ಎನ್‌ಜಿಇಎಫ್‌ ಪುನಶ್ಚೇತನಕ್ಕೆ 30 ಕೋಟಿ ಅನುದಾನ ಒದಗಿಸಲು ಪ್ರಯತ್ನ: ಶೆಟ್ಟರ್

Published : Nov 12, 2019, 09:16 AM IST
ಎನ್‌ಜಿಇಎಫ್‌ ಪುನಶ್ಚೇತನಕ್ಕೆ 30 ಕೋಟಿ ಅನುದಾನ ಒದಗಿಸಲು ಪ್ರಯತ್ನ: ಶೆಟ್ಟರ್

ಸಾರಾಂಶ

ಎನ್‌ಜಿಇಎಫ್ ಪುನಶ್ಚೇತನಕ್ಕೆ ಸರ್ಕಾರ ಬದ್ಧ ಎಂದ ಸಚಿವ ಜಗದೀಶ ಶೆಟ್ಟರ್| ಸಂಸ್ಥೆಯ ಬೇಡಿಕೆಯಂತೆ 30 ಕೋಟಿ ಅನುದಾನ ಒದಗಿಸುವ ಭರವಸೆ| ಈ ಸಂಸ್ಥೆಗೆ ಸರ್ಕಾರದ ಪ್ರೋತ್ಸಾಹ, ಸಹಕಾರ ಅಗತ್ಯವಿದೆ| ಸಂಸ್ಥೆಯ ಅಭಿವೃದ್ಧಿಗೆ ಅತ್ಯಾಧುನಿಕ ಯಂತ್ರಗಳ ಅವಶ್ಯಕತೆ ಇದ್ದು,ಈ ಕುರಿತು ವಿಸ್ಕೃತ ವರದಿ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ|

ಧಾರವಾಡ[ನ.12]: ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ತಯಾರಿಸುವ ಉತ್ತರ ಕರ್ನಾಟಕದಲ್ಲಿರುವ ಏಕೈಕ ಸಂಸ್ಥೆ ಎನ್‌ಜಿಇಎಫ್‌ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಸಂಸ್ಥೆಯ ಬೇಡಿಕೆಯಂತೆ ಪುನಶ್ಚೇತನಕ್ಕೆ 30 ಕೋಟಿ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು ಹೇಳಿದ್ದಾರೆ. 

ಬೆಂಗಳೂರಿನಲ್ಲಿದ್ದ ಎನ್‌ಜಿಇಎಫ್ ಸಂಸ್ಥೆಯ ಮುಖ್ಯ ಕೇಂದ್ರವು ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಬೀಗಹಾಕಲಾಗಿತ್ತು. ಆದರೆ, ಧಾರವಾಡದಲ್ಲಿರುವ ಈ ಸಂಸ್ಥೆಯ ಕೇಂದ್ರವು ಲಾಭದಲ್ಲಿರುವುದರಿಂದ ಸುತ್ತಮುತ್ತಲಿನ ಉದ್ಯೋಗಿಗಳಿಗೆ ಮತ್ತು ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರವು ಸದ್ಯ ಇದರ ಪುನಶ್ಚೇತನಕ್ಕೆ ಸಿದ್ಧವಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಲ್ಲಿನ ರಾಯಪುರದ ಎನ್‌ಜಿಇಎಫ್ ಕೈಗಾರಿಕಾ ಸಂಸ್ಥೆಗೆ ಸೋಮವಾರ ಭೇಟಿ ನೀಡಿ ಸಂಸ್ಥೆಯ ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿ ಅವರು ಮಾತನಾಡಿದರು. 1984 ರಲ್ಲಿ ಈ ಸಂಸ್ಥೆಯು ಆರಂಭವಾಯಿತು. ರಾಯಪುರದ 10 ಎಕರೆ ಪ್ರದೇಶದಲ್ಲಿರುವ ಈ ಸಂಸ್ಥೆಗೆ ಸರ್ಕಾರದ ಪ್ರೋತ್ಸಾಹ, ಸಹಕಾರ ಅಗತ್ಯವಿದೆ. ಸಂಸ್ಥೆಯ ಅಭಿವೃದ್ಧಿಗೆ ಅತ್ಯಾಧುನಿಕ ಯಂತ್ರಗಳ ಅವಶ್ಯಕತೆ ಇದ್ದು,ಈ ಕುರಿತು ವಿಸ್ಕೃತ ವರದಿ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎನ್‌ಜಿಎಫ್ ಹಾಗೂ ಹೆಸ್ಕಾಂ ಸಂಸ್ಥೆಯೊಂದಿಗೆ ಸಮಾಲೋಚನೆ ನಡೆಸಿ ಟಾನ್ಸಫಾರ್ಮರ್ ಖರೀದಿ ಮತ್ತು ದುರಸ್ತಿ ಮಾಡಲು ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಮಳೆಯಿಂದ ಹಾನಿಯಾದ ಎಲ್ಲ ಟ್ರಾನ್ಸ್‌ಫಾರ್ಮರ್‌ಗಳನ್ನುಇಲ್ಲಿಯೇ ನೀಡುವಂತೆ ಸೂಚಿಸಲಾಗಿದೆ. ಸಂಸ್ಥೆಯ ಬೆಳವಣಿಗೆಯ ಹಿತದೃಷ್ಟಿಯಿಂದ ಇಸ್ರೋ, ಮಿಲಿಟರಿ ಎಂಜಿನಿಯರಿಂಗ್ ಸರ್ವೀಸ್ ಹಾಗೂ ಎಚ್‌ಎಂಟಿ, ಕೈಗಾ ಕಂಪನಿಗಳನ್ನು ಸಂಪರ್ಕ ಮಾಡಲಾಗಿದ್ದು, ಅವುಗಳನ್ನು ಕೂಡ ಒಡಂಬಡಿಕೆ ಅಂತೆಯೇ ಸಂಸ್ಥೆಯೇ ರಿಪೇರಿ ಮಾಡಿಕೊಡುವಲ್ಲಿ ಸಾಕಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಎನ್‌ಜಿಇಎಫ್ ಪ್ರಧಾನ ವ್ಯವಸ್ಥಾಪಕ ಕಿರಣ ಅಡವಿ ಮಾತನಾಡಿ, ಹಲವಾರು ವರ್ಷಗಳ ಇತಿಹಾಸ ಇರುವ ಎನ್‌ಜಿಎಫ್ ಕಂಪನಿಯು ಇದುವರೆಗೂ ಗುಣಮಟ್ಟ ಕಾಪಾಡಿಕೊಂಡು ಬಂದಿದೆ. ಇದರಿಂದಲೇ ಸಂಸ್ಥೆ ಲಾಭದಲ್ಲಿದೆ. ಆದರೆ, ಎರಡು ವರ್ಷಗಳಿಂದ ಸಂಸ್ಥೆಯ ನೌಕರರಿಗೆ, ಸಿಬ್ಬಂದಿಗೆ ಹಾಗೂ ಅಧಿಕಾರಿಗಳಿಗೆ ಸಂಬಳ ಆಗಿಲ್ಲ. ಶೇ. 95 ರಷ್ಟು ಗುಣಮಟ್ಟ ಹೊಂದಿರುವ ಈಸಂಸ್ಥೆಯಲ್ಲಿ 40 ವರ್ಷಗಳ ಹಳೆಯ ಯಂತ್ರಗಳಿವೆ. ಅವುಗಳ ಬದಲಾವಣೆಗೆ ಸರ್ಕಾರ ಬಂಡವಾಳ ಹಾಕಬೇಕು.ಸಂಸ್ಥೆಯ ಪುನಶ್ಚೇತನಕ್ಕೆ 30 ಕೋಟಿ ಅನುದಾನ ನೀಡಬೇಕು ಎಂದರು. 

ಈ ಪೂರ್ವದಲ್ಲಿ ಸಂಸ್ಥೆಯವಾಟರ್ ಪೇಂಟರ್ ವಿಭಾಗ, ಟ್ರಾನ್ಸ್‌ಫಾರ್ಮರ್ ಯಂತ್ರಗಳು, ವೈಂಡಿಂಗ್, ಆಯಿಲ್ ತುಂಬುವ ವಿಭಾಗ, ಪರೀಕ್ಷಾವಿಭಾಗ, ಸ್ವೀಚ್ ಗೇರ್ ಸೇರಿದಂತೆ ಸಂಸ್ಥೆಯ ವಿವಿಧವಿಭಾಗಗಳಿಗೆ ಭೇಟಿ ನೀಡಿ ಸಚಿವರು ಮಾಹಿತಿ ಪಡೆದರು.ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರಾದ ಗಂಗಾಪತಿ, ಶಿವಕುಮಾರ ಇದ್ದರು.

ಸುಪ್ರೀಂ ತೀರ್ಪಿನ ಬಳಿಕ ರಾಜಕೀಯ ನಡೆ

ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ಬಳಿಕವೇ ಮುಂದಿನ ರಾಜಕೀಯ ನಡೆ ನಿರ್ಧಾರವಾಗಲಿದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು. ಕಾಗವಾಡ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆ ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯೆನೀಡಿದ ಅವರು, ರಾಜು ಕಾಗೆ ಅವರು ಡಿಕೆಶಿ ಭೇಟಿ ಮಾಡಿರುವುದು ಮಾಧ್ಯಮಗಳಿಂದ ಗೊತ್ತಾಗಿದೆ. ಈ ವಿಚಾರವನ್ನು ಪಕ್ಷದ ಮುಖಂಡರು ನೋಡಿಕೊಳ್ಳುತ್ತಾರೆ ಎಂದರು. 

ಕಾಗೆ ಅವರು ಕಾಂಗ್ರೆಸ್ ಸೇರಿದ್ದೇವೆ ಎಂದು ಇದುವರೆಗೂ ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಲಿರುವ ನ. 13 ವರೆಗೆ ಇವೆಲ್ಲಾ ರಾಜಕೀಯ ಮೇಲಾಟಗಳು ನಡೆಯತ್ತಲೇ ಇರುತ್ತವೆ. ಕೋರ್ಟ್‌ತೀರ್ಪು ಬರಲಿ, ಅದು ಯಾವ ರೀತಿ ಇರುತ್ತದೆ ಎಂಬುದರ ಮೇಲೆ ನಿರ್ಣಯಗಳು ಮಾಡುತ್ತೇವೆ ಎಂದರು.
 

PREV
click me!

Recommended Stories

'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ