ಹೃದಯ ವಿದ್ರಾವಕ ಘಟನೆ.. ಮಗನ ಅಗಲಿಕೆ ನೋವು ತಾಳಲಾರದೇ ಕುಸಿದುಬಿದ್ದು ಪ್ರಾಣಬಿಟ್ಟ ಅಮ್ಮ

Published : Jul 23, 2026, 12:13 PM IST
dharwad mother and son

ಸಾರಾಂಶ

ಹೊಟ್ಟೆ ನೋವಿನಿಂದ ಮಗ ಹೋದರೆ, ಮಗನ ಅಗಲಿಕೆಯ ನೋವಿನಿಂದ ತಾಯಿ ಹೋದರು. ಸಾವಿನಲ್ಲೂ ಈ ಕರುಳ ಬಳ್ಳಿ ಬೇರ್ಪಡಲಿಲ್ಲ ಎಂಬುದು ಮಾತ್ರ ಈ ಘಟನೆಯ ಅತ್ಯಂತ ಕರುಣಾಜನಕ ಸತ್ಯ.

ಧಾರವಾಡ: ವಿಧಿಯಾಟ ಎಷ್ಟು ಕ್ರೂರ ಎಂಬುದಕ್ಕೆ ಧಾರವಾಡದ ತೇಜಸ್ವಿನಗರದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆಯೇ ಸಾಕ್ಷಿ. ತನ್ನನ್ನು ಹೆತ್ತು ಹೊತ್ತು ಸಲಹಿದ ತಾಯಿಯನ್ನು ಅಗಲಿ ಮಗ ಹೋಗಿದ್ದರೆ, ಅತ್ತ ಮಗನ ಅಗಲಿಕೆಯ ನೋವು ತಾಳಲಾರದೆ ತಾಯಿಯೂ ಸಹ ಪ್ರಾಣಬಿಟ್ಟಿದ್ದಾರೆ. ಒಂದೇ ದಿನ, ಒಂದೇ ಮನೆಯಲ್ಲಿ ನಡೆದ ಎರಡು ಸಾವುಗಳು ಇಡೀ ಬಡಾವಣೆಯನ್ನೇ ಕಣ್ಣೀರಲ್ಲಿ ಮುಳುಗಿಸಿವೆ.

ನೋವಿಗೆ ಬೆದರಿ ಮಗನ ಆತ್ಮ*ತ್ಯೆ

ಧಾರವಾಡ ನಗರದ ತೇಜಸ್ವಿನಗರದ ನಿವಾಸಿ ಮೆಹಬೂಬ್ ಸಾಬ್ ನದಾಫ್ (47) ಕಳೆದ ಕೆಲವು ದಿನಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಎಷ್ಟೇ ಚಿಕಿತ್ಸೆ ಪಡೆದರೂ ನೋವು ಮಾತ್ರ ಕಡಿಮೆಯಾಗಿರಲಿಲ್ಲ. ಈ ಅಸಹನೀಯ ನೋವನ್ನು ತಡೆಯಲಾರದೆ ಮೆಹಬೂಬ್ ಸಾಬ್ ಬುಧವಾರ ಬೆಳಗ್ಗೆ ರಾಜೀವ್ ಗಾಂಧಿನಗರದ ಬಳಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಗನ ಶವಯಾತ್ರೆ ವೇಳೆ ಕುಸಿದುಬಿದ್ದ ತಾಯಿ

ರೈಲ್ವೆ ಪೊಲೀಸರು ಮರಣೋತ್ತರ ಪರೀಕ್ಷೆ ಮುಗಿಸಿ ಸಂಜೆ ವೇಳೆಗೆ ಮೆಹಬೂಬ್ ಸಾಬ್ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು. ಮನೆಯಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆದಿತ್ತು. ಸಂಜೆ ಸರಿಯಾಗಿ 7 ಗಂಟೆಗೆ ಮಗನ ಅಂತಿಮಯಾತ್ರೆ ಹೊರಡಬೇಕಿತ್ತು. ಇನ್ನೇನು ಮಗನ ಶವವನ್ನು ಮನೆಯಿಂದ ಹೊರತೆಗೆಯಬೇಕು ಎನ್ನುವಷ್ಟರಲ್ಲಿ, ಅಲ್ಲಿಯವರೆಗೆ ಕಣ್ಣೀರು ಸುರಿಸುತ್ತಾ ಮೌನವಾಗಿದ್ದ ತಾಯಿ ಮುಗುಟಬಿ (68) ನದಾಫ್ ಆಘಾತದಿಂದ ಕುಸಿದುಬಿದ್ದಿದ್ದಾರೆ. ಮಗನ ಅಗಲಿಕೆಯ ದುಃಖ ಆ ಜೀವಕ್ಕೆ ಸಹಿಸಲು ಸಾಧ್ಯವಾಗಲಿಲ್ಲ. ನೋಡನೋಡುತ್ತಿದ್ದಂತೆಯೇ ತಾಯಿ ಮುಗುಟಬಿ ಪ್ರಾಣಪಕ್ಷಿ ಹಾರಿಹೋಗಿದೆ.

ಸಾವಿನಲ್ಲೂ ಮಗನನ್ನು ಹಿಂಬಾಲಿಸಿದ ತಾಯಿ

ಮಗನ ಅಂತ್ಯಕ್ರಿಯೆಗೆ ತಯಾರಿ ನಡೆಸುತ್ತಿದ್ದ ಕುಟುಂಬಸ್ಥರು ಮತ್ತು ಬಂಧುಗಳಿಗೆ ಈಗ ತಾಯಿಯ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗದ ಆಘಾತ ನೀಡಿತು. ಅಂತಿಮವಾಗಿ, ಸಂಬಂಧಿಕರು ಮತ್ತು ಬಡಾವಣೆಯ ಜನರು ಮೊದಲು ಮಗ ಮೆಹಬೂಬ್ ಸಾಬ್ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಿದರು. ಬಳಿಕ ತಡರಾತ್ರಿ ತಾಯಿ ಮುಗುಟಬಿ ಅವರ ಅಂತ್ಯಕ್ರಿಯೆಯನ್ನೂ ಪೂರೈಸಲಾಯಿತು.

ಹಡೆದವ್ವನ ಪ್ರೀತಿ ಎಂಥದ್ದು ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಂತಿದೆ. ಮಗ ಹೋದ ಮೇಲೆ ನನಗೇಕೆ ಈ ಬದುಕು ಎಂದು ಆ ತಾಯಿ ಮಗನನ್ನೇ ಹಿಂಬಾಲಿಸಿ ಹೋದಂತೆ ಭಾಸವಾಗುತ್ತಿತ್ತು. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ನೋವಿನ ಕಥೆ ಕೇಳಿ ಪ್ರತಿಯೊಬ್ಬರ ಕಣ್ಣಾಲಿಗಳು ತೇವವಾಗುತ್ತಿವೆ. ಹೊಟ್ಟೆ ನೋವಿನಿಂದ ಮಗ ಹೋದರೆ, ಮಗನ ಅಗಲಿಕೆಯ ನೋವಿನಿಂದ ತಾಯಿ ಹೋದರು. ಸಾವಿನಲ್ಲೂ ಈ ಕರುಳ ಬಳ್ಳಿ ಬೇರ್ಪಡಲಿಲ್ಲ ಎಂಬುದು ಮಾತ್ರ ಈ ಘಟನೆಯ ಅತ್ಯಂತ ಕರುಣಾಜನಕ ಸತ್ಯ.

PREV
Read more Articles on
click me!

Recommended Stories

ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್‌ಗೆ ಹುಬ್ಬಳ್ಳಿ ಮಾರ್ಗದ ಕೂಗು: ಏನಿದು ಹೊಸ ತಿರುವು?
ಧಾರವಾಡ ವೈದ್ಯೆ ತಾಯಿಯಿಂದ ಚಾಕು ಇರಿತಕ್ಕೊಳಗಾದ ಮಗು ಗುಣಮುಖ; ಪೊಲೀಸ್ ಕಮಿಷನರ್ ಶಶಿಕುಮಾರ್‌ಗೆ ಹ್ಯಾಟ್ಸಾಫ್!