
ದಾವಣಗೆರೆ (ಅ.24): ಕಾಂಗ್ರೆಸ್ ನಿಂದ ನಿರಂತರವಾಗಿ ದಲಿತರು ಶೋಷಣೆಗೆ ಒಳಗಾಗುತ್ತಿದ್ದು ಶೋಷಿತರನ್ನು ಬಿಜೆಪಿಗೆ ಸೇರ್ಪಡೆ ಮಾಡಲು ವ್ಯಾಪಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡ ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಂ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಲಿತರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವುದರ ಮೂಲಕ ಯಡಿಯೂರಪ್ಪರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಿ ರಾಜ್ಯ ಮತ್ತು ಜನತೆಯ ಅಭಿವೃದ್ಧಿ ಮಾಡಲಾಗುವುದು ಎಂದರು.
ದಲಿತರನ್ನು ಸಿಎಂ ಮಾಡಬೇಕೆಂದು ವರ್ಷದಿಂದಲೇ ಹೋರಾಟಗಳು ನಡೆದಿದ್ದವು. ನರೇಂದ್ರಮೋದಿ ದಲಿತರಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ದಲಿತರ ಅಭಿವೃದ್ಧಿಯ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.
ದಲಿತರು, ಅಲ್ಪಸಂಖ್ಯಾತರಿಗೆ ಯಾವುದೇ ಅಧಿಕಾರ ಕೊಡದೇ ಕೇವಲ ಮತ ಬ್ಯಾಂಕಿಗಾಗಿ ಅಹಿಂದ ಸರ್ಕಾರವೆಂದು ಹೇಳಿಕೊಳ್ಳುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್‌ರನ್ನು ದಲಿತ ನಾಯಕರಂತೆ ಬಿಂಬಿಸುತ್ತಿದ್ದಾರೆ. ಅವರನ್ನು ರಾಷ್ಟ್ರನಾಯಕರೆಂದು ಪರಿಗಣಿಸುತ್ತಿಲ್ಲ. ಇಂದಿಗೂ ಸಹ ದಲಿತರಿಗೆ ದೇವಸ್ಥಾನದಲ್ಲಿ ಪ್ರವೇಶವಿಲ್ಲ, ದಲಿತರನ್ನು ಕ್ಷೌರ ಮಾಡುತ್ತಿಲ್ಲ. ಹೋಟೇಲ್ ಗಳಲ್ಲಿ ಹೊರಗಡೆ ಲೋಟ ಇಡುವ ಪದ್ಧತಿ ಇರುವುದು ವಿಷಾದಕರ ಸಂಗತಿ ಎಂದರು.
ಅಂಬೇಡ್ಕರ್ 155 ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಹರಿಜನ ಕೇರಿಗಳಲ್ಲಿ ಸ್ವಚ್ಛ ಭಾರತ ಕಾರ್ಯಕ್ರಮ ಹಮ್ಮಿಕೊಂಡು ದಲಿತ ಕುಟುಂಬದವರ ಜೊತೆ ಸಹಪಂಕ್ತಿ ಭೋಜನ ಮಾಡಲಾಗುವುದು ಎಂದು ಹೇಳಿದರು.