ಚಿತ್ರದುರ್ಗದ 13 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೋ.ಲಕ್ಷ್ಮಣ್ ತೆಲಗಾವಿ ಆಯ್ಕೆ

By Web DeskFirst Published Oct 22, 2016, 3:33 PM IST
Highlights

ನವೆಂಬರ್ ೨೫ ಮತ್ತು ೨೬ರಂದು ಹೊಳಲ್ಕೆರೆಯಲ್ಲಿ ನಡೆಯಲಿರುವ ಚಿತ್ರದುರ್ಗ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಂಶೋಧಕ, ಲೇಖಕ, ಬರಹಗಾರ, ಪ್ರೊ. ಲಕ್ಷ್ಮಣ್ ತೆಲಗಾವಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಚಿತ್ರದುರ್ಗ (ಅ.22):  ನವೆಂಬರ್ ೨೫ ಮತ್ತು ೨೬ರಂದು ಹೊಳಲ್ಕೆರೆಯಲ್ಲಿ ನಡೆಯಲಿರುವ ಚಿತ್ರದುರ್ಗ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಂಶೋಧಕ, ಲೇಖಕ, ಬರಹಗಾರ, ಪ್ರೊ. ಲಕ್ಷ್ಮಣ್ ತೆಲಗಾವಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಚಿತ್ರದುರ್ಗ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಪ್ರೊ. ಲಕ್ಷ್ಮಣ್ ತೆಲಗಾವಿ ಅವರ ಆಯ್ಕೆಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾದಂತಾಗಿದೆ. ಸಂಶೋಧಕರಾಗಿ ಚಿತ್ರದುರ್ಗದ ಅಧ್ಯಯನ ಮಾಡಿದ್ದು ಸುಮಾರು ೨೮ ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿರುವ ಪ್ರೊ. ಲಕ್ಷ್ಮಣ್ ತೆಲಗಾವಿ ಅವರು ಈ ಬಾರಿ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮ್ಮ ಸುದೈವ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಹರ್ಷ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕಿ ನೀಲಮ್ಮ ಮಾತನಾಡಿ, ಕಸಾಪ ಸಮ್ಮೇಳನ ಈ ಬಾರಿ ಅರ್ಥಪೂರ್ಣವಾಗಿ ಆಚರಿಸುವ ಕುರಿತು ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಅಲ್ಲದೆ ಸಚಿವರ ಕ್ಷೇತ್ರದಲ್ಲಿ ನಡೆಯುವಂತಹ ಈ ಸಮ್ಮೇಳನ ಅವಿಸ್ಮರಣೀಯವಾಗಿರಲಿ ಎಂದು ಸಲಹೆ ನೀಡಿದರು.

ಆರ್. ನಾಗರಾಜ್ ಮಾತನಾಡಿ, ನೂತನ ತಂಡದ ನೇತೃತ್ವದಲ್ಲಿ ಬಂದಿರುವ ಮೊದಲ ಸಮ್ಮೇಳನವನ್ನು ಬರದಲ್ಲಿಯೂ ಉತ್ತಮ ರೀತಿಯಲ್ಲಿ ಮಾಡಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ, ಇಂದು ಆಯ್ಕೆಯಾಗಿರುವ ಸಮ್ಮೇಳನಾಧ್ಯಕ್ಷರ ಮೂಲಕ ಹೊಸ ದಿಕ್ಸೂಚಿಯನ್ನು ಕಾಣಬಹುದು ಎಂದರು.

click me!