ಪಿಯುಸಿ First Rank ಸರದಾರರು

By Web DeskFirst Published Apr 16, 2019, 11:15 AM IST
Highlights

ಈಗಷ್ಟೇ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಎಂದಿನಂತೆ ಈ ಬಾರಿಯೂ ಹೆಣ್ಣುಮಕ್ಕಳೇ ಸ್ಟ್ರಾಂಗು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿಯ ಫಲಿತಾಂಶ ತುಸು ಚೆನ್ನಾಗಿಯೇ ಇದೆ. ಗ್ರಾಮೀಣ ಭಾಗದ ಮಕ್ಕಳು ಒಳ್ಳೆಯ ಸಾಧನೆ ಮಾಡಿದ್ದಾರೆ. ಹಾಗಂತ ನಗರ ಪ್ರದೇಶದ ಮಕ್ಕಳೇನೂ ತುಂಬಾ ಹಿಂದೆ ಬಿದ್ದಿಲ್ಲ. ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಕುಮಾರನ್ಸ್‌ ಪಿಯು ಕಾಲೇಜಿನ ವಿದ್ಯಾರ್ಥಿ ರಜತ್‌ ಕಶ್ಯಪ್‌ 200ಕ್ಕೆ 594 ಅಂಕಗಳನ್ನು ಪಡೆದು ಮೊದಲಿಗನಾಗಿದ್ದಾನೆ.

ವಾಣಿಜ್ಯ ವಿಭಾಗದಲ್ಲಿ ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿನಿ ವೋಲ್ವಿತಾ ಅನ್ವಿಲಾ ಡಿಸೋಜಾ 596 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿ ಮಿಂಚಿದ್ದಾಳೆ. ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕುಸುಮಾ ಉಜಿನಿ 594 ಅಂಕಗಳನ್ನು ಪಡೆದು ಟಾಪರ್‌ ಆಗಿದ್ದಾರೆ.

ವಿಜ್ಞಾನ ವಿಭಾಗ

ಎಕ್ಸಾಂ ಬರೆದು ಹೊರಗೆ ಬರುವಾಗಲೇ ನನ್ನೊಳಗೊಂದು ಸಮಾಧಾನ ಇತ್ತು

ಹೆಸರು: ರಜತ್‌ ಕಶ್ಯಪ್‌

ಕಾಲೇಜು: ಕುಮಾರನ್ಸ್‌ ಪಿಯು ಕಾಲೇಜು, ಬೆಂಗಳೂರು

ಅಂಕಗಳು: 600ಕ್ಕೆ 594

ತಂದೆ: ರಮೇಶ್‌ ತಾಯಿ: ರಮಾ

ರಜತ್‌ ಕಶ್ಯಪ್‌ ವಿಜ್ಞಾನ ವಿಷಯದಲ್ಲಿ 594 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್‌ ಆಗಿರುವ ವಿದ್ಯಾರ್ಥಿ. ಬಾಲ್ಯದಿಂದಲೂ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಈತ ತಂದೆ, ತಾಯಿ, ಅಣ್ಣನ ಸಲಹೆಯಂತೆ ಓದುತ್ತಾ ಇಂದು ದೊಡ್ಡ ಸಾಧನೆ ಮಾಡಿ ಮನೆ ಮಂದಿ ಎಲ್ಲಾ ಹೆಮ್ಮೆ ಪಡುವಂತಹ ಕಾರ್ಯ ಮಾಡಿದ್ದಾನೆ.

‘ನಾನು ಪ್ರತಿ ಎಕ್ಸಾಂ ಬರೆದು ಹೊರಗೆ ಬರುತ್ತಿದ್ದಾಗ ನನ್ನೊಳಗೆ ಒಂದು ಸಮಾಧಾನ ಇತ್ತು. ಈ ಎಕ್ಸಾಂ ತುಂಬಾ ಚೆನ್ನಾಗಿ ಮಾಡಿದ್ದೇನೆ ಎನ್ನುವ ಫೀಲ್‌ ನನಗೆ ಆಗುತ್ತಿತ್ತು. ಆದರೆ ಈ ರೀತಿ ಮೊದಲ ರಾರ‍ಯಂಕ್‌ ಬರುತ್ತೇನೆ ಎಂದುಕೊಂಡಿರಲಿಲ್ಲ. ಕಾಲೇಜಿನಲ್ಲಿ ಮಾಡಿದ ಪಾಠ, ಟೂಷನ್‌ನಲ್ಲಿ ಹೇಳಿಕೊಟ್ಟಿದ್ದನ್ನು ಕೇಳಿಕೊಂಡು ಅದಕ್ಕೆ ತಕ್ಕಂತೆ ಓದುತ್ತಿದ್ದೆ. ಇದನ್ನು ಬಿಟ್ಟರೆ ಬೇರೆ ರೀತಿ ವಿಶೇಷವಾಗಿ ಏನೂ ಓದುತ್ತಿರಲಿಲ್ಲ. ಸಾಮಾನ್ಯವಾಗಿ ನಾಲ್ಕರಿಂದ ಐದು ಗಂಟೆ ಓದುತ್ತಿದ್ದೆ. ನಾನು ಮಾಡಿದ್ದು ಪಿಸಿಎಂ. ಮ್ಯಾಥ್‌್ಸ, ಫಿಸಿಕ್ಸ್‌ ಸ್ವಲ್ಪ ಕಷ್ಟಎನ್ನಿಸುತ್ತಿತ್ತು. ಇದಕ್ಕಾಗಿ ಹೆಚ್ಚು ಒತ್ತು ನೀಡಿದೆ’ ಎನ್ನುವ ರಜತ್‌ ತಂದೆ, ತಾಯಿಗಳು ಇವನಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ತಂದೆ ರಮೇಶ್‌ ಮಂಗಳೂರಿನಲ್ಲಿ ಕರ್ನಾಟಕ ಬ್ಯಾಂಕ್‌ನ ಡೆಪ್ಯೂಟಿ ಜನರಲ್‌ ಮ್ಯಾನೇಜರ್‌ ಆಗಿದ್ದಾರೆ. ತಾಯಿ ರಮಾ ಹೋಮ್‌ ಮೇಕರ್‌. ಅಣ್ಣ ಎಂ.ಟೆಕ್‌ ಮಾಡುತ್ತಿದ್ದಾರೆ. ಹೀಗೆ ಒಳ್ಳೆಯ ವಿದ್ಯಾವಂತರ ಕುಟುಂಬದಿಂದ ಬಂದಿರುವ ರಜತ್‌ ಮುಂದೆ ಮೆಕಾನಿಕಲ್‌ ಇಂಜಿನಿಯರ್‌ ಆಗಬೇಕು ಎನ್ನುವ ಕನಸನ್ನು ಹೊತ್ತು ಅದರತ್ತ ಸಾಗಲು ಬೇಕಾದ ಎಲ್ಲಾ ತಯಾರಿಗಳನ್ನೂ ಮಾಡಿಕೊಳ್ಳುತ್ತಿದ್ದಾನೆ.

‘ಈಗ ಪ್ರಸ್ತುತ ನನ್ನ ಅಪ್ಪ ಈಗ ಮಂಗಳೂರಿನಲ್ಲಿ ಇದ್ದಾರೆ. ನಾಳೆ ನಮ್ಮ ಜೊತೆಗೆ ಸೇರಲಿದ್ದಾರೆ. ಅವರು ನಾನು ರಾಜ್ಯಕ್ಕೇ ಮೊದಲು ಬಂದಿರುವುದನ್ನು ಕೇಳಿ ತುಂಬಾ ಖುಷಿ ಪಟ್ಟರು. ಅವರಿಗೆ ಏನು ಮಾತನಾಡಬೇಕು ಎಂದೇ ಗೊತ್ತಾಗಿಲ್ಲ. ನನ್ನ ಅಮ್ಮನೂ ಕೂಡ ತುಂಬಾ ಖುಷಿಯಲ್ಲಿ ಇದ್ದಾರೆ. ನಾನು ಈ ಕ್ಷಣಗಳನ್ನು ಖಂಡಿತವಾಗಿಯೂ ಸಖತ್‌ ಎಂಜಾಯ್‌ ಮಾಡುತ್ತಿದ್ದೇನೆ. ಕಾಲೇಜಿನಲ್ಲಿ ಎಲ್ಲಾ ಶಿಕ್ಷಕರು ನನಗೆ ಒಳ್ಳೆಯ ಮಾರ್ಗದರ್ಶನ ಮಾಡಿದರು. ಅವರ ಸಲಹೆಯಂತೆ ನಡೆದುದೇ ನನ್ನ ಗೆಲುವಿಗೆ ಕಾರಣ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ ರಜತ್‌ ಕಶ್ಯಪ್‌.

ವಾಣಿಜ್ಯ ವಿಭಾಗ

ಎಲ್ಲರೂ ಇಟ್ಟಿದ್ದ ನಂಬಿಕೆ ಉಳಿಸಿಕೊಂಡ ವೋಲ್ವಿತಾ

ಹೆಸರು: ವೋಲ್ವಿತಾ ಅನ್ಸಿಲಾ ಡಿಸೋಜಾ

ಕಾಲೇಜು: ಆಳ್ವಾಸ್‌ ಪಿಯುಸಿ ಕಾಲೇಜು, ಮೂಡುಬಿದಿರೆ

ಅಂಕಗಳು: 600ಕ್ಕೆ 596

ತಂದೆ: ಒಲಿವರ್‌ ಡಿಸೋಜಾ ತಾಯಿ: ಅನಿತಾ ಡಿಸೋಜಾ

ವಾಣಿಜ್ಯ ವಿಭಾಗದಲ್ಲಿ 596 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿ ಆಳ್ವಾಸ್‌ ಕಾಲೇಜಿನ ವೋಲ್ವಿತಾ ಅನ್ಸಿಲಾ ಡಿಸೋಜಾ. ಅತ್ತ ಬಡವರೂ ಅಲ್ಲದ, ಇತ್ತ ಸಿರಿವಂತರೂ ಅಲ್ಲದ ಮಧ್ಯಮ ವರ್ಗದ ಕುಟುಂಬದಿಂದ ಬಂದ ಹೆಣ್ಣು ಮಗಳು. ತಂದೆ ಒಲಿವರ್‌ ಡಿಸೋಜಾ ಕಿನ್ನಿಗೋಳಿಯಲ್ಲಿ ಪುಟ್ಟದಾದ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಅಮ್ಮ ಬಿಎಸ್ಸಿ ಪದವೀಧರೆ. ‘ನಾನು ಥಿಯರಿಯಲ್ಲಿ ವೀಕ್‌ ಇದ್ದೆ. ನನ್ನ ಹ್ಯಾಂಡ್‌ ರೈಟಿಂಗ್‌ ಕೂಡ ಅಷ್ಟಾಗಿ ಚೆನ್ನಾಗಿ ಇರಲಿಲ್ಲ. ಆದರೂ ಕೂಡ ನಾನು ಫಸ್ಟ್‌ ರಾರ‍ಯಂಕ್‌ ಬರುತ್ತೇನೆ ಎಂದುಕೊಂಡಿರಲಿಲ್ಲ. ನನ್ನ ಮನೆಯವರು ಮತ್ತು ಕಾಲೇಜಿನವರು ನನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ. ಇದರ ಜೊತೆಗೆ ನನ್ನ ಸಾಧನೆಯ ಹಿಂದೆ ಆಳ್ವಾಸ್‌ ಕಾಲೇಜು ನಿಂತಿದೆ’ ಎಂದು ಹೇಳಿಕೊಳ್ಳುತ್ತಾರೆ ಅನ್ಸಿಲಾ ಡಿಸೋಜಾ.

‘ಪ್ರತಿ ದಿನವೂ ನನ್ನ ಮಗಳು ಬೆಳಿಗ್ಗೆ ನಾಲ್ಕು ಗಂಟೆಗೆಲ್ಲಾ ಎದ್ದು ಓದುತ್ತಿದ್ದಳು. ಅವಳು ಎಸ್‌ಎಸ್‌ಎಲ್‌ಸಿಯಲ್ಲೂ ಶೇ. 98 ಅಂಕ ಪಡೆದು ಪಾಸ್‌ ಆಗಿದ್ದಳು. ಹಾಗಾಗಿ ನಮಗೆ ಅವಳ ಮೇಲೆ ಒಂದು ನಂಬಿಕೆ ಸಹಜವಾಗಿಯೇ ಇತ್ತು. ಓದಿನಲ್ಲಿ ಅಷ್ಟೇ ಅಲ್ಲದೇ ಡ್ಯಾನ್ಸ್‌, ಸ್ಪೋಟ್ಸ್‌ರ್‍ ಎಲ್ಲದ್ದರಲ್ಲೂ ಅವಳು ಮುಂದೆಯೇ ಇದ್ದಳು. ಸ್ವತಃ ಕಾಲೇಜಿನ ಲೆಕ್ಚ​ರ್‍ಸ್ಗಳೇ ಇವಳು ಖಂಡಿತಾ ರಾರ‍ಯಂಕ್‌ ಬರುತ್ತಾಳೆ ಎಂದು ಹೇಳುತ್ತಿದ್ದರು. ಇದು ಇಂದು ನಿಜವಾಗಿದೆ. ಅಂತಹ ಮಗಳಿಗೆ ತಂದೆ ತಾಯಿ ಆದ್ದದ್ದು ನಮ್ಮ ಹೆಮ್ಮೆ’ ಎಂದು ಹೇಳಿಕೊಳ್ಳುತ್ತಾರೆ ತಾಯಿ ಅನಿತಾ ಡಿಸೋಜಾ.

ಕಲಾ ವಿಭಾಗ

ಫಸ್ಟ್‌ ರಾರ‍ಯಂಕ್‌ ಅನ್ಸಿಲಾ ಡಿಸೋಜಾ ಮುಂದೆ ಸಿಎ ಆಗಬೇಕು ಎನ್ನುವ ಆಸೆ ಹೊತ್ತಿರುವ ಹುಡುಗಿ. ಅದಕ್ಕೆ ಬೇಕಾದ ಎಲ್ಲಾ ತರಬೇತಿಗಳನ್ನೂ ಈಗಾಗಲೂ ಮಾಡಿಕೊಂಡು ಮುಂದೆ ಸಾಗುತ್ತಿದ್ದಾರೆ ಇವರು.

ಹೆಸರು: ಕುಸುಮಾ ಉಜಿನಿ

ಕಾಲೇಜು: ಇಂದು ಪಿಯು ಕಾಲೇಜು, ಕೊಟ್ಟೂರು, ಬಳ್ಳಾರಿ

ಅಂಕಗಳು: 600ಕ್ಕೆ 594

ತಂದೆ: ದೇವೇಂದ್ರಪ್ಪ, ತಾಯಿ: ಜಯಮ್ಮ

ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲು ಬಂದ ಪಂಚರ್‌ ಅಂಗಡಿ ದೇವೇಂದ್ರಪ್ಪನ ಮಗಳು

ಗಡಿ ನಾಡು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕುಸುಮಾ ಉಜಿನಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲು ಬಂದ ವಿದ್ಯಾರ್ಥಿನಿ. ತಂದೆ ದೇವೇಂದ್ರಪ್ಪ ಪುಟ್ಟದೊಂದು ಪಂಚರ್‌ ಅಂಗಡಿ ಇಟ್ಟುಕೊಂಡಿದ್ದಾರೆ. ತಾಯಿ ಜಯಮ್ಮ ಮಾಡುವುದು ಕೂಲಿ ಕೆಲಸ. ಒಟ್ಟು ಐದು ಮಂದಿ ಮಕ್ಕಳಲ್ಲಿ ಕಡೆಯವಳಾದ ಕುಸುಮಾ ಕೊಟ್ಟೂರಿನ ಇಂದು ಪಿಯು ಕಾಲೇಜಿನಲ್ಲಿ ಓದಿ 594 ಅಂಕಗಳನ್ನು ಪಡೆದು ಕಲಾ ವಿಭಾಗದಲ್ಲಿ ಅಗ್ರಸ್ಥಾನಿಯಾಗಿದ್ದಾರೆ.

‘ನಾನು ಇಡೀ ರಾಜ್ಯಕ್ಕೆ ಮೊದಲು ಬರಬೇಕು ಎಂದು ಪಿಯುಸಿಗೆ ಸೇರಿದಾಗಿನಿಂದಲೇ ಅಂದುಕೊಂಡಿದ್ದೆ. ಅದಕ್ಕಾಗಿ ಗಂಟೆ, ಗಡಿಯಾರ ನೋಡಿಕೊಂಡು ನಾನು ಓದುತ್ತಿರಲಿಲ್ಲ. ಬಿಡುವು ಸಿಕ್ಕಾಗೆಲ್ಲಾ ಓದುತ್ತಿದ್ದೆ. ಕೆಲವು ವೇಳೆ ಅಪ್ಪನ ಪಂಚರ್‌ ಅಂಗಡಿಗೆ ಹೋಗಿ ಅಲ್ಲಿ ನನ್ನಿಂದ ಆಗುತ್ತಿದ್ದ ಕೆಲಸ ಮಾಡಿಕೊಟ್ಟು ಬರುತ್ತಿದ್ದೆ. ನಾವು ಒಟ್ಟು 5 ಜನ ಮಕ್ಕಳು, ಮೂರು ಜನ ಅಕ್ಕಂದಿರು, ಒಬ್ಬ ಅಣ್ಣ. ಅಣ್ಣನಿಗೆ ಮದುವೆಯಾಗಿದೆ. ಅವನೂ ಅಪ್ಪನೊಂದಿಗೆ ಪಂಚರ್‌ ಹಾಕುತ್ತಿದ್ದಾನೆ.

ದುಡ್ಡಿನ ಸಮಸ್ಯೆಯಿಂದ ಆಟ್ಸ್‌ರ್‍ ತೆಗೆದುಕೊಂಡೆ

ನಾನು ಇಂದು ಕಾಲೇಜಿನಲ್ಲಿಯೇ ಎಸ್‌ಎಸ್‌ಎಲ್‌ಸಿ ಮಾಡಿದ್ದೆ. ನನಗೆ ವಿಜ್ಞಾನ ವಿಷಯ ತೆಗೆದುಕೊಳ್ಳಬೇಕು ಎನ್ನುವ ಆಸೆ ಇತ್ತು. ಆದರೆ ಅದಕ್ಕೆ ತುಂಬಾ ಫೀಸ್‌ ಕಟ್ಟಬೇಕಿತ್ತು. ನಮ್ಮಿಂದ ಅದು ಸಾಧ್ಯವಾಗಲಿಲ್ಲ ಎಂದುಕೊಂಡು ಆಟ್ಸ್‌ರ್‍ಗೆ ಬಂದೆ. ಕಾಮರ್ಸ್‌ ಮಾಡಬೇಕು ಎಂದುಕೊಂಡರೂ ಅದೂ ನಮ್ಮ ಬಡತನದಿಂದ ಅದೂ ಸಾಧ್ಯವಾಗಲಿಲ್ಲ.

ಮುಖ್ಯವಾಗಿ ಅಪ್ಪ ಮತ್ತು ಅಣ್ಣನ ಸಂಪಾದನೆಯಿಂದಲೇ ನಮ್ಮ ಇಡೀ ಕುಟುಂಬ ಸಾಗಬೇಕು. ಮದುವೆಯಾಗಬೇಕಾದ ಮೂರು ಮಂದಿ ಅಕ್ಕಂದಿರು ಮನೆಯಲ್ಲಿ ಇರುವುದರಿಂದ ಓದು, ಸಂಸಾರ ನಡೆಸುವುದು, ಅಕ್ಕಂದಿರ ಮದುವೆ ಮಾಡುವ ಜವಾಬ್ದಾರಿಗಳು ನಮ್ಮ ತಂದೆ ತಾಯಿಯ ಮೇಲೆ ಬಿದ್ದಿದೆ.

ಇದೆಲ್ಲವನ್ನೂ ನಿತ್ಯವೂ ನೋಡುತ್ತಿದ್ದ ಕಾರಣ ನಾನು ಚೆನ್ನಾಗಿ ಓದಿ ರಾಜ್ಯಕ್ಕೆ ಮೊದಲು ಬರಬೇಕು ಎಂದುಕೊಂಡಿದ್ದೆ. ಅದಕ್ಕೆ ತಕ್ಕಂತೆ ನಮ್ಮ ಟೀಚರ್‌ಗಳ ಸಹಾಯ ಪಡೆದುಕೊಂಡು ಬಿಡುವು ಸಿಕ್ಕಾಗೆಲ್ಲಾ ಓದಿಕೊಳ್ಳುತ್ತಿದ್ದೆ. ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ನನಗೆ ಸರಿಯಾದ ಐಡಿಯಾ ಇಲ್ಲ. ದೊಡ್ಡವರು, ನಮ್ಮ ಶಿಕ್ಷಕರನ್ನು ಕೇಳಿ ಯಾವುದು ಸರಿ ಎನ್ನಿಸುತ್ತದೆಯೋ ಅದನ್ನು ಮಾಡುತ್ತೇನೆ. ಕೆಎಎಸ್‌, ಐಎಎಸ್‌ ಮಾಡಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿದ್ದೆನೆ.

click me!