ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶೇ.75ರಷ್ಟು ತರಗತಿ ಹಾಜರಾತಿ ಕಡ್ಡಾಯ. ಆದರೆ, ಈ ಬಾರಿ 26,900 ವಿದ್ಯಾರ್ಥಿಗಳು ನಿಗದಿತ ಹಾಜರಾತಿ ಇಲ್ಲದೆ ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ಮುಖ್ಯ ಪರೀಕ್ಷೆಗೆ ಹಾಜರಾಗಲಾಗದೆ ವಂಚಿತರಾಗಿದ್ದರು
ಬೆಂಗಳೂರು(ಮೇ.25): ಹಾಜರಾತಿ ಕೊರತೆಯಿದ್ದ ಕಾರಣ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯಿಂದ (ಮಾಚ್‌ರ್, 2023) ವಂಚಿತರಾಗಿದ್ದ 26 ಸಾವಿರಕ್ಕೂ ಹೆಚ್ಚು ಶಾಲಾ (ಫ್ರೆಷರ್ಸ್) ವಿದ್ಯಾರ್ಥಿಗಳಿಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಂಡು ಪೂರಕ ಪರೀಕ್ಷೆ ಬರೆಯಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅವಕಾಶ ನೀಡಿದೆ.
ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶೇ.75ರಷ್ಟು ತರಗತಿ ಹಾಜರಾತಿ ಕಡ್ಡಾಯ. ಆದರೆ, ಈ ಬಾರಿ 26,900 ವಿದ್ಯಾರ್ಥಿಗಳು ನಿಗದಿತ ಹಾಜರಾತಿ ಇಲ್ಲದೆ ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ಮುಖ್ಯ ಪರೀಕ್ಷೆಗೆ ಹಾಜರಾಗಲಾಗದೆ ವಂಚಿತರಾಗಿದ್ದರು. ಆ ಎಲ್ಲ ವಿದ್ಯಾರ್ಥಿಗಳು ಖಾಸಗಿ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡು ಈಗಲೇ ಪರೀಕ್ಷೆ ಬರೆದರೆ ಉತ್ತೀರ್ಣರಾಗುವ ಅವಕಾಶ ಹೆಚ್ಚಿರುತ್ತದೆ. ಹಾಗಾಗಿ ಅಂತಹ ಎಲ್ಲ ಮಕ್ಕಳಿಗೆ ಮೇ 26ರ ವರೆಗೆ ಖಾಸಗಿ ಅಭ್ಯರ್ಥಿಗಳಾಗಿ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂ.12ರಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ, ವೇಳಾಪಟ್ಟಿಪ್ರಕಟ
ಜೂನ್ 12ರಿಂದ 29ರವರೆಗೆ ಈ ಬಾರಿಯ ಪೂರಕ ಪರೀಕ್ಷೆ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನೋಂದಣಿ ಶುಲ್ಕವನ್ನು ನೆಫ್ಟ್ ಚಲನ್‌ನಲ್ಲಿ ಭರ್ತಿಮಾಡಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಮೇ 29ರೊಳಗೆ ಜಮೆ ಮಾಡಬೇಕು. ಮಂಡಲಿಯ ಜಾಲತಾಣದ ಶಾಲಾ ಲಾಗಿನ್‌ನಲ್ಲಿ ಅರ್ಹ ವಿದ್ಯಾರ್ಥಿಗಳನ್ನು ನಿಯಮಾನುಸಾರ ನೋಂದಾಯಿಸುವುದು ಶಾಲಾ ಮುಖ್ಯ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ತಿಳಿಸಲಾಗಿದೆ.