ತೃಪ್ತಿ ಮತ್ತು ಮಾನವೀಯತೆಯ ಗುಣ ಬೆಳೆಸಿಕೊಂಡಾಗ ಮಾತ್ರ ಭ್ರಷ್ಟರಹಿತ ಸಮಾಜ ನಿರ್ಮಾಣ ಸಾಧ್ಯ: ಸಂತೋಷ್ ಹೆಗ್ಡೆ

By Web DeskFirst Published Oct 20, 2016, 4:02 PM IST
Highlights

ತೃಪ್ತಿ ಮತ್ತು ಮಾನವೀಯತೆಯ ಗುಣ ಬೆಳೆಸಿಕೊಂಡಾಗ ಮಾತ್ರ ಭ್ರಷ್ಟರಹಿತ ಸಮಾಜ ನಿರ್ಮಾಣ ಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ಮೈಸೂರು (ಅ.20): ತೃಪ್ತಿ ಮತ್ತು ಮಾನವೀಯತೆಯ ಗುಣ ಬೆಳೆಸಿಕೊಂಡಾಗ ಮಾತ್ರ ಭ್ರಷ್ಟರಹಿತ ಸಮಾಜ ನಿರ್ಮಾಣ ಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ಅನುಗ್ರಹ ಪ್ರಕಾಶನ ರಂಗಾಯಣದ ವನರಂಗದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನುಷ್ ಎ. ಶೆಟ್ಟಿ ಅವರ ಜೋಡ್ಪಾಲ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರದ ಕುರಿತು ಮಾತನಾಡಿದರೆ ಹುಟ್ಟುಹಬ್ಬದ ಮನೆಯಲ್ಲಿ ಸಾವಿನ ಮಾತನಾಡಿದಂತಾಗುತ್ತದೆ ಎಂದರು.

ಆದರೂ ಹೆಚ್ಚು ಮಂದಿ ಯುವಕರು ಪಾಲ್ಗೊಂಡಿದ್ದೀರಿ. ನಾವು ಇಂದು ಭ್ರಷ್ಟರನ್ನು ಬಹಿಷ್ಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇರುವುದರಲ್ಲಿ ತೃಪ್ತಿ ಪಟ್ಟುಕೊಳ್ಳಬೇಕು. ದುರಾಸೆ ಎಂಬುದು ಮನುಷ್ಯನನ್ನು ಭ್ರಷ್ಟರನ್ನಾಗಿಸುತ್ತದೆ. ಓದುವವರು ಗುರಿಯನ್ನು ತಲುಪಲು ಮಹಾತ್ವಾಕಾಂಕ್ಷೆ ಇಟ್ಟುಕೊಳ್ಳಬೇಕು. ಆದರೆ ಆಸ್ತಿ ಗಳಿಸುವ ವಿಷಯದಲ್ಲಿ ಕಾನೂನು ಚೌಕಟ್ಟು ಮೀರಬಾರದು. ಎಷ್ಟೇ ಸಂಪಾದಿಸಿದರೂ ಕಾನೂನು ಚೌಕಟ್ಟಿನಲ್ಲಿಯೇ ಸಂಪಾದಿಸಬೇಕು ಎಂದು ಅವರು ಹೇಳಿದರು.

ಮಾನವೀಯತೆ ಗುಣ ಬೆಳೆಸಿಕೊಳ್ಳಬೇಕು. ಸಾಯುವಾಗಲಾದರೂ ಮನುಷ್ಯರಾಗಿ ಸಾಯಬೇಕು. ಮತ್ತೊಬ್ಬರ ಬಗ್ಗೆ ವಿಶ್ವಾಸ, ಪ್ರೀತಿ ಇರಬೇಕು. ಇಂದು ಸಮಾಜದಲ್ಲಿ ಅಧಿಕಾರ ಇರುವವರಿಗೆ ಮತ್ತು ಶ್ರೀಮಂತರಿಗೆ ಮಾತ್ರ ಬೆಲೆ ಎಂಬಂತಾಗಿದೆ. ಪ್ರಮಾಣಿಕರಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಅವರು ತಿಳಿಸಿದರು.

ಪುಸ್ತಕ ಕುರಿತು ಮಾತನಾಡಿದ ಅಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಮತ್ತು ಕಥೆಗಾರ ಅಬ್ದುಲ್ ರಶೀದ್, ಇಂದು ಎಲ್ಲಾ ಕ್ಷೇತ್ರವು ಭ್ರಷ್ಟವಾಗುತ್ತಿರುವಂತೆಯೇ ಸಾಹಿತ್ಯ ಕ್ಷೇತ್ರವೂ ಭ್ರಷ್ಟವಾಗುತ್ತಿದೆ. ಈ ಬಗ್ಗೆಯೂ ಸಂತೋಷ್ ಹೆಗ್ಡೆ ಅವರು ಧ್ವನಿ ಎತ್ತಬೇಕು. ಈ ಹಿಂದೆ ಮಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಓರ್ವ ಬಂಡಾಯ ಸಾಹಿತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿದ್ದ ಒಬ್ಬ ಲೇಖಕರು ಆಗಮಿಸಿ ಎಲ್ಲರೂ ತಲೆತಗ್ಗಿಸುವಂತೆ ಆ ಮಾಜಿ ಮುಖ್ಯಮಂತ್ರಿಯನ್ನು ಹೊಗಳಿ ಬಿಟ್ಟರು. ಕಾರ್ಯಕ್ರಮವಾದ ಒಂದೆರಡು ವರ್ಷದಲ್ಲಿ ದೆಹಲಿಯ ಪ್ರತಿಷ್ಠಿತ ವಿವಿಯಲ್ಲಿ ಒಬ್ಬರು ಮತ್ತು ವಿದೇಶದಲ್ಲಿ ಮತ್ತೊಬ್ಬರು ಉದ್ಯೋಗ ಪಡೆದರು ಎಂದರು.

ಜೋಡ್ಪಾಲ ಕೃತಿಯು ಅತ್ಯುತ್ತಮವಾಗಿದೆ. ಚಿಕ್ಕ ವಯಸ್ಸಿಗೆ ಮೂರು ಕಾದಂಬರಿ ಬರೆದಿರುವುದು ಅವರಲ್ಲಿನ ಕ್ರಿಯಾಶೀಲತೆಯನ್ನು ತೋರಿಸುತ್ತದೆ. ಜೋಡ್ಪಾಲದಂತ ಸುಂದರ ಜಾಗವನ್ನು ಆಯ್ಕೆಮಾಡಿಕೊಂಡು ಅಲ್ಲಿ ಈ ಹಿಂದೆ ನಿಲ್ಲುತ್ತಿದ್ದ ರೋಡರ್ ರೋಲರ್‌ನ್ನು ಕಥೆಯ ಕೇಂದ್ರಬಿಂದುವನ್ನಾಗಿ ಮಾಡಿಕೊಳ್ಳಲಾಗಿದೆ. ನಾನೂ ಕೂಡ ಈ ರೋಡ್ ರೋಲರ್ ನೋಡಿದ್ದೆ. ಅದಕ್ಕೆ ಅಲ್ಲಿಯೇ ತುಕ್ಕುಹಿಡಿದು, ಅದಕ್ಕೆ ಗಿಡ ಬಳ್ಳಿ ಸುತ್ತಿಕೊಂಡು ಕಬ್ಬಿಣದಲ್ಲಿ ಚಿಗುರೊಡೆದಂತೆ ಕಾಣುತ್ತಿತ್ತು ಎಂದು ತಮ್ಮ ಹಳೇಯ ನೆನಪನ್ನು ಮೆಲಕು ಹಾಕಿದರು.

click me!