
ಧಾರವಾಡ: ಟಿವಿಯಲ್ಲಿ ನಿತ್ಯ ಪ್ರಸಾರವಾಗುತ್ತಿರುವ ಧಾರಾವಾಹಿಗಳು ಮಕ್ಕಳ ಮನಸ್ಸಿನ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತವೆ ಎಂಬುದಕ್ಕೆ ಜಿಲ್ಲೆಯಲ್ಲಿ ಶುಕ್ರವಾರವಷ್ಟೇ ನಡೆದ ನಾಲ್ವರು ಬಾಲಕಿಯರ ನಾಪತ್ತೆ ಪ್ರಕರಣವೇ ಉತ್ತಮ ನಿದರ್ಶನ.
ಪುಟ್ಟಗೌರಿ ಮದುವೆ ಧಾರವಾಹಿಯಿಂದ ಪ್ರೇರಣೆಗೊಂಡು ನವಲಗುಂದ ಅರೆ ಕುರಹಟ್ಟಿಗ್ರಾಮದ ಲಕ್ಷ್ಮೀ ಎಂಬ ಬಾಲಕಿ ತನ್ನ ಮೂವರು ಆಪ್ತ ಸ್ನೇಹಿತೆಯರೊಂದಿಗೆ ಗೋವಾಕ್ಕೆ ಪರಾರಿಯಾಗಿದ್ದಳು. ಧಾರಾವಾಹಿಯಲ್ಲಿ ಪುಟ್ಟಗೌರಿ ಮನೆ ಬಿಟ್ಟು ಹೋದ ಸಂದರ್ಭದಲ್ಲಿ ಸಮಾಜದ ಜನ ಆಕೆಗೆ ನೀಡುವ ಸಹಕಾರವನ್ನು ತಮಗೂ ನೀಡುತ್ತಾರೆಂಬ ಕಲ್ಪನೆಯಲ್ಲಿ ಈ ನಾಲ್ವರು ಗೋವಾಕ್ಕೆ ಹೋಗಿದ್ದರು ಎಂಬುದನ್ನು ನಾಪತ್ತೆ ಪ್ರಕರಣ ಭೇದಿಸಿರುವ ಪೊಲೀಸರೇ ಸ್ಪಷ್ಟಪಡಿಸಿದ್ದಾರೆ.
ಏನಾಯ್ತು?
ಶುಕ್ರವಾರ ಬೆಳಗ್ಗೆ 10.30ಕ್ಕೆ ಎಂದಿನಂತೆ ಶಾಲೆಗೆ ಹೋಗಿದ್ದ ನಾಲ್ವ ರು ಸ್ನೇಹಿತೆಯರು ಪ್ರಾರ್ಥನೆ ಮುಗಿಸಿ ಮರಳಿ ಮನೆಗೆ ತೆರಳಿದ್ದಾರೆ. ಆಟದ ನಿಮಿತ್ತ ತರಗತಿಗಳಿಲ್ಲ ಎಂದು ಮನೆಯಲ್ಲಿ ಸುಳ್ಳು ಹೇಳಿ ಶಾಲಾ ಬಟ್ಟೆಬದಲಿಸಿ ಒಟ್ಟಿಗೆ . 900 ತೆಗೆದುಕೊಂಡು ಹುಬ್ಬಳ್ಳಿ ಬಸ್ ಹತ್ತಿದ್ದಾರೆ. ಅಲ್ಲಿಂದ ಮಧ್ಯಾಹ್ನದ ಹೊತ್ತಿಗೆ ಗೋವಾದ ಮಡಗಾಂವ್‌ಗೆ ಬಂದಿಳಿದ ಬಾಲಕಿಯರು, ತಮಗೆ ಕೆಲಸ ಸಿಗುತ್ತದೆ ಎಂದು ಕೆಲವು ಕಡೆ ವಿಚಾರಣೆ ಸಹ ಮಾಡಿದ್ದಾರೆ. ಆದರೆ, ತಾವು ಅಂದುಕೊಂಡಂತೆ ಯಾರ ಸಹಾಯ ಇವರಿಗೆ ದೊರೆತಿಲ್ಲ. ಇದರೊಂದಿಗೆ ಕತ್ತಲಾಗುತ್ತಾ ರಾತ್ರಿ 10ರ ಸುಮಾರಿಗೆ ನಾಲ್ವರೂ ಭಯಭೀತರಾಗಿದ್ದಾರೆ.
ಇಷ್ಟೆಲ್ಲ ಘಟನೆ ನಡೆದರೂ ನಾಪತ್ತೆ ಕುರಿತು ಪೊಲೀಸರಿಗೆ ರಾತ್ರಿ 10ರ ವರೆಗೂ ಮಾಹಿತಿ ಇರಲಿಲ್ಲ. ಬಾಲಕಿಯರ ಪೈಕಿ ಲಕ್ಷ್ಮಿ ಕೂಡಲೇ ಸಂಬಂಧಿಕರಾದ ರಮೇಶ ಮಾದರ ಎಂಬುವರಿಗೆ ದೂರವಾಣಿ ಕರೆ ಮಾಡಿ ನಡೆದ ಘಟನೆ ವಿವರಿಸಿದ್ದಾಳೆ.
ಈ ವಿಷಯವನ್ನು ರಮೇಶ ಕೂಡಲೇ ಪೊಲೀಸರಿಗೆ ತಿಳಿಸಿದ್ದು, ವಿಶೇಷ ತಂಡ ರಚಿಸಿಕೊಂಡು ಕಾರ್ಯ ಪ್ರವೃತ್ತರಾದ ನವಲಗುಂದ ಪೊಲೀಸರು, ಗೋವಾ ಪೊಲೀಸರ ಸಹಾಯದ ಮೂಲಕ ಗೋವಾದ ಕರ್ಟೋರಿಯಮ್ ಪೊಲೀಸ್ ಠಾಣೆ ವ್ಯಾಪ್ತಿಯ ಭೂತನಾಥ ದೇವಸ್ಥಾನ ಹತ್ತಿರ ನಾಲ್ವರು ಬಾಲಕಿಯರನ್ನು ಪತ್ತೆ ಹಚ್ಚಿದ್ದಾರೆ.
ಬಾಲಕಿಯರನ್ನು ಶನಿವಾರ ನ್ಯಾಯಾಧೀಶರ ಎದುರು ಹಾಜರುಪಡಿಸಿ ನಂತರದಲ್ಲಿ ಪಾಲಕರಿಗೆ ಒಪ್ಪಿಸಲಾಗಿದೆ. ಎರಡು ದಿನಗಳ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಬಾಲಕಿಯರು ಹಾಗೂ ಪಾಲಕರೊಂದಿಗೆ ಆಪ್ತ ಸಮಾಲೋಚನೆ ನಡೆಸಲಾಗುವುದು ಎಂದು ಎಸ್‌ಪಿ ಧರ್ಮೇಂದ್ರಕುಮಾರ ಮೀನಾ ಸುದ್ದಿಗಾರರಿಗೆ ತಿಳಿಸಿದರು.
(ಕನ್ನಡಪ್ರಭ ವಾರ್ತೆ)