
ಗದಗ(ಎ.02): ಗದಗ ಜಿಲ್ಲಾಸ್ಪತ್ರೆ ರೋಗಿಗಳಿಗೂ ಬರದ ಬಿಸಿ ತಟ್ಟಿದೆ. ಕುಡಿಯುವ ನೀರಿಲ್ಲದೇ ಬಾಣಂತಿಯರು, ರೋಗಿಗಳ ಪರದಾಡುತ್ತಿದ್ದಾರೆ. ಮಾತ್ರವಲ್ಲ ಬೆಳಗ್ಗೆ ಉಪಹಾರಕ್ಕೂ ರೋಗಿಗಳು ಒದ್ದಾಡುತ್ತಿದ್ದಾರೆ. ಇಷ್ಟೆಲ್ಲಾ ಗಂಭೀರ ಸಮಸ್ಯೆ ಇದ್ರೂ ಜಿಲ್ಲಾಡಳಿತ ಮಾತ್ರ ಬರದ ಬಗ್ಗೆ ಬಾಯಿ ಬಿಡುತ್ತಿಲ್ಲ.
ಇಲ್ಲಿ ಪ್ರತಿದಿನ ಬಾಣಂತಿಯರು ರೋಗಿಗಳು ನೀರನ್ನು ಕಾಸು ಕೊಟ್ಟು ಉಪಯೋಗಿಸಬೇಕು. ಸರ್ಕಾರಿ ಆಸ್ಪತ್ರೆಗೆ ಹೆಚ್ಚು ಕಡಿಮೆ ಬಡರೋಗಿಗಳೇ ಬರುತ್ತಾರೆ. ಆಸ್ಪತ್ರೆ ಖರ್ಚು ಭರಿಸುವ ಸಮಸ್ಯೆಯಿಲ್ಲ ಎಂದು ಜಿಲ್ಲಾಸ್ಪತ್ರೆಗೆ ಬರುವ ಬಡ ರೋಗಿಗಳ ಪಾಲಿಗೆ ನೀರನ್ನೂ ಕಾಸು ಕೊಟ್ಟು ಕುಡಿಯೋ ಪರಿಸ್ಥಿತಿ ಬಂದೊದಗಿದೆ. ಇನ್ನೂ ಸಿಬ್ಬಂದಿ ಬಳಿ ನೀರಿನ ಸಮಸ್ಯೆ ಬಗ್ಗೆ ಪ್ರಶ್ನಿಸಿದರೆ ಗದಗ-ಬೆಟಗೇರಿ ಅವಳಿ ನಗರದಲ್ಲೇ ಕುಡಿಯಲು ನೀರಿಲ್ಲ.. ನಿಮಗೆಲ್ಲಿಂದ ನೀರು ಕೊಡೋದು ಅನ್ನೋ ಉಡಾಫೆ ಉತ್ತರ ಸಿಗುತ್ತಿದ್ದಂತೆ.
ಇಷ್ಟೇ ಅಲ್ಲದೆ ಉಪಾಹಾರ ನೀಡುವಲ್ಲೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ. ಬೆಳಗ್ಗೆ ಕೊಡಬೇಕಾದ ಬ್ರೆಡ್ ತತ್ತಿ ಚಹಾವನ್ನು ಮಧ್ಯಾಹ್ನ 12 ಗಂಟೆಗೆ ವಿತರಣೆ ಮಾಡುತ್ತಾರಂತೆ. ರೋಗಿಗಳಿಗೆ ಕುಡಿಯಲು ನೀರಿಲ್ಲ, ಉಪಹಾರ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಯಾಕಿಷ್ಟು ನಿರ್ಲಕ್ಷ್ಯ ಎನ್ನುವುದಕ್ಕೆ ಉತ್ತರಿಸುವವರೇ ಇಲ್ಲ. ಜಿಲ್ಲಾಧಿಕಾರಿ ಮನೋಜ್ ಜೈನ್ ಅವರು ಪ್ರತಿಕ್ರಿಯೆ ನೀಡುತ್ತಿಲ್ಲ. ಮಾನ್ಯ ಆರೋಗ್ಯ ಸಚಿವರೇ, ರೋಗಿಗಳ ಗೋಳು ಕೇಳುವವರ್ಯಾರು?