ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿಸಿದ ಅನಂತ ಚಿರಸ್ಥಾಯಿ: ಕೇಂದ್ರ ಸಚಿವ ಜೋಶಿ

By Web DeskFirst Published Nov 13, 2019, 7:23 AM IST
Highlights

ಅನಂತಕುಮಾರ ಪ್ರಥಮ ಸ್ಮರಣೆ ಕಾರ್ಯಕ್ರಮದಲ್ಲಿ ಸಚಿವ ಜೋಶಿ | ನಾಯಕರ ಬೆಳೆಸಿ ನಾಯಕರಾದರು; ಶೆಟ್ಟರ್‌| ಇಂದು ರಸಗೊಬ್ಬರ ಕಾಳಸಂತೆಯಲ್ಲಿ ಹೋಗುತ್ತಿಲ್ಲ ಎಂದಾದರೆ ಅದಕ್ಕೆ ಅವರೇ ಕಾರಣ. ಯೂರಿಯಾ ಗೊಬ್ಬರಕ್ಕೆ ಬೇವು ಲೇಪನೆಯಂತಹ ದಿಟ್ಟ ನಿರ್ಧಾರ ಕೈಗೊಂಡು ಕಳ್ಳಸೋರಿಕೆ ತಡೆದರು ಎಂದ ಸಚಿವ ಸಿ.ಸಿ. ಪಾಟೀಲ್ |

ಹುಬ್ಬಳ್ಳಿ[ನ.13]: ಸಾವು ಎದುರಿಟ್ಟುಕೊಂಡು ದೇಶಕ್ಕಾಗಿ ಕೊನೆವರೆಗೂ ದುಡಿದ ಅನಂತಕುಮಾರ ಅವರು ತಮ್ಮ ಆತ್ಮಸ್ಥೈರ್ಯದಿಂದ ದೇಶದ ಸಂಸದೀಯ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿ ಚಿರಸ್ಥಾಯಿಯಾಗಿದ್ದಾರೆ ಎಂದು ಕೇಂದ್ರ ಗಣಿ-ಕಲ್ಲಿದ್ದಲು ಮತ್ತು ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ಗೋಕುಲ ಗಾರ್ಡನ್‌ನಲ್ಲಿ ಅನಂತಕುಮಾರ ಪ್ರತಿಷ್ಠಾನ ಹಾಗೂ ಅದಮ್ಯ ಚೇತನ ಪ್ರತಿಷ್ಠಾನದಿಂದ ಮಂಗಳವಾರ ನಡೆದ ಅನಂತಕುಮಾರ ಅವರ ಪ್ರಥಮ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೃತ್ಯು ತಿಳಿದ ಮನುಷ್ಯ ಮಾನಸಿಕವಾಗಿ ಕುಗ್ಗುವುದು ಸಹಜ. ಆದರೆ, ಮುಂದಿನ ಕಲಾಪದಲ್ಲಿ ತಾನು ಪಾಲ್ಗೊಳ್ಳುವುದಿಲ್ಲ ಎಂಬ ಕಟು ಸತ್ಯ ಅನಂತಕುಮಾರ್‌ ಅವರಿಗೆ ತಿಳಿದೂ ಸಹ ಕಾರ್ಯಕ್ಕೆ ಚ್ಯುತಿ ಬಾರದಂತೆ ದುಡಿದ ಅವರ ಕರ್ತವ್ಯಪ್ರಜ್ಞೆ ನಿಜಕ್ಕೂ ಮಾದರಿ. ಅವರು ನಮ್ಮ ಜೊತೆ ಇಲ್ಲ ಎಂಬ ಭಾವನೆಯೆ ಬರದಷ್ಟು ನಮ್ಮನ್ನು ಆವರಿಸಿದ್ದಾರೆ ಎಂದು ಭಾವುಕರಾಗಿ ನುಡಿದರು.

ಭಲೆ ಜೋಡಿ: 

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಎಬಿವಿಪಿಯಲ್ಲಿನ ಸಕ್ರಿಯತೆ ಅನಂತಕುಮಾರ್ ಜೀವನಕ್ಕೆ ವಿಶೇಷ ತಿರುವು ನೀಡಿತು. ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಗೆ ಕಾನೂನಾತ್ಮಕ ಶಕ್ತಿಯಾಗಿದ್ದರು. ಸಂಸತ್ತಿನಲ್ಲಿ ಜಿಎಸ್‌ಟಿ, ತ್ರಿವಳಿ ತಲಾಕ್‌ನಂತಹ ಮಸೂದೆ ಮಂಡನೆಯಲ್ಲಿಅವರ ಶ್ರಮ ಅಪಾರವಾಗಿತ್ತು. ತನ್ನ ಕಷ್ಟವನ್ನು ಮರೆತು ಆತ್ಮಸ್ಥೈರ್ಯದಿಂದ ಕೆಲಸ ಮಾಡುತ್ತಿದ್ದ ಅವರು ಯುವ ರಾಜಕಾರಣಿಗಳಿಗೆ ಮಾದರಿ ಎಂದು ಹೇಳಿದರು.

ಯಡಿಯೂರಪ್ಪ ಹಾಗೂ ಅನಂತ ಅವರದ್ದು ಲವ್-ಹೇಟ್ ಮಾದರಿಯ ಸಂಬಂಧವಾಗಿತ್ತು. ಇಬ್ಬರಲ್ಲೂ ಯಾವಾಗ ಭಿನ್ನಾಭಿಪ್ರಾಯ ಬರುತ್ತಿತ್ತೊ ಅಷ್ಟೆ ಬೇಗ ಶಮನವಾಗುತ್ತಿತ್ತು. ಇಬ್ಬರೂ ವೈಯಕ್ತಿಯವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಇನ್ನು, ತಮ್ಮ ಸಾವಿನ ಕುರಿತು ಮಾತನಾಡಿದ್ದ ಅನಂತಕುಮಾರ್, ನನಗೆ ವಯೋಸಹಜ ಸಾವಿಲ್ಲ ಎಂದು ನಮ್ಮ ಜತೆ ತಮ್ಮ ಭಾವನೆ ಹಂಚಿಕೊಂಡು, ಅಷ್ಟರಲ್ಲಿ ತನ್ನಿಂದಾದ ಕೊಡುಗೆಯನ್ನು ದೇಶಕ್ಕೆ ಕೊಡಬೇಕು ಎಂದು ಹೇಳಿಕೊಂಡಿದ್ದರು ಎಂದು ಸ್ಮರಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದಕ್ಕೂ ಮುನ್ನ ಮಾತನಾಡಿದ ಸಚಿವ ಜಗದೀಶ ಶೆಟ್ಟರ್, ನಾಯಕರನ್ನು ಬೆಳೆಸುತ್ತ ನಾಯಕರಾದ ಅನಂತಕುಮಾರ ನೆನಪಿನಲ್ಲಿ ರಾಜ್ಯದಲ್ಲಿ ನಾಯಕತ್ವ ತರಬೇತಿ ಸೆಂಟರ್‌ ಒಂದನ್ನು ತೆರೆಯಬೇಕಿದೆ. ಉತ್ತರ ಕರ್ನಾಟಕದಲ್ಲಿಅರ್ಧಕ್ಕಿಂತ ಹೆಚ್ಚು ಅವರೆ ಬೆಳೆಸಿದ ನಾಯಕರಿದ್ದಾರೆ ಎಂದು ತಮ್ಮನ್ನು ರಾಜಕೀಯಕ್ಕೆ ಕರೆತಂದ ಸಂದರ್ಭವನ್ನು ಸ್ಮರಿಸಿ ನನ್ನ ರಾಜಕೀಯ ಗುರು ಎಂದು ಭಾವುಕರಾದರು. ಸಂಘಟನೆ ಚತುರತೆಗೆ ಸ್ಫೂರ್ತಿಯಾಗಿದ್ದ ಅವರು ಹಾಗೂ ಯಡಿಯೂರಪ್ಪನವರು ರಾಜ್ಯದಲ್ಲಿ ಜೋಡೆತ್ತಿನ ರೀತಿಯಲ್ಲಿ ಪಕ್ಷ ಕಟ್ಟಿದರು. ಕೇಂದ್ರ ಹಾಗೂ ರಾಜ್ಯಕ್ಕೆ ಕೊಂಡಿಯಾಗಿದ್ದಅವರ ಅನುಪಸ್ಥಿತಿ ಇಂದು ಎದ್ದು ಕಾಣುತ್ತಿದೆ. ಇದನ್ನು ಬಿಜೆಪಿಗರು ಮಾತ್ರವಲ್ಲ, ವಿರೋಧ ಪಕ್ಷದವರೂ ಒಪ್ಪಿಕೊಳ್ಳುತ್ತಿದ್ದಾರೆ ಎಂದರು.

ಗಣಿ ಮತ್ತು ಕಲ್ಲಿದ್ದಲು ಸಚಿವ ಸಿ.ಸಿ. ಪಾಟೀಲ್, ಇಂದು ರಸಗೊಬ್ಬರ ಕಾಳಸಂತೆಯಲ್ಲಿ ಹೋಗುತ್ತಿಲ್ಲ ಎಂದಾದರೆ ಅದಕ್ಕೆ ಅವರೇ ಕಾರಣ. ಯೂರಿಯಾ ಗೊಬ್ಬರಕ್ಕೆ ಬೇವು ಲೇಪನೆಯಂತಹ ದಿಟ್ಟ ನಿರ್ಧಾರ ಕೈಗೊಂಡು ಕಳ್ಳಸೋರಿಕೆ ತಡೆದರು. ಪ್ರವರ್ಧಮಾನಕ್ಕೆ ಬರುತ್ತಿರುವ ಸಮಯದಲ್ಲಿ ಅವರು ನಮ್ಮಿಂದ ದೂರವಾದದ್ದು ದುರ್ದೈವ ಎಂದರು.

ಪ್ರಾಸ್ತಾವಿಕ ಮಾತನಾಡಿದ ತೇಜಸ್ವಿನಿ ಅನಂತಕುಮಾರ, ಅಗಾಧ ಸ್ಮರಣಶಕ್ತಿಯುಳ್ಳ ಅನಂತಕುಮಾರ ಭೌತಿಕವಾಗಷ್ಟೆ ನಮ್ಮೊಂದಿಗಿಲ್ಲ. ಅವರ ಸುತ್ತಲೆ ನಮ್ಮ ಜೀವನ ತಿರುಗುತ್ತಿತ್ತು. ಏಕಾಏಕಿ ಭೌತಿಕವಾಗಿ ಅವರಿಲ್ಲದ ಕ್ಷಣವನ್ನು ನಮ್ಮಿಂದ ಎದುರಿಸಲು ಕಷ್ಟವಾಯಿತು. ಸಾವು ಹತ್ತಿರ ಬಂದಾಗಯಾರಿಗೂ ಹೇಳಬೇಡ ಎಂದು ನಮಗೆ ಸೂಚಿಸಿದ್ದ ಅವರು, ಕೊನೆವರೆಗೂ ಗಡಿಯಾರದ ಜತೆ ಜಿದ್ದಿಗೆ ಬಿದ್ದು ಕರ್ತವ್ಯ ನಿಭಾಯಿಸಿದವರು. ಸಂಸದೀಯ ಸಚಿವರಾಗಿ ಎಲ್ಲರ ಹೆಸರು, ಕ್ಷೇತ್ರ ನೆನಪಿಟ್ಟುಕೊಂಡು, ಇವರೆಲ್ಲ ನನ್ನ ಕುಟುಂಬಸ್ಥರು ಎಂದು ಬೋಧಿಸಿದ್ದರು ಎಂದು ಸ್ಮರಿಸಿಕೊಂಡಿದ್ದರು ಎಂದರು.

ಅನಂತಕುಮಾರ ಸಹೋದರ ನಂದಕುಕಮಾರ ಸ್ವಾಗತಿಸಿದರು. ಮೂರು ಸಾವಿರ ಮಠದ ಗುರು ಸಿದ್ಧರಾಜಯೋಗೀಂದ್ರ ಶ್ರೀಗಳು ಆಶೀರ್ವಚನ ನೀಡಿದರು. 

ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಅಮೃತದೇಸಾಯಿ, ಶಂಕರ ಪಾಟೀಲ ಮುನೇನಕೊಪ್ಪ,ಪ್ರಮುಖರಾದ ಮಾ. ನಾಗರಾಜ, ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ ಸೇರಿ ಹಲವರಿದ್ದರು.

click me!