
ಚಿಕ್ಕಮಗಳೂರು (ಅ.20): ಕೆಪಿಸಿಸಿ ಸೂಚನೆ ಮೇರೆಗೆ ಜನವರಿ 30 ರ ವರೆಗೆ ಮೂರು ತಿಂಗಳು ‘ಕಾಂಗ್ರೆಸ್ ನಡಿಗೆ ಸುರಾಜ್ಯದ ಕಡೆಗೆ’ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್.ವಿಜಯಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯ ಸರ್ಕಾರದ ಜನಪರ ಯೋಜನೆ ಮತ್ತು ಕಾರ್ಯಕ್ರಮಗಳನ್ನು ತಿಳಿಸುವ ಉದ್ದೇಶದಿಂದ ಗಾಂಧಿ ಜಯಂತಿ ದಿನದಿಂದ ಅವರ ಹುತಾತ್ಮ ದಿನಾಚರಣೆವರೆಗೆ ಈ ಕಾರ್ಯಕ್ರಮ ಯೋಜಿಸಲಾಗಿದೆ ಎಂದರು.
ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಯುವುದು. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ತಾಲೂಕು ಆಡಳಿತ ಕೇಂದ್ರದ ಸಮೀಪವಿರುವ ಹೋಬಳಿ ಕೇಂದ್ರದಿಂದ ಪಾದಯಾತ್ರೆ ಆರಂಭಿಸಿ ಪಟ್ಟಣ ತಲುಪುವ ಮೂಲಕ ಸಮಾವೇಶ ನಡೆಸಲಾಗುವುದು. ನಗರ ಪ್ರದೇಶದ ವಿಧಾನಸಭಾ ಕ್ಷೇತ್ರದ ಒಂದು ವಾರ್ಡ್‌ನಿಂದ ಪಾದಯಾತ್ರೆ ಆರಂಭಿಸಿ, ಕ್ಷೇತ್ರದ ಪ್ರಮುಖ ಸ್ಥಳದಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು. ಗ್ರಾಪಂ ಮತ್ತು ಪಟ್ಟಣ ಪ್ರದೇಶದ ಪ್ರತಿ ವಾರ್ಡಿನಲ್ಲಿ ಪಾದಯಾತ್ರೆ 2017ರ ನ.19ರಂದು ನಡೆಯುವ ಇಂದಿರಾಗಾಂಧಿ ಶತಮಾನೋತ್ಸವದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.