ಹುಬ್ಬಳ್ಳಿ ಸಿದ್ಧಾರೂಢ ಮಠದ ಟ್ರಸ್ಟಿಗಳಿಗೆ ಬ್ಲ್ಯಾಕ್‌ಮೇಲ್‌ ಮಾಡ್ತಿದ್ದ ನಾಲ್ವರ ಬಂಧನ

By Web DeskFirst Published Oct 9, 2019, 3:09 PM IST
Highlights

ಹುಬ್ಬಳ್ಳಿಯ ಐತಿಹಾಸಿಕ ಸಿದ್ಧಾರೂಢ ಮಠದ ಟ್ರಸ್ಟಿಗಳಿಗೆ ಬ್ಲ್ಯಾಕ್‌ಮೇಲ್‌ ಮಾಡಿದ ಪ್ರಕರಣ/ ನಾಲ್ವರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು/ ಮನೆಯಲ್ಲಿದ್ದ ದೃಶ್ಯ ಸೆರೆಹಿಡಿದು ಬೆದರಿಕೆ

ಹುಬ್ಬಳ್ಳಿ[ಅ. 09]  ಹುಬ್ಬಳ್ಳಿಯ ಐತಿಹಾಸಿಕ ಸಿದ್ಧಾರೂಢ ಮಠದ ಟ್ರಸ್ಟಿಗಳಿಗೆ ಬ್ಲ್ಯಾಕ್‌ಮೇಲ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ‌.

ಇಬ್ಬರು ಟ್ರಸ್ಟಿಗಳು ಏಕಾಂತದಲ್ಲಿರುವ ದೃಶ್ಯ ಸೆರೆ ಹಿಡಿದು, ಬೆದರಿಸಿ ಹತ್ತು ಲಕ್ಷ ರೂಪಾಯಿ ಸುಲಿಗೆ ಮಾಡಿರುವ ಸಂಬಂಧ ಪ್ರಕರಣ ದಾಖಲಾಗಿತ್ತು.  ಸಿದ್ಧಾರೂಢ ಮಠದ ಟ್ರಸ್ಟಿ ಡಾ. ಬಸನಗೌಡ ಸಂಕನಗೌಡರ್ ಅವರು ಇನ್ನೊಬ್ಬ ಟ್ರಸ್ಟಿ ವಿಜಯಲಕ್ಷ್ಮಿ ಮನೆಯಲ್ಲಿದ್ದಾಗ ನಾಲ್ಕು ಜನರ ತಂಡ ಮನೆಯೊಳಗೆ ನುಗ್ಗಿ ಚಿತ್ರೀಕರಣ ಮಾಡಿತ್ತು. ಮಠದ ಸುಪ್ರವೈಜರ್ ಸುನೀಲ್ ಕಮ್ಮಾರ್ ನೀಡಿದ್ದ ಮಾಹಿತಿ ಮೇರೆಗೆ ಸಂತೋಷ್ ಪೂಜಾರಿ, ಸಂಜು ಪಟದಾರಿ ಮತ್ತು ಗಣೇಶ್ ಕನ್ನೂರ್ ಎಂಬುವವರು ಬ್ಲ್ಯಾಕ್‌ಮೇಲ್ ಮಾಡಿದ್ದರು‌ ಎನ್ನಲಾಗಿದೆ.

ಸುವರ್ಣ ನ್ಯೂಸ್‌ ಹೆಸರಿನಲ್ಲಿ ಬ್ಲಾಕ್‌ಮೇಲ್‌: ನಕಲಿ ಪತ್ರಕರ್ತನ ವಿರುದ್ಧ ದೂರು

ಡಾ. ಬಸನಗೌಡ ಸಂಕನಗೌಡರ್ ಅಮರಗೋಳದಲ್ಲಿರುವ ವಿಜಯಲಕ್ಷ್ಮಿ ಮನೆಯಲ್ಲಿದ್ದ ದೃಶ್ಯಗಳನ್ನು ಸೆರೆಹಿಡಿದಿದ್ದರು. ಚಿತ್ರೀಕರಿಸಿದ‌ ದೃಶ್ಯಗಳನ್ನು ಮಾಧ್ಯಮಗಳಿಗೆ ಕೊಟ್ಟು ಮರ್ಯಾದೆ ತೆಗೆಯುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ವೈದ್ಯ ಡಾ.‌ಬಸನಗೌಡ ಸಂಕನಗೌಡರ್ ಹತ್ತು ಲಕ್ಷ ರೂಪಾಯಿ ಕೊಟ್ಟಿದ್ದರು ಇಷ್ಟಕ್ಕೂ ಸುಮ್ಮನಾಗದ ಆರೋಪಿಗಳು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು‌ ‌ಬೆದರಿಕೆ ಹಾಕಿದ್ದರು‌.

ಕಿರುಕುಳ ತಾಳದೆ ಡಾ. ಬಸನಗೌಡ ಸಂಕನಗೌಡರ್ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ, ಕಾರ್ಯಾಚರಣೆಗೆ ಇಳಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರತಿಷ್ಠಿತ ಕುಟುಂಬಗಳು ಬ್ಲ್ಯಾಕ್‌ಮೇಲರ್‌ಗಳ ಕೈಗೆ ಸಿಲುಕಿ ಒದ್ದಾಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪ್ರಸಿದ್ಧ ಮಠದಲ್ಲಿ ನಡೆದಿರುವ ಈ ಘಟನೆ ಈಗ ಭಕ್ತ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಅಕ್ಟೋಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

 

 

click me!