
ಧಾರವಾಡ: 'ಇಂಗ್ಲಿಷ್ ಮೀಡಿಯಂನಲ್ಲಿ ಕಲಿತರಷ್ಟೇ ಭವಿಷ್ಯ' ಎನ್ನುವ ಭಾವನೆ ಇರುವ ಈ ಕಾಲ ಘಟ್ಟದಲ್ಲಿ ಸರ್ಕಾರಿ ಕನ್ನಡ ಶಾಲೆಯಲ್ಲಿ ಕಲಿತ ದಾವಣಗೆರೆ ಜಗಳೂರಿನ ಗ್ರಾಮೀಣ ಪ್ರತಿಭೆ ಅರ್ಪಿತಾ ಜೆ.ಎಸ್. ಇಲ್ಲಿನ ಎಸ್‌ಡಿಎಂ ಮೆಡಿಕಲ್ ಕಾಲೇಜಿನ ಎಂಬಿಬಿಎಸ್‌ನಲ್ಲಿ ಬರೋಬ್ಬರಿ 15 ಚಿನ್ನದ ಪದಕ ಮುಡಿಗೇರಿಸಿ ಕೊಂಡಿದ್ದಾರೆ.
ಸತ್ತೂರಿನ ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಶನಿವಾರ ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ೯ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಕುಲಪತಿ ಡಾ. ಎಚ್. ವಿನೋದ ಭಟ್ ಈ ಚಿನ್ನದ ಹುಡುಗಿಗೆ ಪದಕಗಳನ್ನು ವಿತರಿಸಿದರು.
ನರ್ಸರಿಯಿಂದ ಹಿಡಿದು ಪಿಜಿವರೆಗೂ ಇಂಗ್ಲಿಷ್ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡುವವರ ನಡುವೆ ಕನ್ನಡದಲ್ಲೇ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದು, ಎಂಬಿಬಿಎಸ್ ನಲ್ಲಿ ಇಡೀ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸುವ ಮೂಲಕ ಅರ್ಪಿತಾ ಸೈ ಎನಿಸಿಕೊಂಡಿದ್ದಾರೆ.