SSLC ಪರೀಕ್ಷೆ ಬಗ್ಗೆ ಪ್ರಮುಖ ಮಾಹಿತಿ ತಿಳಿಸಿದ ಸಚಿವ ಸುರೇಶ್ ಕುಮಾರ್

By Suvarna NewsFirst Published Jun 24, 2020, 6:39 PM IST
Highlights

ಕೊರೋನಾ ಲಾಕ್‌ಡೌನ್‌ನಿಂದ ಮುಂದೂಡಲ್ಪಟ್ಟಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಜೂನ್ 25ರಿಂದ ಆರಂಭವಾಗಲಿದ್ದು, ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಅದು ಈ ಕೆಳಗಿನಂತಿದೆ.

ಬೆಂಗಳೂರು, (ಜೂನ್.24): ನಾಳೆ ಅಂದ್ರೆ ಜೂನ್ 25ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌ ಸುರೇಶ್ ಅವರು ಸುದ್ದಿಗೋಷ್ಠಿ ನಡೆಸಿದ್ದು, ಪರೀಕ್ಷೆ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನಿಡಿದರು.
 
ಈ ಬಗ್ಗೆ ಇಂದು (ಬುಧವಾರ) ಸುದ್ದಿಗೋಷ್ಠಿ ನಡೆಸಿದ್ದು, ರಾಜ್ಯಾದ್ಯಂತ ಒಟ್ಟು 8,48,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯದಲ್ಲಿ 2,879 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಾಗುತ್ತಿದೆ. ವಿಶೇಷವಾಗಿ ನಮ್ಮ ತಾಂತ್ರಿಕ ಸಲಹಾ ಸಮಿತಿ ಏನು ಮಾರ್ಗ ದರ್ಶನ ಮಾಡಿದೇ, ಎಸ್ ಒಪಿ ಪ್ರಕಾರವಾಗಿ ಅತ್ಯಂತ ಹೆಚ್ಚಿನ ಆದ್ಯತೆಯನ್ನು ಮಕ್ಕಳ ಸುರಕ್ಷತೆಗೆ ಕೊಟ್ಟು ಪರೀಕ್ಷೆ ನಡೆಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸೋಷಿಯಲ್ ಮೀಡಿಯಾದಲ್ಲಿ SSLC ಪ್ರಶ್ನೆ ಪತ್ರಿಕೆ ಲೀಕ್, ಸಚಿವರಿಂದ ಸ್ಪಷ್ಟನೆ

ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಕಡ್ಡಾಯ

ಈ ಮೊದಲು ಒಂದು ಕೊಠಡಿಯಲ್ಲಿ 30 ರಿಂದ 32 ವಿದ್ಯಾರ್ಥಿಗಳು ಕೂರುತ್ತಿದ್ದರು. ಆದ್ರೇ ಈ ಬಾರಿ ಒಂದು ಕೊಠಡಿಯಲ್ಲಿ 18 ವಿದ್ಯಾರ್ಥಿಗಳು ಮಾತ್ರ ಬರೆಯಲಿದ್ದಾರೆ. ದೊಡ್ಡ ಕೊಠಡಿಯಾದ್ರೆ 20 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮುನ್ನಾ ದೇಹದ ತಾಪಮಾನವನ್ನು ಪರೀಕ್ಷೆ ಮಾಡಲಾಗುತ್ತದೆ. ಒಂದು ವೇಳೆ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯ ದೈಹಿಕ ತಾಪಮಾನ ಹೆಚ್ಚಾಗಿದ್ದರೇ ಅವರನ್ನು ಪ್ರತ್ಯೇಕ ಕೊಠಿಡಿಯಲ್ಲಿ ಇರಿಸಿ, ಪರೀಕ್ಷೆ ಬರೆಸಲಾಗುತ್ತದೆ. ಕಡ್ಡಾಯವಾಗಿ ಮಾಸ್ಕ್ ಧರಿಸೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಮಾಸ್ಕ್ ಕೂಡ ಉಚಿತವಾಗಿ ನೀಡಲಾಗುತ್ತದೆ ಎಂದರು.

ಒಂದುವರೆ ಲಕ್ಷ ಸಿಬ್ಬಂದಿ
ಒಟ್ಟಾರೆಯಾಗಿ ನಮ್ಮ ರಾಜ್ಯದಲ್ಲಿ 5,755 ಆರೋಗ್ಯ ತಪಾಸಣಾ ಕೌಂಟರ್ ಗಳನ್ನು ಮಾಡಲಾಗಿದೆ. ಅದು 200 ಮಕ್ಕಳಿಗೆ ಒಂದರಂತೆ ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಮಾಡಲಾಗಿದೆ. ಇಂತಹ ಪರೀಕ್ಷೆಯನ್ನು ಸುರಕ್ಷಿತವಾಗಿ ನೆಡಸುವ ಸಲುವಾಗಿ ನಿಯೋಜನೆಗೊಂಡಿರುವಂತ ಸಿಬ್ಬಂದಿಗಳ ಸಂಖ್ಯೆ ಒಂದುವರೆ ಲಕ್ಷ. ಇದರಲ್ಲಿ ಗೃಹ ಇಲಾಖೆಯ ಪೊಲೀಸ್ ಸಿಬ್ಬಂದಿ, ಸಾರಿಗೆ ಇಲಾಖೆಯ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿದ್ದಾರೆ ಎಂದು ಮಾಹಿತಿ ನೀಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಾರ್ಗಸೂಚಿ ಪ್ರಕಟಿಸಿದ ಶಿಕ್ಷಣ ಇಲಾಖೆ

ಕಳೆದ ಪಿಯು ಪರೀಕ್ಷೆಯ ವೇಳೆ ಕೆಲ ಕೇಂದ್ರಗಳಲ್ಲಿ ನೂಕು ನುಗ್ಗಲು ಆಗಿತ್ತು. ಹೀಗಾಗಿ ಅಂತಹ ತಪ್ಪು ಮರುಕಳಿಸದಂತೆ ಕಾರಣ ಏನು ಎಂಬುದಾಗಿ ತಿಳಿದುಕೊಂಡ ನಾವುಗಳು, ಎಲ್ಲಾ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಬೆಳಿಗ್ಗೆ 7 ಗಂಟೆಗೆ ಹಾಜರಿರುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು ಬಂದ ಬಂದ ಹಾಗೇ, ತಪಾಸಣೆ ನಡೆಸಿ ಕೇಂದ್ರದೊಳಗೆ ಕೂರಿಸಲಾಗುತ್ತದೆ ಎಂದರು.

ಪೋಷಕರಿಗೆ ಸಚಿವರ ಮನವಿ

ಇನ್ನೂ ವಿದ್ಯಾರ್ಥಿಗಳು ಕುಡಿಯೋ ನೀರನ್ನು ಅವರೇ ತರಬೇಕು. ಒಂದು ವೇಳೆ ತರದೇ ಇದ್ದರೇ, ಕೇಂದ್ರದಲ್ಲಿಯೇ 250 ಎಂಎಲ್ ನೀರಿನ ಬಾಟಲಿಯನ್ನು ನೀಡಲಿದ್ದೇವೆ. ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಕರೆತರುವ ಪೋಷಕರು ಸಾಮಾಜಿಕ ಅಂತರ ಕಾಪಾಡಬೇಕು. ನೂಕು ನುಗ್ಗಲು ಮಾಡಬಾರದು. ವಿದ್ಯಾರ್ಥಿಗಳನ್ನು ಬಿಟ್ಟು ಹೆಚ್ಚು ಜನರು ಸೇರದೇ ಹೊರಡಬೇಕು. ಪರೀಕ್ಷೆ ಮುಗಿಯುವ ಸಮಯಕ್ಕೆ ಬಂದು ಮತ್ತೆ ಮಕ್ಕಳನ್ನು ಕರೆದುಕೊಂಡು ತೆರಳಬೇಕು ಎಂದು ಸಚಿವ ಸುರೇಶ್ ಕುಮಾರ್ ಮನವಿ ಮಾಡಿದರು.

ಪರೀಕ್ಷೆ ಬರೆಯಬೇಕಿದ್ದ 10 ವಿದ್ಯಾರ್ಥಿಗಳಿಗೆ ಕೊರೋನಾ

ಕಂಟೈನ್ಮೆಂಟ್ ಝೋನ್ ನಲ್ಲಿದ್ದಂತ 26 ಪರೀಕ್ಷಾ ಕೇಂದ್ರಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ. ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಬೇಕಿದ್ದಂತ 10 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಹಾವೇರಿಯಲ್ಲಿ ಒಬ್ಬರಿಗೆ, ಬಳ್ಳಾರಿ 2, ಉತ್ತರ ಕನ್ನಡ 1, ಬೆಳಗಾವಿ 4, ಬಾಗಲಕೋಟೆ 1 ವಿಜಯಪುರ 1 ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇವರಿಗೆ ಈ ಪರೀಕ್ಷೆ ಅವಕಾಶ ಇಲ್ಲ. ಬದಲಿಗೆ ಆಗಸ್ಟ್‌ನಲ್ಲಿ ನಡೆಯಲಿರುವ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ಅಷ್ಟೇ ಅಲ್ಲದೇ ಇವರನ್ನ ಫ್ರೆಶರ್ಸ್ ಎಂದು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. 

ಪರೀಕ್ಷೆ ನಡೆಸುವುದು ಸರ್ಕಾರಕ್ಕೆ ಪ್ರತಿಷ್ಠೆ ಅಲ್ಲ

ಕೊರೋನಾ ಭೀತಿ ನಡುವೆಯೂ SSLC ಪರೀಕ್ಷೆ ಮಾಡಲು ರಾಜ್ಯ ಸರ್ಕಾರ ಪ್ರತಿಷ್ಠೆಯಾಗೆ ತೆಗೆದುಕೊಂಡಿದೆ ಎನ್ನುವ ಮಾತು ಕೇಳಿಬಂದಿವೆ. ಈ ಬಗ್ಗೆ ಸ್ಪಷ್ಟಪಡಿಸಿದ ಸುರೇಶ್ ಕುಮಾರ್,  SSLC ಪರೀಕ್ಷೆ ನಡೆಸುವುದು ಸರ್ಕಾರಕ್ಕೆ ಪ್ರತಿಷ್ಠೆಯ ವಿಚಾರ ಅಲ್ಲ. ಬದಲಿಗೆ ಕರ್ತವ್ಯ. ಬೇರೆ ರಾಜ್ಯಗಳ ರೀತಿಯಲ್ಲಿ ಪರೀಕ್ಷೆ ರದ್ದು ಮಾಡಲು ಆಗದು. ಯಾಕಂದ್ರೆ, ನಮ್ಮಲ್ಲಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ವಿದ್ಯಾರ್ಥಿಗಳ ಜೀವನದ ಪ್ರಶ್ನೆಯಾಗಿದೆ. ಬೇರೆ-ಬೇರೆ ಕೆಲಸಕ್ಕೆ ಸೇರಿಕೊಳ್ಳಿ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್ ಮುಖ್ಯವಾಗಿದೆ. ಆದ್ರೆ, ಬೇರೆ ರಾಜ್ಯಗಳಲ್ಲಿ 10ನೇ ತರಗತಿ ಮುಖ್ಯವಾಗಿಲ್ಲ. ಅವರಿಗೆ ದ್ವಿತೀಯ ಪಿಯುಸಿ ಮುಖ್ಯವಾಗಿದ್ದರಿಂದ ಅವರು 10ನೇ ತರಗತಿ ಪರೀಕ್ಷೆ ರದ್ದು ಮಾಡಿದ್ದಾರೆ ಅಷ್ಟೇ ಎಂದು ತಿಳಿಸಿದರು.

click me!