ಕನ್ನಡ ವಿವಿ ಅಭಿವೃದ್ಧಿಗೆ 20 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ

By Govindaraj S  |  First Published Apr 17, 2022, 8:57 PM IST

ಸಾಂಪ್ರದಾಯಿಕ ವಿವಿಗಳಿಗಿಂತ ಭಿನ್ನವಾಗಿರುವ ಕನ್ನಡ ಭಾಷೆಗೆ ಸಮೃದ್ಧಿಗೆ ಶ್ರಮಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಮೂಲಸೌಕರ್ಯ ಹಾಗೂ ಇತರ ಚಟುವಟಿಕೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಮುಖ್ಯಮಂತ್ರಿ ವಿವೇಚನಾ ಅನುದಾನದ ಅಡಿ 20 ಕೋಟಿಗಳನ್ನು ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.


ಹೊಸಪೇಟೆ (ಏ.17): ಸಾಂಪ್ರದಾಯಿಕ ವಿವಿಗಳಿಗಿಂತ ಭಿನ್ನವಾಗಿರುವ ಕನ್ನಡ ಭಾಷೆಗೆ ಸಮೃದ್ಧಿಗೆ ಶ್ರಮಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ (Kannada University) ಅಗತ್ಯ ಮೂಲಸೌಕರ್ಯ ಹಾಗೂ ಇತರ ಚಟುವಟಿಕೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಮುಖ್ಯಮಂತ್ರಿ ವಿವೇಚನಾ ಅನುದಾನದ ಅಡಿ 20 ಕೋಟಿಗಳನ್ನು ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು. ಹಂಪಿ ಬಳಿಯ ಕನ್ನಡ ವಿವಿಯಲ್ಲಿ ನೂತನ ಐದು ಕಟ್ಟಡಗಳ ಉದ್ಘಾಟನೆ, 128 ಪುಸ್ತಕಗಳ ಬಿಡುಗಡೆ ಹಾಗೂ ಸಂಚಾರಿ ವಿವಿ ಪುಸ್ತಕ ಮಾರಾಟ ವಾಹನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. 

ವಿವಿಗೆ ಈಗ ಒದಗಿಸಲಾಗುವ ಅನುದಾನ ಬಳಸಿಕೊಂಡು ವಿದ್ಯಾರ್ಥಿಗಳ ಶಿಷ್ಯವೇತನ, ಹೊರಗುತ್ತಿಗೆ ಸಿಬ್ಬಂದಿ ಬಾಕಿ ಇರುವ ವೇತನ ಹಾಗೂ ತುರ್ತು ಅಗತ್ಯ ಕೆಲಸಗಳಿಗೆ ಬಳಸಿಕೊಳ್ಳುವಂತೆ ನಿರ್ದೇಶನ ನೀಡಿದರು. ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಮೂಲಸೌಕರ್ಯ ಹಾಗೂ ಇನ್ನಿತರ ಚಟುವಟಿಕೆಗಾಗಿ ಕುಲಪತಿ ಡಾ. ಸ.ಚಿ. ರಮೇಶ ಅವರು ತುರ್ತಾಗಿ 80 ಕೋಟಿಗಳನ್ನು ಒದಗಿಸುವಂತೆ ಬೇಡಿಕೆ ಇಟ್ಟಿದ್ದು, ಈ ಅನುದಾನವನ್ನು ಹಂತಹಂತವಾಗಿ ಜಿಲ್ಲಾ ಖನಿಜ ನಿಧಿ ಮತ್ತು ಸರ್ಕಾರದ ಅನುದಾನಡಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

Tap to resize

Latest Videos

Karnataka Politics: ಕಾಂಗ್ರೆಸ್‌ ಪಾದಯಾತ್ರೆ ಯಾವ ಪುರುಷಾರ್ಥಕ್ಕೆ?: ಸಿಎಂ ಬೊಮ್ಮಾಯಿ

ಕನ್ನಡ ವಿವಿಯು ಕನ್ನಡ ಭಾಷೆ ಸಮೃದ್ಧಿಗೊಳಿಸುವ ಮತ್ತು ಶಕ್ತಿ ತುಂಬುವ ಕೆಲಸ ಮಾಡುವ ಕಾಯಕದಲ್ಲಿ ಇನ್ನಷ್ಟುಪರಿಣಾಮಕಾರಿಯಾಗಿ ಮುಂದುವರಿಯಲಿ. ಕನ್ನಡ ವಿವಿಯ 10 ವಿಸ್ತರಣಾ ಕೇಂದ್ರಗಳು ರಾಜ್ಯದ 30 ಜಿಲ್ಲೆಗಳಲ್ಲಿ ತಲಾ 3 ಜಿಲ್ಲೆಗಳನ್ನು ಒಂದೊಂದು ವಿಸ್ತರಣಾ ಕೇಂದ್ರಗಳು ಕನ್ನಡ ಪಸರಿಸುವ, ಕನ್ನಡದ ವಿವಿಧ ಆಯಾಮಗಳಲ್ಲಿ ಸಂಶೋಧಿಸುವ ಮತ್ತು ಅಧ್ಯಯನ ನಡೆಸುವ ಕೆಲಸ ಮಾಡಲಿ ಎಂದು ಅವರು ಸಲಹೆ ನೀಡಿದರು.

ಎಂ.ಪಿ. ಪ್ರಕಾಶ ಅಧ್ಯಯನ ಪೀಠ ಸ್ಥಾಪನೆ: ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಗೆ ಶ್ರಮಿಸಿದ ಹಾಗೂ ಕನ್ನಡ-ಕನ್ನಡ ಸಂಸ್ಕೃತಿಗೆ ಸದಾ ದುಡಿಯುತ್ತಿದ್ದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಅವರ ಹೆಸರಿನಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಣೆ ಮಾಡಿದರು. ಎಂ.ಪಿ. ಪ್ರಕಾಶ ಅಧ್ಯಯನ ಪೀಠ ಹೇಗಿರಬೇಕು ಮತ್ತು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದರ ಯೋಜನಾ ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಕುಲಪತಿಗಳಿಗೆ ಸೂಚಿಸಿದರು. ವಿಶ್ವ ಭೂಪಟದಲ್ಲಿ ಕನ್ನಡ ಎಲ್ಲಿರಬೇಕು? 

ಕನ್ನಡಿಗರು ಎಲ್ಲಿ ನಿಲ್ಲಬೇಕು? ಅನ್ನುವುದನ್ನು ನಿರ್ಧರಿಸುವ ಕೆಲಸ ಕನ್ನಡ ವಿವಿ ಮಾಡಬೇಕು; ಪದವಿಗಾಗಿ ಕಟ್‌ ಆ್ಯಂಡ್‌ ಪೇಸ್ಟ್‌ ಮಾಡುವ ಕೆಲಸ ಬೇಡ ಎಂದು ಅವರು ಹೇಳಿದರು. ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ- ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳ ಸಚಿವರ ಡಾ. ಸಿ.ಎನ್‌. ಅಶ್ವಥ್‌ ನಾರಾಯಣ ಮಾತನಾಡಿದರು. ಸಂಚಾರಿ ಪುಸ್ತಕ ಮಾರಾಟ ವಾಹನವನ್ನು ವಿವಿಗೆ ದೇಣಿಗೆಯಾಗಿ ನೀಡಿದ ಬಲ್ಡೋಟ ಗ್ರೂಪ್‌ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ನರೇಂದ್ರಕುಮಾರ್‌ ಬಲ್ಡೋಟ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೌರವಿಸಿದರು.

ಸಾರಿಗೆ, ಪರಿಶಿಷ್ಟವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಮುಜರಾಯಿ, ಹಜ್‌ ಮತ್ತು ವಕ್ಫ್ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಸೋಮಶೇಖರ್‌ ರೆಡ್ಡಿ, ವೈ.ಎಂ. ಸತೀಶ್‌, ಕುಲಪತಿ ಡಾ. ಸ.ಚಿ. ರಮೇಶ, ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌, ಎಸ್ಪಿ ಡಾ. ಅರುಣ್‌ ಎಸ್‌.ಕೆ., ಕುಲಸಚಿವ ಡಾ. ಎ. ಸುಬ್ಬಣ್ಣ ರೈ, ಪ್ರಸಾರಂಗ ವಿಭಾಗದ ನಿರ್ದೇಶಕಿ ಡಾ. ಶೈಲಜಾ ಎಂ. ಹಿರೇಮಠ, ವಿವಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಜೆ.ಎಸ್‌. ನಂಜಯ್ಯನವರ್‌ ಇನ್ನಿತರರಿದ್ದರು.

ಕಾಂಗ್ರೆಸ್‌ ಸತ್ಯ ಎದುರಿಸುವ ದಿನ ಬರಲಿದೆ: ವಿಪಕ್ಷದ ವಿರುದ್ಧ ಬೊಮ್ಮಾಯಿ ಕಿಡಿ

ನೂತನ ಕಟ್ಟಡಗಳು: ಕನ್ನಡ ವಿಶ್ವವಿದ್ಯಾಲಯದಲ್ಲಿ ನೂತನ ಕಟ್ಟಡಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಉದ್ಘಾಟಿಸಿದರು. ವಿವಿಯ ಮಂಟಪ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡಗಳಾದ ಓನಕೆ ಓಬವ್ವ ಅಧ್ಯಯನ ಕೇಂದ್ರ, ವಿದ್ಯಾರ್ಥಿಗಳು ಎರಡು ವಸತಿ ನಿಲಯಗಳು, ಪ್ರಸಾರಂಗದ ನವೀಕೃತ ಚಿತ್ತಾರ ಕಟ್ಟಡ, ಪತ್ರಿಕೋದ್ಯಮ ವಿಭಾಗದ ಕಟ್ಟಡಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕನ್ನಡ ವಿವಿಯ 128 ಪುಸ್ತಕಗಳನ್ನು ಬಿಡುಗಡೆಗೊಳಿಸಿದ ಮುಖ್ಯಮಂತ್ರಿ, ವಿವಿಯ ಸಂಚಾರ ಪುಸ್ತಕ ಮಾರಾಟ ವಾಹನವನ್ನು ಲೋಕಾರ್ಪಣೆಗೊಳಿಸಿದರು.

click me!