಪರಿಚಯಿಸಿದ್ದ ವರ್ಷಕ್ಕೆ ಮೂರು ಬೋರ್ ಪರೀಕ್ಷೆ ನಡೆಸುವ ಪ್ರಯೋಗವು ದ್ವಿತೀಯ ಪಿಯುಸಿಯಲ್ಲಿ ಅಲ್ಪ ಪ್ರಮಾಣದಲ್ಲಿ ಯಶಸ್ವಿಯಾದರೆ, ಎಸ್ಸೆಸ್ಸೆಲ್ಸಿಯಲ್ಲಿ ವಿಫಲವಾಗಿದೆ. 2022-23ನೇ ಸಾಲಿನ ಕ್ರೋಢೀಕೃತ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿಯ ಎಸ್ಸೆಸ್ಸೆಲ್ಸಿಯ ಮೂರೂ ಪರೀಕ್ಷೆಗಳ ಒಟ್ಟಾರೆ ಫಲಿತಾಂಶವು, ಲಕ್ಷಾಂತರ ವಿದ್ಯಾರ್ಥಿಗಳನ್ನು ಶೇ.20ರಷ್ಟು ಗ್ರೇಸ್ ಅಂಕ ನೀಡಿ ಪಾಸು ಮಾಡಿದಾಗ್ಯೂ ಶೇ.6ರಷ್ಟು ಕಡಿಮೆಯಾಗಿದೆ. ಆದರೆ, ದಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಶೇ.4ರಷ್ಟು ಏರಿಕೆಯಾಗಿದೆ.

Latest Videos

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿಗೆ 2023-24ನೇ ಸಾಲಿನಲ್ಲಿ ನಡೆಸಿದ ಮೂರೂ ವಾರ್ಷಿಕ ಪರೀಕ್ಷೆಗಳು ಮುಕ್ತಾಯವಾಗಿ ಅವುಗಳ ಕ್ರೋಢೀಕೃತ ಪರೀಕ್ಷೆಗಳಿಂದ ಫಲಿತಾಂಶವೂ ಪ್ರಕಟವಾಗಿದೆ. ಆ ಪ್ರಕಾರ, ಎಸ್ಸೆಸ್ಸೆಲ್ಸಿಯಲ್ಲಿ ಮೂರೂ ಶೇ.81.65ರಷ್ಟು ಕ್ರೋಢೀಕೃತ ಫಲಿತಾಂಶ ಬಂದಿದ್ದು, ಇದನ್ನು 2022-23ನೇ ಸಾಲಿನ ಮುಖ್ಯ ಪರೀಕ್ಷೆ ಮತ್ತು ಪೂರಕ ಪರೀಕ್ಷೆಯ ಕ್ರೋಢೀಕೃತ ಫಲಿತಾಂಶಕ್ಕೆ (ಶೇ.87) ಹೋಲಿಸಿ ದರೆ ಸುಮಾರು ಶೇ.6ರಷ್ಟು ಫಲಿತಾಂಶ ಕುಸಿತವಾಗಿರುವುದು ಕಂಡುಬಂದಿದೆ. ಒಂದು ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಸುಮಾರು 2 ಲಕ್ಷ ವಿದ್ಯಾರ್ಥಿಗಳನ್ನು ಶೇ.20ರಷ್ಟು ಗ್ರೇಸ್ ಅಂಕದ ಕೃಪೆಯಿಂದ ಪಾಸು ಮಾಡದೆ ಹೋಗಿದ್ದರೆ ಈ ಬಾರಿಯ ಕ್ರೋಢೀಕೃತ ಫಲಿತಾಂಶವು ಶೇ.6ರ ಬದಲು ಶೇ.26ಕ್ಕೆ ಕುಸಿಯುತ್ತಿತ್ತು ಎನ್ನುವುದು ಗಮನಾರ್ಹ. 

ರಾಯಚೂರು ವಿಶ್ವವಿದ್ಯಾಲಯ, ವಸತಿ ಶಾಲೆಗೆ ವಾಲ್ಮೀಕಿ ಹೆಸರು: ಸಿಎಂ ಸಿದ್ದರಾಮಯ್ಯ ಘೋಷಣೆ

ಪಿಯು ಫಲಿತಾಂಶ ಏರಿಕೆ: ಇನ್ನು ದ್ವಿತೀಯ ಪಿಯುಸಿಯಲ್ಲಿ ಮೂರೂ ಪರೀಕ್ಷೆಗಳ ಕ್ರೋಢೀಕೃತ ಫಲಿತಾಂಶವು ಶೇ.84.87ರಷ್ಟಿದ್ದು ಇದು 2022-23ನೇ ಸಾಲಿನ ಒಟ್ಟಾರೆ ಫಲಿತಾಂಶಕ್ಕಿಂತ ಶೇ.4ಕ್ಕಿಂತ ಹೆಚ್ಚಾಗಿದೆ. ಹಿಂದಿನ ಸಾಲಿನಲ್ಲಿ ಮುಖ್ಯ ಪರೀಕ್ಷೆ ಮತ್ತು ಪೂರಕ ಪರೀಕ್ಷೆಯಿಂದ ಒಟ್ಟಾರೆ ಶೇ.80ರಷ್ಟು ಫಲಿತಾಂಶ ದಾಖಲಾಗಿತ್ತು. ಇದರೊಂದಿಗೆ ಸರ್ಕಾರ ಇದೇ ಮೊದಲ ಬಾರಿಗೆ ಪರಿಚಯಿಸಿದ್ದ ಮೂರು ಪರೀಕ್ಷೆಗಳು ಎಸ್ಸೆಸ್ಸೆಲ್ಸಿಯಲ್ಲಿ ವಿಫಲವಾದರೆ, ದ್ವಿತೀಯ ಪಿಯುಸಿಯಲ್ಲಿ ಕೊಂಚ ಸಫಲವಾದಂತಾಗಿದೆ. 

ಎಸ್ಸೆಸ್ಸೆಲ್ಸಿ ಫೇಲ್ ಹೇಗೆ?: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ 1, 2 ಮತ್ತು 3ರಲ್ಲಿ ಒಟ್ಟಾರೆ 8.72 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದು ಇದರಲ್ಲಿ7.12 ಲಕ್ಷ ಮಂದಿ ಉತ್ತೀರ್ಣರಾಗುವ ಮೂಲಕ ಶೇ.81.65ರಷ್ಟು ಫಲಿತಾಂಶ ದಾಖಲಾಗಿದೆ. ಆದರೆ, ವರ್ಷಕ್ಕೆ ಮೂರು ಪರೀಕ್ಷೆ ಪರಿಚಯಿಸುವುದಕ್ಕೂ ಹಿಂದಿನ ಸಾಲಿನಲ್ಲಿ (2022-23) ಒಂದು ಮುಖ್ಯ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆಯಲ್ಲಿ ಒಟ್ಟಾರೆ 8.50 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 7.46 ಲಕ್ಷ ಮಂದಿ ಪಾಸಾಗುವ ಮೂಲಕ ಶೇ.87ರಷ್ಟು ಫಲಿತಾಂಶ ಬಂದಿತ್ತು. ತನ್ಮೂಲಕ ಈ ಬಾರಿಯ ಕ್ರೋಢೀಕೃತ ಫಲಿತಾಂಶ ಶೇ.6ರಷ್ಟು ಇಳಿಕೆಯಾಗಿ ಮೂರು ಪರೀಕ್ಷೆಗಳ ಪ್ರಯೋಗ ಯಶಸ್ವಿಯಾಗಿಲ್ಲ ಎನ್ನುವುದು ತಜ್ಞರ ವಿಶ್ಲೇಷಣೆಯಾಗಿದೆ.

ವಾಲ್ಮೀಕಿ ಕೇಸ್‌ನಲ್ಲಿ ನಾಗೇಂದ್ರಗೆ ದೊಡ್ಡ ಶಿಕ್ಷೆಯಾಗಲಿದೆ: ಜನಾರ್ದನ ರೆಡ್ಡಿ

ದ್ವಿತೀಯ ಪಿಯು ಪಾಸ್ ಹೇಗೆ?: ಈ ಸಾಲಿನ ದ್ವಿತೀಯ ಪಿಯುಸಿಯ ಪರೀಕ್ಷೆ 1, 2 ಮತ್ತು 3ರಲ್ಲಿ ಒಟ್ಟಾರೆ 7.04 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 5.98 ಲಕ್ಷ ಮಂದಿ ಉತ್ತೀರ್ಣರಾಗುವ ಮೂಲಕ ಶೇ.84.87ರಷ್ಟು ಫಲಿತಾಂಶ ಬಂದಿದೆ. 2022-23ನೇ ಸಾಲಿನ ಒಂದು ವಾರ್ಷಿಕ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷಾ ವ್ಯವಸ್ಥೆಯಲ್ಲಿ 7.20 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 5.74 ಲಕ್ಷಮಂದಿ ತೇರ್ಗಡೆಯಾಗುವ ಮೂಲಕ ಶೇ.80ರಷ್ಟು ಫಲಿತಾಂಶ ದಾಖಲಾಗಿತ್ತು. ಇದರಿಂದ ಈ ಬಾರಿ ಶೇ.4ರಷ್ಟು ಫಲಿತಾಂಶ ಏರಿಕೆಯೊಂದಿಗೆ ಮೂರು ಪರೀಕ್ಷೆಗಳ ಪ್ರಯೋಗ ಕೊಂಚ ಫಲ ಕೊಟ್ಟಿದೆ ಎಂದು ವಿಶ್ಲೇಷಿಸಲಾಗಿದೆ.

click me!