ಜಿಲ್ಲಾ ಮಂತ್ರಿ ವಾಸ್ತವ್ಯ ಸುದ್ದಿಯಿಂದ ಪುಳಕಿತರಾಗಿರುವ ಪಗಡಲಬಂಡೆ ಗ್ರಾಮಸ್ಥರು

Published : Oct 26, 2016, 02:54 PM ISTUpdated : Apr 11, 2018, 01:11 PM IST
ಜಿಲ್ಲಾ ಮಂತ್ರಿ ವಾಸ್ತವ್ಯ ಸುದ್ದಿಯಿಂದ ಪುಳಕಿತರಾಗಿರುವ ಪಗಡಲಬಂಡೆ ಗ್ರಾಮಸ್ಥರು

ಸಾರಾಂಶ

‘ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವಾಸ್ತವ್ಯ ಮಾಡಿದ್ದರೂ ಆ ಗ್ರಾಮಗಳ ಸ್ಥಿತಿ ಯಾವುದೇ ಬದಲಾವಣೆ ಮಾತ್ರ ಕಂಡಿಲ್ಲ. ವಾಸ್ತವ್ಯದ ಮುನ್ನ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ಹೋಗುತ್ತಾರೆ. ಆನಂತರ ನಮ್ಮ ಸ್ಥಿತಿಯನ್ನು ಕೇಳುವವರೇ ಇಲ್ಲವಾಗುತ್ತದೆ’ ಇದು ತಾಲೂಕಿನ ಗಡಿ ಗ್ರಾಮ ಪರಶುರಾಮಪುರ ಹೋಬಳಿಯ ಪಗಡಲಬಂಡೆ ಗ್ರಾಮದ ಜನರಲ್ಲಿ ಉಂಟಾಗಿರುವ ಪ್ರಶ್ನೆ.

ಕೆ.ಎಸ್. ರಾಘವೇಂದ್ರ

ಚಳ್ಳಕೆರೆ (ಅ.26): ‘ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವಾಸ್ತವ್ಯ ಮಾಡಿದ್ದರೂ ಆ ಗ್ರಾಮಗಳ ಸ್ಥಿತಿ ಯಾವುದೇ ಬದಲಾವಣೆ ಮಾತ್ರ ಕಂಡಿಲ್ಲ. ವಾಸ್ತವ್ಯದ ಮುನ್ನ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ಹೋಗುತ್ತಾರೆ. ಆನಂತರ ನಮ್ಮ ಸ್ಥಿತಿಯನ್ನು ಕೇಳುವವರೇ ಇಲ್ಲವಾಗುತ್ತದೆ’

ಇದು ತಾಲೂಕಿನ ಗಡಿ ಗ್ರಾಮ ಪರಶುರಾಮಪುರ ಹೋಬಳಿಯ ಪಗಡಲಬಂಡೆ ಗ್ರಾಮದ ಜನರಲ್ಲಿ ಉಂಟಾಗಿರುವ ಪ್ರಶ್ನೆ.

ವಿಶೇಷವೆಂದರೆ, ಈ ಗ್ರಾಮಕ್ಕೆ ಎಂದೂ ಹೋಗದ ಅಧಿಕಾರಿಗಳು ಇಂದು ಹೋಗುತ್ತಿದ್ದಾರೆ. ಈಗ ಪ್ರತಿದಿನ ಕಾರುಗಳದ್ದೇ ಕಾರುಬಾರು, ಗ್ರಾಮದಲ್ಲಿ ಕಳೆದ ಎರಡ್ಮೂರು ವರ್ಷಗಳ ಹಿಂದೆ ನಿರ್ಮಾಣವಾಗಿ ಕಸ, ಕಡ್ಡಿಯಿಂದ ಹೂಳು ತುಂಬಿದ್ದ ಚರಂಡಿಗಳು ಸ್ವಚ್ಛವಾಗುತ್ತಿವೆ. ಸಚಿವರು ವಾಸ್ತವ್ಯ ಮಾಡುವ ಶಾಲಾ ಕಟ್ಟಡಗಳು ಸುಣ್ಣ ಬಣ್ಣ ಕಾಣುತ್ತಿವೆ. ರಸ್ತೆಯಲ್ಲಿದ್ದ ಮೊಣಕಾಲುದ್ದದ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಜನರಲ್ಲಿಯೂ ಒಂದು ರೀತಿ ಬದಲಾವಣೆಯ ಗಾಳಿ ಉಂಟಾಗಿದೆ. ‘ಏನಪ್ಪ ಇದು, ನಮ್ಮ ಗ್ರಾಮಕ್ಕೆ ಮಿನಿಸ್ಟ್ರು ಬರುತ್ತಾರಂತೆ. ಅದಕ್ಕೆ ಶಾಲಾಗೆ ಸುಣ್ಣ ಹೊಡಿತಿದ್ದಾರೆ. ಯಾರು ಬಂದರೆ ಏನು, ನಮ್ಮ ಬದುಕು ಸುಧಾರಣೆ ಮಾಡುವರೆ?’ ಅಂತ ಮಾತಾಡುತ್ತಿದ್ದಾರೆ.

ಒಂದು ಕಡೆ ಸಚಿವರ ಆಗಮನಕ್ಕೆ ದಿನದಿಂದ ದಿನಕ್ಕೆ ಸಿಂಗಾರಗೊಳ್ಳುತ್ತಿರುವ ಈ ಗಡಿ ಗ್ರಾಮ ಪಗಡಲಬಂಡೆಯಲ್ಲಿ ಬರ ಕಾಡುತ್ತಿದೆ. ಕುಡಿಯುವ ನೀರಿಲ್ಲ, ರಸ್ತೆ ಇಲ್ಲ, ಜಾನುವಾರುಗಳಿಗೆ ಮೇವಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಸಚಿವರ ಭೇಟಿ ಪರಿಹಾರ ನೀಡುವುದೇ ಎಂಬ ನಿರೀಕ್ಷೆ ಗ್ರಾಮಸ್ಥರಲ್ಲಿ ಮೂಡಿದೆ.

ಒಮ್ಮೆ ಜೀವನ ನಿರ್ವಹಣೆಗಾಗಿ ಪರಿತಪಿಸಿದ ಈ ಗ್ರಾಮಕ್ಕೆ ಸಚಿವರ ಆಗಮನ ಒಂದು ವಿಶೇಷ ಆತ್ಮವಿಶ್ವಾಸವನ್ನೇ ಹುಟ್ಟುಹಾಕಿದೆ. ಇದೇ ೨೭ರಂದು ಪರಶುರಾಮಪುರ ಹೋಬಳಿಯ ಪಗಡಲಬಂಡೆ ಗ್ರಾಮೀಣದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಸಂಸದ ಬಿ.ಎನ್. ಚಂದ್ರಪ್ಪ, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸೇರಿದಂತೆ ವಿಧಾನ ಪರಿಷತ್ತು, ವಿಧಾನಸಭಾ ಸದಸ್ಯರು ವಾಸ್ತವ್ಯ ಮಾಡಲಿದ್ದಾರೆ. ಇಷ್ಟು ಜನ ಜನಪ್ರತಿನಿಧಿಗಳು, ಜಿಲ್ಲಾಡಳಿತ ಎಲ್ಲ ಅಧಿಕಾರಿಗಳು ಗ್ರಾಮದಲ್ಲಿ ಬೀಡು ಬಿಟ್ಟು ಇಲ್ಲಿನ ವಾಸ್ತವ ಸ್ಥಿತಿಯನ್ನು ಅರಿಯಲಿದ್ದಾರೆ ಎಂಬ ವಿಷಯವನ್ನು ಕೇಳಿಯೇ ಜನರು ಪುಳಕಿತರಾಗಿದ್ದಾರೆ.

 

 

ಅ.27 ರಂದು ವಾಸ್ತವ್ಯ, 28 ರಂದು ಜನ ಸಂಪರ್ಕ ಸಭೆಯನ್ನು ಮಾಡಿ ಈ ಭಾಗದ ಜನರ ಕಷ್ಟಗಳನ್ನು ತಿಳಿಯಲು ಬರುತ್ತಿರುವ ಸಚಿವರಿಗೆ ಸ್ವಾಗತ. ಜನರ ಕಷ್ಟಗಳನ್ನು ಕೇಳಿ ಪರಿಹಾರವನ್ನು ಕಂಡುಕೊಳ್ಳಬೇಕು. ಕೇವಲ ತೋರ್ಪಡಿಕೆಗಾಗಿ ವಾಸ್ತವ್ಯ ಬೇಡ.

-ಕ್ಯಾತಣ್ಣ, ಗ್ರಾಮ ಮುಖಂಡ

 

ಕಳೆದ ಎಂಟ್ಹತ್ತು ವರ್ಷಗಳಿಂದ ಮಳೆ, ಬೆಳೆ ಇಲ್ಲದೆ ಜನರು ಕಂಗಾಲಾಗಿದ್ದಾರೆ. ವಾಸ್ತವ್ಯದ ಜೊತೆಯಲ್ಲಿ ಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಾಗಲಿ.

- ಕೆ.ಪಿ. ಭೂತಯ್ಯ, ಉಪಾಧ್ಯಕ್ಷ, ರಾಜ್ಯ ರೈತ ಸಂಘ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ