ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿರುವುದರಿಂದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಬಗ್ಗೆ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು, (ಏ.25): ಇದೇ ಏಪ್ರಿಲ್ 28 ರಿಂದ ಪ್ರಾರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಇಂದು (ಭಾನುವಾರ) ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೋವಿಡ್19 ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ವಾರ್ಷಿಕ ಪರೀಕ್ಷೆಗಳು ಮುಗಿದ ಕೂಡಲೇ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ದ್ವಿತೀಯ PUC ಪ್ರಾಕ್ಟಿಕಲ್ ಪರೀಕ್ಷೆ: ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಜನಪ್ರತಿನಿಧಿಗಳು, ಪೋಷಕರುಗಳೊಂದಿಗೆ ಅಧಿಕಾರಿ ಹಂತದ ಸುದೀರ್ಘ ಚರ್ಚೆಗಳನ್ನು ನಡೆಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷೆ ಮುಂದೂಡಿರುವ ಕಾರಣ ವಿದ್ಯಾರ್ಥಿಗಳುವಿಚಲಿತರಾಗದೇ ಏಕಾಗ್ರತೆಯಿಂದ ವಾರ್ಷಿಕ ಪರೀಕ್ಷೆಗಳಿಗೆ ಸಿದ್ಧತೆಯನ್ನು ಮುಂದುವರೆಸಬೇಕೆಂದು ಸಚಿವರು ಕಿವಿಮಾತು ಹೇಳಿದ್ದಾರೆ.
ಏ.28ರಿಂದ ಮೇ 18ರ ವರೆಗೆ ಪ್ರಾಕ್ಟಿಕಲ್ ಪರೀಕ್ಷೆಗಳನ್ನ ನಡೆಸಲು ತೀರ್ಮಾನಿಸಲಾಗಿತ್ತು. ಇದಕ್ಕೆ ಕೋವಿಡ್ ಮಾರ್ಗಸೂಚಿಯನ್ನು ಸಹ ಪ್ರಕಟಿಸಲಾಗಿತ್ತು. ಆದ್ರೆ, ಕೊರೋನಾ ಹೆಚ್ಚಾಗುತ್ತಿರುವುದರಿಂದ ಮುಂಜಾಗ್ರತಾಕ್ರಮವಾಗಿ ಶಿಕ್ಷಣ ಇಲಾಖೆ ಈ ಪರೀಕ್ಷೆಗಳನ್ನು ಮುಂದೂಡಿದೆ.