
ಬೆಂಗಳೂರು: ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಕೂಡಲೇ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ಕಚೇರಿ ಮುಂದೆ ಪ್ರತಿಭಟಿಸುತ್ತಿದ್ದು, ಇವರೊಂದಿಗೆ ಸಂಧಾನ ನಡೆಸಲು ಬಿಜೆಪಿ ವಿಫಲಗೊಂಡಿದೆ. ತಮ್ಮ ಪಟ್ಟನ್ನು ಮುಂದುವರಿಸಿರುವ ಹೋರಾಟಗಾರರು, ಸ್ಪಷ್ಟ ಭರವಸೆ ನೀಡುವವರೆಗೂ ಸ್ಥಳದಿಂದ ಕದಲುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.
'ಗೊಂದಲಕ್ಕೆ ಮುಖ್ಯಮಂತ್ರಿ ಸಿದ್ದರಾಯ್ಯ ಅವರೇ ನೇರ ಹೊಣೆ,' ಎಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಯಡಿಯೂರಪ್ಪ, 'ಈ ವಿವಾದದ ಬಗ್ಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು,' ಎಂದ ಆಗ್ರಹಿಸಿದ್ದಾರೆ.
'ರಾಜ್ಯಕ್ಕೆ ನೀರು ಬಿಡಲು ಗೋವಾ ಕಾಂಗ್ರೆಸ್ ಘಟಕ ವಿರೋಧಿಸುತ್ತಿದ್ದು, ಇದನ್ನು ರಾಜ್ಯ ಕಾಂಗ್ರೆಸ್ ನಾಯಕರೇ ಬಗೆಹರಿಸಿಕೊಳ್ಳಬೇಕು,' ಎಂದೂ ಹೇಳಿದ್ದಾರೆ.
'ಕುಡಿಯುವ ನೀರನ್ನು ಒದಿಗಸುವುದಾಗಿ ಗೋವಾ ಮುಖ್ಯಮಂತ್ರಿ ಭರವಸೆಯ ಪತ್ರ ಬರೆದಿದ್ದಾರೆ. ಆದರೆ, ರಾಜಕೀಯ ಮಾಡುತ್ತಿರುವ ಸಿದ್ದರಾಮಯ್ಯ, ಗೊಂದಲ ಸೃಷ್ಟಿಸುತ್ತಿದ್ದು, ವಿವಾದ ಬಗೆಹರಿಸಲು ಅನಾದರ ತೋರುತ್ತಿದ್ದಾರೆ,' ಎಂದು ಯಡಿಯೂರಪ್ಪ ಆರೋಪಿಸಿದರು.
'ಬರ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ' ಹೇಳಿ ಪರ್ರಿಕರ್ ಬರೆದಿರುವ ಪತ್ರವನ್ನು ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಓದಿದರು.
ಸಮಸ್ಯೆ ಬಗೆಹರಿಸುವಲ್ಲಿ ಗೋವಾ ಮುಖ್ಯಮಂತ್ರಿ ಒಲವು ತೋರುತ್ತಿದ್ದಾರೆಂದು ಹೇಳಿದ್ದರೆ, ಬಿಜೆಪಿ ಮೇಲಿನ ಒಲವು ರಾಜ್ಯದ ಜನತೆಗೆ ಹೆಚ್ಚುತ್ತಿತ್ತು. ಅದು ಬಿಟ್ಟು, ವಿವಾದವೇ ಬಗೆ ಹರಿಯಿತು ಎಂಬಂತೆ ನೀಡಿದ ಹೇಳಿಕೆಯೇ ಇದೀಗ ಬಿಜೆಪಿಗೆ ನುಂಗಲಾರದ ತುತ್ತಾಗಿದೆ.