ಮಂಡ್ಯ ವಿಶ್ವವಿದ್ಯಾಲಯ ಮಾದರಿಯಾಗಿ ಬೆಳೆಯಲಿ: ಅಶ್ವತ್ಥನಾರಾಯಣ

By Govindaraj S  |  First Published Apr 17, 2022, 1:14 PM IST

ಮಂಡ್ಯ ವಿಶ್ವವಿದ್ಯಾಲಯವನ್ನು ಉತ್ಕೃಷ್ಟಮಟ್ಟಕ್ಕೆ ಬೆಳೆಸಬೇಕಾಗಿದ್ದು, ಸ್ಥಳೀಯ ಕೃಷಿ ಮತ್ತು ಕೃಷಿಕ ಸಮುದಾಯದ ಸಬಲೀಕರಣಕ್ಕೆ ನೆರವಾಗುವಂತಹ ತಂತ್ರಜ್ಞಾನದ ಅನ್ವಯಿಕತೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ಕೊಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.


ಮಂಡ್ಯ (ಏ.17): ಮಂಡ್ಯ ವಿಶ್ವವಿದ್ಯಾಲಯವನ್ನು (Mandya University) ಉತ್ಕೃಷ್ಟಮಟ್ಟಕ್ಕೆ ಬೆಳೆಸಬೇಕಾಗಿದ್ದು, ಸ್ಥಳೀಯ ಕೃಷಿ (Agriculture) ಮತ್ತು ಕೃಷಿಕ ಸಮುದಾಯದ ಸಬಲೀಕರಣಕ್ಕೆ ನೆರವಾಗುವಂತಹ ತಂತ್ರಜ್ಞಾನದ (Technology) ಅನ್ವಯಿಕತೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ಕೊಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ (Dr CN Ashwath Narayan) ಹೇಳಿದರು. ವಿಶ್ವವಿದ್ಯಾಲಯವನ್ನು ಗುಣಮಟ್ಟದೊಂದಿಗೆ ಸ್ಥಳೀಯ ಪರಿಸರಕ್ಕೆ ಪೂರಕವಾಗಿ ಬೆಳೆಸಲು ಏನೇನು ಮಾಡಬೇಕು ಎನ್ನುವುದನ್ನು ಕುರಿತು ವಿವಿ ಕುಲಪತಿ ಪ್ರೊ.ಪುಟ್ಟರಾಜು (Puttaraju) ಮತ್ತು ಎಲ್ಲಾ ವಿಭಾಗಗಳ ಮುಖ್ಯಸ್ಥರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಬಳಿಕ ಮಾತನಾಡಿದ ಅವರು, ‘ವಿಶ್ವವಿದ್ಯಾಲಯಗಳು ಬೇರಾವುದೋ ಮಾದರಿಗಳನ್ನು ಕುರುಡಾಗಿ ಅನುಸರಿಸುವುದು ಸರಿಯಲ್ಲ. ಬದಲಿಗೆ, ಸಮಾಜಕ್ಕೆ ಪೂರಕವಾದ ಶಿಕ್ಷಣ ಕ್ರಮವನ್ನು ಒದಗಿಸಬೇಕು. ಇದರ ಲಾಭವು ಸ್ಥಳೀಯ ಯುವಜನರಿಗೆ ಸಿಗುವಂತೆ ಮಾಡಲು ಕೈಗಾರಿಕೆಗಳೊಂದಿಗೆ ಸಹಯೋಗ ಮತ್ತು ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಟ್ವಿನ್ನಿಂಗ್‌ ಪದವಿ ಕಾರ್ಯಕ್ರಮಗಳಿಗೆ ಆದ್ಯತೆ ಕೊಡಬೇಕು’ ಎಂದರು. ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯವಿದ್ದು, ಕೃಷಿಕರು ಕಬ್ಬಿನ ಬೆಳೆಯನ್ನೇ ಆಶ್ರಯಿಸಿದ್ದಾರೆ. ಇದರಲ್ಲಿ ಹೆಚ್ಚಿನ ಇಳುವರಿ, ಸಿಹಿಯ ಅಂಶ, ನೀರಿನ ಮಿತ ಬಳಕೆ ಇವೆಲ್ಲವನ್ನೂ ಸಾಧಿಸುವಂತಹ ತಂತ್ರಜ್ಞಾನಗಳನ್ನು ಮಂಡ್ಯ ವಿವಿ ಪರಿಚಯಿಸಬೇಕು. ಈ ಗುರಿಗಳನ್ನೆಲ್ಲಾ ತಲುಪಲು ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳನ್ನು ರೂಪಿಸಬೇಕು ಎಂದು ನುಡಿದರು.

Tap to resize

Latest Videos

Karnataka Politics: ಕುಮಾರಸ್ವಾಮಿ ಯಾರನ್ನೂ ಸಿಎಂ ಮಾಡೋಲ್ಲ: ಅಶ್ವತ್ಥನಾರಾಯಣ

ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆ ಅಗತ್ಯ: ವಿಚಾರ ವಿನಿಮಯದ ಒಂದು ಹಂತದಲ್ಲಿ ಕುಲಪತಿ ಪುಟ್ಟರಾಜು ಅವರು, ವಿಶ್ವವಿದ್ಯಾನಿಲಯದ ವತಿಯಿಂದ ಎಂಜಿನಿಯರಿಂಗ್‌ ಕಾಲೇಜನ್ನು ಸ್ಥಾಪಿಸುವ ಅಗತ್ಯವಿದೆ ಎಂದರು. ಆದರೆ ಸಚಿವರು, ‘ಈಗಾಗಲೇ ಇರುವ ಇಂಜಿನಿಯರಿಂಗ್‌ ಕಾಲೇಜುಗಳಲ್ಲೇ ಸಾವಿರಾರು ಸೀಟುಗಳು ಖಾಲಿ ಉಳಿದಿವೆ. ಆದ್ದರಿಂದ ಅದರ ಅಗತ್ಯವಿಲ್ಲ. ಇದರ ಬದಲು, ಸ್ಥಳೀಯ ಉದ್ದಿಮೆಗಳನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವಿಶ್ವವಿದ್ಯಾನಿಲಯಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನೂ ಹಂತಹಂತವಾಗಿ ನೀಡಲಾಗುವುದು. ಸದ್ಯಕ್ಕೆ, ಮೈಸೂರು ವಿಶ್ವವಿದ್ಯಾನಿಲಯದ ಪ್ರಯೋಗಾಲಯಗಳನ್ನು ಉಪಯೋಗಿಸಿಕೊಳ್ಳಲು ಅನುಕೂಲ ಕಲ್ಪಿಸಿ ಕೊಡಲಾಗುವುದು. ಜತೆಗೆ, 1948ರಿಂದಲೂ ಅಸ್ತಿತ್ವದಲ್ಲಿರುವ ಈ ಪ್ರತಿಷ್ಠಿತ ಕಾಲೇಜಿನಲ್ಲಿ ಹಳೆಯ, ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸಿ, ಸಿಎಸ್‌ಆರ್‌ ಉಪಕ್ರಮದಡಿ ಅವರಿಂದ ದೇಣಿಗೆಯನ್ನು ಪಡೆದುಕೊಳ್ಳುವ ಬಗ್ಗೆ ಕಾರ್ಯಪ್ರವೃತ್ತವಾಗಬೇಕು ಎಂದು ಅಶ್ವತ್ಥನಾರಾಯಣ ಸೂಚಿಸಿದರು.

ರಚನಾತ್ಮಕ ತಂತ್ರ ಅನುಸರಿಸಿ: ಚರ್ಚೆಯ ಸಂದರ್ಭದಲ್ಲಿ ಪ್ರತಿ ವಿಭಾಗಗಳ ಮುಖ್ಯಸ್ಥರೂ ವಿವಿ ಅಭಿವೃದ್ಧಿಗೆ ತಾವು ಹೊಂದಿರುವ ಆಲೋಚನೆಗಳನ್ನು ಸಚಿವರೊಂದಿಗೆ ಹಂಚಿಕೊಂಡರು. ಹಾಗೆಯೇ ಸಚಿವರೂ ಸಹ ವಿಭಾಗವಾರು ಕ್ರಮದಲ್ಲಿ ಹಮ್ಮಿಕೊಂಡಿರುವ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳೇನೇನು ಎಂದು ಕುತೂಹಲದಿಂದ ಪ್ರಶ್ನಿಸಿ ಉತ್ತರ ಪಡೆದರು. ಅಲ್ಲದೆ, ಹೆಚ್ಚಿನ ವಿದ್ಯಾರ್ಥಿಗಳಲ್ಲಿರುವ ಕೀಳರಿಮೆಯನ್ನು ತೊಡೆದು ಹಾಕಲು ರಚನಾತ್ಮಕ ತಂತ್ರಗಳನ್ನು ಅನುಸರಿಸಬೇಕು ಎಂದು ಹೇಳಿದರು.

ಮಣ್ಣಿನ ಮಗ ಎಚ್‌ಡಿಕೆ ಒಮ್ಮೆಯಾದರೂ ಕೃಷಿ ಸಚಿವರಾಗಿದ್ದಾರಾ? ಅಶ್ವಥ್ ನಾರಾಯಣ ಪ್ರಶ್ನೆ

ಮೈಸೂರು ವಿವಿಯಿಂದ ನೆರವಿನ ಭರವಸೆ: ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ಮಂಡ್ಯ ವಿಶ್ವವಿದ್ಯಾನಿಲಯನ್ನು ಸದೃಢವಾಗಿ ಬೆಳೆಸಲು ಅಗತ್ಯ ನೆರವು ನೀಡುವಂತೆ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತಕುಮಾರ್‌ ಅವರಿಗೆ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೂಚಿಸಿದರು. ಇದಕ್ಕೆ ಅವರು ಕೂಡ ಸಹಮತ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾತನಾಡಿ, ಹೊಸ ವಿಶ್ವವಿದ್ಯಾನಿಲಯವೊಂದು ಗಟ್ಟಿಯಾಗಿ ನೆಲೆಗೊಳ್ಳಬೇಕಾದರೆ ಹಲವು ರೀತಿ-ನೀತಿಗಳಿವೆ. ಹೊಸತರಲ್ಲಿ ಇಂತಹ ಸವಾಲುಗಳು ಅನಿವಾರ್ಯ ಮತ್ತು ಸಹಜ. ಮೈಸೂರು ವಿವಿ ಈ ನಿಟ್ಟಿನಲ್ಲಿ ತನ್ನ ಅನುಭವವನ್ನು ಮುಕ್ತವಾಗಿ ಹಂಚಿಕೊಳ್ಳಲಿದೆ ಎಂದರು.

click me!