ಹಾವೇರಿ: ಶಿಥಿಲಾವಸ್ಥೆಯಲ್ಲಿ 2565 ಶಾಲಾ ಕೊಠಡಿಗಳು; ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ!

By Kannadaprabha News  |  First Published May 25, 2023, 12:08 PM IST
  • ಶಿಥಿಲಾವಸ್ಥೆಯಲ್ಲಿ 2565 ಶಾಲಾ ಕೊಠಡಿಗಳು!
  • ಸೋಮವಾರದಿಂದಲೇ ಶಾಲೆ ಪುನಾರಂಭ
  • ಸೌಲಭ್ಯಗಳ ಕೊರತೆಯಿಂದ ನಲುಗುತ್ತಿರುವ ಶಾಲೆಗಳು
  • ಮಳೆ, ಗಾಳಿಗೆ ಹೆಂಚು ಹಾರಿ ಹೋಗಿ ಸಮಸ್ಯೆ/

ನಾರಾಯಣ ಹೆಗಡೆ

ಹಾವೇರಿ (ಮೇ.25) : ಶಾಲೆ ಪುನಾರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂಬುದು ಅನೇಕ ಪಾಲಕರ ಅಭಿಪ್ರಾಯವಾಗಿದ್ದರೂ ಜಿಲ್ಲೆಯ ಸರ್ಕಾರಿ ಶಾಲೆಗಳ ಸ್ಥಿತಿ ಮಾತ್ರ ಸುಧಾರಿಸುತ್ತಿಲ್ಲ. ಮಳೆ-ಗಾಳಿಗೆ ಹೆಂಚು ಹಾರಿ ಹೋಗಿರುವುದು, ಗೋಡೆ ಕುಸಿದಿರುವುದು, ಮೇಲ್ಚಾವಣಿ ಬಿದ್ದಿರುವುದು ಹೀಗೆ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಶಾಲಾ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. ಜತೆಗೆ, ಮೂಲಸೌಲಭ್ಯಗಳ ಕೊರತೆಯೂ ಎದ್ದು ಕಾಣುತ್ತಿದೆ.

Latest Videos

undefined

ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವರೆಗೆ ಸುಮಾರು 1.60 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಟ್ಟು 1160 ಪ್ರಾಥಮಿಕ ಹಾಗೂ 141 ಪ್ರೌಢಶಾಲೆಗಳು ಸೇರಿದಂತೆ 1301 ಶಾಲೆಗಳಿವೆ. ಇವುಗಳಲ್ಲಿ ಒಟ್ಟು 7761 ತರಗತಿ ಕೊಠಡಿಗಳಿವೆ. ಆದರೆ, ಪ್ರತಿ ವರ್ಷ ಅತಿವೃಷ್ಟಿ, ಬಿರುಗಾಳಿ ಸೇರಿದಂತೆ ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಹಲವು ಶಾಲಾ ಕೊಠಡಿಗಳು ಹಾಳಾಗಿವೆ. ಇನ್ನು ಕೆಲವು ಅನೇಕ ವರ್ಷಗಳಿಂದ ದುರಸ್ತಿಯನ್ನೇ ಕಾಣದೇ ಶಿಥಿಲಾವಸ್ಥೆಗೆ ತಲುಪಿವೆ. ಇದರಿಂದ ಮಕ್ಕಳಿಗೆ ತರಗತಿ ಕೊರತೆ ಎದುರಾಗುತ್ತಿದ್ದು, ಗುಣಮಟ್ಟದ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ.

ಕಾರ್ಮಿಕರ ಮಕ್ಕಳೇ ಹೆಚ್ಚಿರುವ ರಾಜ್ಯದ ಸರ್ಕಾರಿ ಶಾಲೆಗೆ ಕಟ್ಟಡ ಕುಸಿತದ ಭೀತಿ, ಶಿಕ್ಷಕರ ಕೊರತೆ!

ಶಿಥಿಲಾವಸ್ಥೆಯಲ್ಲಿ 2565 ಕೊಠಡಿ:

ಜಿಲ್ಲೆಯ 7761 ತರಗತಿ ಕೋಣೆಗಳ ಪೈಕಿ 5196 ಕೊಠಡಿಗಳು ಮಾತ್ರ ಸುಸ್ಥಿತಿಯಲ್ಲಿವೆ. ಇನ್ನುಳಿದ ಸುಮಾರು ಎರಡೂವರೆ ಸಾವಿರ ಕೊಠಡಿಗಳು ಸಣ್ಣಪುಟ್ಟದುರಸ್ತಿ, ಮೇಜರ್‌ ರಿಪೇರಿಗೆ ಕಾಯುತ್ತಿವೆ. ಅವುಗಳಲ್ಲಿ ಕಳೆದ ವರ್ಷ ಎನ್‌ಡಿಆರ್‌ಎಫ್‌, ವಿವೇಕ ಯೋಜನೆ, ಜಿಪಂ ಸೇರಿದಂತೆ ವಿವಿಧ ಯೋಜನೆಗಳಲ್ಲಿ 839 ಶಾಲೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

ಚುನಾವಣಾ ನೀತಿ ಸಂಹಿತೆ ಎಂಬ ಸಬೂಬು ಹೇಳುತ್ತ ಸಣ್ಣಪುಟ್ಟದುರಸ್ತಿಯನ್ನೂ ಮಾಡದೇ ಈಗ ಮಳೆಗಾಲ ಶುರುವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚರಗೊಳ್ಳುತ್ತಿದ್ದಾರೆ. ಅನಿವಾರ್ಯವಾಗಿ ಒಂದೇ ಕೊಠಡಿಯಲ್ಲಿ ಮೂರು ನಾಲ್ಕು ತರಗತಿಗಳ ಮಕ್ಕಳನ್ನು ಕೂರಿಸಿ ಕಲಿಸುವ ಪರಿಸ್ಥಿತಿ ಪ್ರತಿ ವರ್ಷದಂತೆ ಈ ಸಲವೂ ಮುಂದುವರಿಯಲಿದೆ. ಇತ್ತೀಚೆಗೆ ಬಿದ್ದ ಮಳೆಗೆ ಕೆಲವು ಶಾಲೆಗಳ ಮೇಲ್ಚಾವಣಿ ಹಾರಿ ಹೋಗಿವೆ. ಸವಣೂರು, ಹಾನಗಲ್ಲ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಶಾಲೆಗಳಿಗೆ ಹಾನಿಯಾಗಿದೆ.

ಸೋರುತಿಹುದು:

ಅನೇಕ ವರ್ಷಗಳ ಹಿಂದೆ ನಿರ್ಮಿಸಿದ್ದ ಸರ್ಕಾರಿ ಶಾಲೆಗಳ ಕಟ್ಟಡಗಳು ಹೆಂಚು, ತಗಡಿನಿಂದ ಕೂಡಿವೆ. ಈ ಹೆಂಚುಗಳು ಮಳೆ ಗಾಳಿಗೆ ಹಾರಿಹೋಗಿದ್ದರೂ ಅದನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುವ ಕಾರ್ಯವೂ ಆಗುತ್ತಿಲ್ಲ. ಇದರಿಂದಾಗಿ ಹೆಂಚಿನ ಕಟ್ಟಡಗಳು ಮಳೆ ಬಂದರೆ ಸೋರುವುದು ಸಾಮಾನ್ಯವಾಗಿವೆ.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆರ್‌ಸಿಸಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಗುಣಮಟ್ಟದ ಕೊರತೆಯಿಂದಾಗಿ ಕಟ್ಟಿದ ವರ್ಷದಿಂದಲೇ ಬಿರುಕು ಬಿಟ್ಟು ಅವು ಸೋರುವಂತಾಗಿವೆ. ಕೆಲವು ಶಾಲೆಗಳಲ್ಲಿ ಸಿಮೆಂಟ್‌ ತುಂಡುಗಳು ಮಕ್ಕಳ ತಲೆಮೇಲೆ ಬೀಳುತ್ತಿರುವ ನಿದರ್ಶನಗಳು ಸಾಕಷ್ಟಿವೆ. ಅಂಥ ಅಪಾಯಕರ ಕಟ್ಟಡಗಳಲ್ಲೇ ಅನಿವಾರ್ಯವಾಗಿ ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ.

ದುರಸ್ತಿ ಭಾಗ್ಯ:

2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರವಾಹದಿಂದ ನೂರಾರು ಶಾಲೆಗಳಿಗೆ ಹಾನಿಯಾಗಿತ್ತು. ಎನ್‌ಡಿಆರ್‌ಎಫ್‌ ಯೋಜನೆಯಲ್ಲಿ . 13.3 ಕೋಟಿ ಅನುದಾನ ಮಂಜೂರಾಗಿದ್ದು, 339 ಶಾಲೆಗಳಲ್ಲಿ 753 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇನ್ನು ರಾಜ್ಯ ಸರ್ಕಾರದ ವಿವೇಕ ಯೋಜನೆಯಡಿ . 21 ಕೋಟಿ ಅನುದಾನ ಬಿಡುಗಡೆಯಾಗಿದ್ದು, 147 ಶಾಲೆಗಳಲ್ಲಿ 197 ಕೊಠಡಿ ನಿರ್ಮಿಸಲಾಗುತ್ತಿದೆ.

ಹೀಗೆ ಸಣ್ಣ ಪುಟ್ಟದುರಸ್ತಿ, ನಿರ್ಮಾಣ ಸೇರಿದಂತೆ 839 ಶಾಲೆಗಳಲ್ಲಿ . 57.52 ಕೋಟಿ ವೆಚ್ಚದಲ್ಲಿ 1348 ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಕೊಠಡಿ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ವಿವೇಕ ಯೋಜನೆಯಡಿ ಮುಂಜೂರಾದ 147 ಕೊಠಡಿಗಳಲ್ಲಿ 118 ತಳಪಾಯದ ಹಂತದಲ್ಲಿದ್ದರೆ, 19 ಕಾಮಗಾರಿ ಆರಂಭವೇ ಆಗಿಲ್ಲ. 37 ಕೊಠಡಿಗಳು ಚಾವಣಿ ಹಂತಕ್ಕೆ ಬಂದಿವೆ. ಇವು ಪೂರ್ಣಗೊಂಡು ಬಳಕೆಗೆ ಸಿಗುವ ವೇಳೆಗೆ ಬರುವ ಶೈಕ್ಷಣಿಕ ವರ್ಷವೇ ಮುಗಿಯುವ ಸಾಧ್ಯತೆಯಿದೆ.

250 ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವನೆ:

2023-24ನೇ ಶೈಕ್ಷಣಿಕ ಸಾಲಿಗೆ 250 ಕೊಠಡಿ ನಿರ್ಮಾಣಕ್ಕೆ, 350 ಶಾಲೆಗಳ 600 ಕೊಠಡಿ ದುರಸ್ತಿಗೆ ಶಿಕ್ಷಣ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. 638 ಶಾಲೆಗಳಿಗೆ ಬೆಂಚ್‌, ಡೆಸ್‌್ಕ ಸೇರಿದಂತೆ 5000 ಪೀಠೋಪಕರಣ ಅಗತ್ಯವಿದೆ. 250 ಶಾಲೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ. 250 ಅಡುಗೆ ಕೋಣೆ ನಿರ್ಮಾಣಕ್ಕೂ ಬೇಡಿಕೆ ಇಡಲಾಗಿದೆ.

ಆಂಗ್ಲ ಮಾಧ್ಯಮ ಇದ್ದಲ್ಲಿ ಕೊಠಡಿ ಕೊರತೆ:

ಖಾಸಗಿ ಶಿಕ್ಷಣ ಸಂಸ್ಥೆಗಳ ಅಬ್ಬರಕ್ಕೆ ಸರ್ಕಾರಿ ಶಾಲೆಗಳು ನಲುಗುತ್ತಿರುವುದು ಹೊಸದೇನಲ್ಲ. ಮೂಲಭೂತ ಸೌಲಭ್ಯಗಳ ಕೊರತೆಯಿಂದ ಅನೇಕ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಈ ಮಧ್ಯೆ ಅನೇಕ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ, ಎಲ್‌ಕೆಜಿ ತರಗತಿಗಳನ್ನು ನಾಲ್ಕು ವರ್ಷಗಳ ಹಿಂದೆಯೇ ಆರಂಭಿಸಲಾಗಿದೆ. ಆದರೆ, ಅಲ್ಲಿ ತರಗತಿ ಕೋಣೆಗಳಿಲ್ಲದೇ ಸಮಸ್ಯೆ ಎದುರಾಗುತ್ತಿದೆ.

ಇಂಗ್ಲಿಷ್‌ ಮಾಧ್ಯಮ ಇರುವ ಶಾಲೆಗಳಲ್ಲಿ ಒಂದೇ ತರಗತಿಗೆ ಎರಡು ಮಾಧ್ಯಮವಿರುವುದರಿಂದ ಕೊಠಡಿಗಳಿಲ್ಲದೇ ಸಮಸ್ಯೆಯಾಗುತ್ತಿದೆ. ಈ ವರ್ಷ 1ರಿಂದ 5ನೇ ತರಗತಿ ವರೆಗೆ ಆಂಗ್ಲ ಮಾಧ್ಯಮ ಇರಲಿದ್ದು, ಮತ್ತಷ್ಟುಸಮಸ್ಯೆ ನಿಶ್ಚಿತ ಎನ್ನುವುದು ಪಾಲಕರ ಅಭಿಪ್ರಾಯವಾಗಿದೆ. ನೂರಾರು ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಬಾಕಿಯಿದೆ. ಆಟದ ಮೈದಾನ, ಶಾಲೆಗಳಿಗೆ ಕಾಂಪೌಂಡ್‌ ಬೇಡಿಕೆಯಿದೆ. ಬಹುತೇಕ ಎಲ್ಲ ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ಅವು ಬಳಕೆಗೆ ಬಾರದಂತಾಗಿವೆ. ಇವೆಲ್ಲ ಕಾರಣಗಳಿಂದ ಗ್ರಾಮೀಣ ಭಾಗದ ಪಾಲಕರೂ ನಗರದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪರಿಪಾಠ ಹೆಚ್ಚುತ್ತಿದೆ.

ಬಣ್ಣ ನಿಮ್ಮದು ಕುಂಚ ನಮ್ಮದು 'ಅಕ್ಕ ಅನು ಬಳಗ'ದವರ ಕಾರ್ಯ ಶ್ಲಾಘನೀಯ

ಜಿಲ್ಲೆಯಲ್ಲಿ ಅನೇಕ ಶಾಲೆಗಳಲ್ಲಿ ಕೊಠಡಿ ಸಮಸ್ಯೆಯಿದೆ. ಸಣ್ಣಪುಟ್ಟದುರಸ್ತಿ, ಮರುನಿರ್ಮಾಣ ಮಾಡಬೇಕಾದ ಕೊಠಡಿಗಳ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಅನೇಕ ಕೊಠಡಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಶಿಥಿಲಾವಸ್ಥೆ ಇರುವ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸದಂತೆ ಸೂಚಿಸಲಾಗುವುದು.

ಜಗದೀಶ್ವರ್‌, ಡಿಡಿಪಿಐ ಹಾವೇರಿ

click me!