
ಕಲಬುರಗಿ(ಎ.02): ಅದು ಬರದ ನಾಡು. ಅಲ್ಲಿ ಐನೂರು ಸಾವಿರ ಅಡಿ ಕೊರೆದರೂ ನೀರು ಸಿಗಲ್ಲ. ಅಂಥಹುದರಲ್ಲಿ ಅರ್ಧ ಅಡಿಗೆ ನೀರು ಬರುತ್ತದೆ ಅಂದರೆ ನಂಬುತ್ತೀರಾ? ನಂಬಲೇಬೇಕು. ಈ ಅಚ್ಚರಿಯ ಘಟನೆ ಹಿಂದೆ ಸ್ವಾಮೀಜಿಯೊಬ್ಬರ ಪವಾಡದ ಕುರಿತು ಅಂತೆ ಕತೆ ಶುರುವಾಗಿದೆ. ಆ ಸ್ವಾಮಿ ಯಾರು? ನೀರು ಬಂದಿದ್ದು ಹೇಗೆ? ಇಲ್ಲಿದೆ ವಿವರ.
ಜಲ ಪವಾಡ!
ಈ ಜಲವಿಸ್ಮಯ ನಡೆದದ್ದು ಕಲಬುರ್ಗಿಯ ಹೊರ ವಲಯದಲ್ಲಿರುವ ಡಬರಾಬಾದ್'ನಲ್ಲಿ. ವಿಸ್ಮಯ ಜಲಧಾರೆಯ ಹಿಂದೆ ಇದೀಗ ದೊಡ್ಡೇಂದ್ರ ಸ್ವಾಮಿಗಳ ಹೆಸರು ಕೇಳಿ ಬರುತ್ತಿದೆ. ಕಲಬುರ್ಗಿಯ ಚಿಂಚೋಳಿ ತಾಲೂಕಿನ ಸುಲೇಪೇಟ್ ಮದನ್ ಗುಂದಿ ಸಂಸ್ಥಾನದ ಮಠಾಧೀಶರು ಕನಸಲ್ಲಿ ಬಂದು ನನ್ನ ಆಸ್ತಾನ ಹಾಳು ಬಿದ್ದಿದೆ ಸ್ವಚ್ಛ ಮಾಡಿಸಿ ಎಂದು ಹೇಳಿದ್ದರಂತೆ. ಅದರಂತೆ ದೊಡ್ಡೇಂದ್ರ ಸ್ವಾಮೀಜಿ ಗದ್ದುಗೆ ಸ್ವಚ್ಚ ಮಾಡಿ ಲೋಕಕಲ್ಯಾಣಕ್ಕೆ ಅನುಷ್ಠಾನ ಆರಂಭಿಸಿದ್ದರು. ಈ ವೇಳೆ ಸ್ನಾನಕ್ಕೆ ನೀರು ಬೇಕೆನ್ನುವ ಕಾರಣಕ್ಕೆ ಇಲ್ಲೇ ಕೈಯಿಂದ ಅಗೆದರೆ ನೀರು ಬರುತ್ತದೆ ಎಂದು ಭಕ್ತರಿಗೆ ಸೂಚಿಸಿದ್ದರಂತೆ. ಕಾಕತಾಳಿಯವೋ ವಿಸ್ಮಯವೋ ಗೊತ್ತಿಲ್ಲ. ಭೂಮಿಯ ಅರ್ಧ ಅಡಿಗೆ ನೀರು ಸಿಕ್ಕಿದೆ. ಇದು ಸ್ವಾಮೀಜಿ ಪವಾಡ ಎನ್ನುವುದು ಭಕ್ತರ ನಂಬಿಕೆ
ಸಾವಿರ ಅಡಿ ಆಳ ಕೊರೆದರು ನೀರು ಸಿಗದ ಭೂಮಿಯಲ್ಲಿ ಕೇವಲ ಅರ್ಧ ಅಡಿಗೆ ನೀರು ಸಿಕ್ಕಿದ್ದು ಸ್ಥಳೀಯರಿಗೂ ಅಚ್ಚರಿಯಾಗಿದೆ. ಹೀಗಾಗೇ ಖುದ್ದು ಸ್ಥಳಕ್ಕೇ ಬಂದು ಪರಿಶೀಲಿಸಿದ್ದಾರೆ. ನೀರು ಖಾಲಿ ಮಾಡಿದ ಕ್ಷಣಾರ್ಧದಲ್ಲಿ ಮತ್ತೆ ಹೊಂಡ ತುಂಬಿಕೊಳ್ಳುವುದನ್ನು ಕಂಡು ಶಾಕ್ ಆಗಿದ್ದಾರೆ.
ಒಟ್ಟಿನಲ್ಲಿ ಕಾಕತಾಳಿಯವೋ ಸ್ವಾಮೀಜಿ ಪವಾಡವೋ ಗೊತ್ತಿಲ್ಲ. ಬರಡು ಭೂಮಿಯಲ್ಲಿ ಕೇವಲ ಅರ್ಧ ಅಡಿಗೆ ಜೀವಜಲ ಸಿಕ್ಕಿದೆ. ಈ ಅಚ್ಚರಿ ವೀಕ್ಷಣೆಗೆ ಜನರ ದಂಡೇ ಹರಿದು ಬರುತ್ತಿದೆ.