ಹೊಸ ವರ್ಷ ಆಗಮನದ ಬೆನ್ನಲ್ಲೇ ಚೀನಾಗೆ ಶಾಕ್, ವೋಕ್ಸ್‌ವ್ಯಾಗನ್ ಸ್ಕೋಡಾ ಗುಡ್ ಬೈ?

By Suvarna NewsFirst Published Dec 11, 2022, 6:22 PM IST
Highlights

ಆರ್ಥಿಕ ಹಿಂಜರಿತ, ರಷ್ಯಾ ಉಕ್ರೇನ್ ಯುದ್ಧದಿಂದ ಪೊರೈಕೆ ಸರಪಳಿಯಲ್ಲಿ ವ್ಯತ್ಯಯ ಸೇರಿದಂತೆ ಹಲವು ಸಮಸ್ಯೆಗಳು ಜಾಗತಿಕವಾಗಿ ಕಾಡುತ್ತಿದೆ. ಇದರ ನಡುವೆ ಚೀನಾಗೆ ಹೊಸ ಶಾಕ್ ಎದುರಾಗಿದೆ. 
 

ನವದೆಹಲಿ(ಡಿ.11): ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ವಿಶ್ವವೇ ಸಜ್ಜಾಗುತ್ತಿದೆ. ಕಳೆದೆರಡು ವರ್ಷ ಕೊರೋನಾ, ನಿರ್ಬಂಧ, ಹಣಕಾಸಿನ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿತ್ತು. ಆದರೆ ಈ ಸಂಭ್ರಮಕ್ಕೂ ಮುನ್ನ ಚೀನಾಗೆ ಶಾಕ್ ಎದುರಾಗಿದೆ. ಚೀನಾಗೆ ಮತ್ತೊಂದು ಹೊಡೆದ ನೀಡಲು ಆಟೋಮೊಬೈಲ್ ಕಂಪನಿ ಮುಂದಾಗಿದೆ. ಈಗಾಗಲೇ ಹಲವು ಕಂಪನಿಗಳು ಚೀನಾದಿಂದ ಕಾಲ್ಕಿತ್ತಿದೆ. ಕೆಲ ಕಂಪನಿಗಳು ಭಾರತಕ್ಕೆ ಆಗಮಿಸಿದೆ. ಇದೀಗ ಆಟೋಮೊಬೈಲ್ ದಿಗ್ಗಜ ಕಂಪನಿ ವೋಕ್ಸ್‌ವ್ಯಾಗನ್ ಸ್ಕೋಡಾ ಚೀನಾದಲ್ಲಿನ ಉತ್ಪಾದನೆಗೆ ಗುಡ್ ಬೈ ಹೇಳಲು ಮುಂದಾಗಿದೆ. ಮುಂದಿನ ವರ್ಷದಿಂದ ಭಾರತದಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸಲು ವೋಕ್ಸ್‌ವ್ಯಾಗನ್ ಸ್ಕೋಡಾ ಮುಂದಾಗಿದೆ. 

ಚೀನಾದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಇದರ ಜೊತೆಗೆ ಕೋವಿಡ್ ಸಮಸ್ಯೆ, ಕಠಿಣ ನಿರ್ಬಂಧ, ಶೂನ್ಯ ಕೋವಿಡ್ ಪಾಲಿಸಿಗಳಿಂದ ಚೀನಾದಲ್ಲಿ ಉತ್ಪಾದನೆ ಕುಂಠಿತವಾಗುತ್ತಿದೆ. ತಿಂಗಳುಗಳ ಕಾಲ ಕಂಪನಿಗಳನ್ನು, ಘಟಕಗಳನ್ನು ಮುಚ್ಚಿ ಉದ್ಯೋಗಿಗಳಿಗೆ ವೇತನ ನೀಡಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಇದರಿಂದ ಆಟೋಮೊಬೈಲ್ ಕಂಪನಿಗಳಿಗೆ ತೀವ್ರ ಸಮಸ್ಯೆಯಾಗಿದೆ. ಹೀಗಾಗಿ ಚೀನಾದಲ್ಲಿ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ವೋಕ್ಸ್‌ವ್ಯಾಗನ್ ಸ್ಕೋಡಾ ಮುಂದಾಗಿದೆ. ಚೀನಾದಲ್ಲಿನ ಉತ್ಪಾದನಾ ಪಾರ್ಟ್ನರ್ ಜೊತೆಗೆ ಮಾತುಕತೆ ನಡೆಸಿ ನಿರ್ಧಾರ ಘೋಷಿಸಲು ವೋಕ್ಸ್‌ವ್ಯಾಗನ್ ಸ್ಕೋಡಾ ನಿರ್ಧರಿಸಿದೆ.

ಭಾರತದಲ್ಲಿ ಕೊನೆಯ ಪೋಲೋ ವಾಹನ ವಿತರಿಸಿದ ಫೋಕ್ಸ್ವ್ಯಾಗನ್

ಚೀನಾದ ಉತ್ಪಾದನೆ ಸ್ಥಗಿತಗೊಳಿಸಿ, ಸಂಪೂರ್ಣವಾಗಿ ಭಾರತದಲ್ಲಿ ಹೆಚ್ಚು ಗಮನಕೇಂದ್ರಿಕರಿಸಲು ವೋಕ್ಸ್‌ವ್ಯಾಗನ್ ಸ್ಕೋಡಾ ಮುಂದಾಗಿದೆ. ಭಾರತದಲ್ಲಿ ವೋಕ್ಸ್‌ವ್ಯಾಗನ್ ಸ್ಕೋಡಾ ವಾಹನಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಬೇಡಿಕೆಯೂ ಹೆಚ್ಚಾಗಿದೆ. ಹೀಗಾಗಿ ಭಾರತದಲ್ಲಿ ಉತ್ಪಾದನೆ ಹೆಚ್ಚಳ ಮಾಡಿ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ವೋಕ್ಸ್‌ವ್ಯಾಗನ್ ಸ್ಕೋಡಾ ನಿರ್ಧರಿಸಿದೆ.

ಮುಂದಿನ ವರ್ಷ ಚೀನಾ ಉತ್ಪಾನೆ ಸ್ಥಗಿತ ಕುರಿತು ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಸದ್ಯ ಭಾರತದಲ್ಲಿ ಉತ್ಪಾದನೆ ವೇಗ ಹೆಚ್ಚಿಸಲಾಗಿದೆ. ಭಾರತದ ಮಾರುಕಟ್ಟೆಗೆ ಅತ್ಯುತ್ತಮ ವಾಹನ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವೋಕ್ಸ್‌ವ್ಯಾಗನ್ ಸಿಇಒ ಕ್ಲಾಸ್ ಜೆಲ್ಮೆರ್ ಹೇಳಿದ್ದಾರೆ.

ಒಂದೇ ದಿನ 150 ವರ್ಟಸ್‌ ಸೆಡಾನ್‌ ವಿತರಿಸಿ ದಾಖಲೆ ನಿರ್ಮಿಸಿದ ವೋಕ್ಸ್‌ವ್ಯಾಗನ್

ಚೀನಾದಲ್ಲಿ ಉತ್ಪಾದನೆ ನಿಲ್ಲಿಸಿ, ಭಾರತದಲ್ಲಿ ಉತ್ಪಾದನೆ ಹೆಚ್ಚಿಸಲು ವೋಕ್ಸ್ ವ್ಯಾಗನ್ ತಯಾರಿ ಮಾಡಿಕೊಂಡಿದೆ. ಬಳಿಕ ಭಾರತದಿಂದ ಚೀನಾ ಸೇರಿದಂತೆ ಇತರ ದೇಶಗಳಿಗೆ ರಫ್ತು ಮಾಡಲು ವೋಕ್ಸ್‌ವ್ಯಾಗನ್ ಪ್ಲಾನ್ ರೂಪಿಸಿದೆ. ಹೀಗಾದಲ್ಲಿ ಚೀನಾದಿಂದ ಒಂದೊಂದೆ ಕಂಪನಿಗಳು ಕಾಲ್ಕೀಳುವ ಸಂಪ್ರದಾಯ ಮತ್ತೆ ಹೆಚ್ಚಾಗುವ ಆತಂಕ ಶರುವಾಗಿದೆ. 

ಆ್ಯಪಲ್ ಮತ್ತೊಂದು ಕಾರ್ಯಾಚರಣೆ
ಕೋವಿಡ್‌ ವಿಷಯದಲ್ಲಿ ಶೂನ್ಯ ಸಹಿಷ್ಣು ನೀತಿ ಜಾರಿಯಾದ ಬಳಿಕ ಚೀನಾದ ಐಫೋನ್‌ ಉತ್ಪಾದನಾ ಘಟಕಗಳಲ್ಲಿ ಉಂಟಾಗಿರುವ ಪ್ರತಿಭಟನೆಗಳು, ಆ್ಯಪಲ್‌ ಕಂಪನಿಯು ತನ್ನ ಘಟಕಗಳನ್ನು ಭಾರತ ಮತ್ತು ವಿಯೆಟ್ನಾಂಗೆ ವರ್ಗಾಯಿಸಲು ಚಿಂತಿಸುವಂತೆ ಮಾಡಿದೆ ಎಂದು ವರದಿಯೊಂದು ಹೇಳಿದೆ. ಐಫೋನ್‌ ಘಟಕಗಳಲ್ಲಿ ಭಾರೀ ಪ್ರತಿಭಟನೆ ಹಿನ್ನೆಲೆಯಲ್ಲಿ ಹೊಸದಾಗಿ ಬಿಡುಗಡೆಯಾದ ಐಫೋನ್‌ 14 ಪ್ರೋ ಮಾದರಿಯ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ ಚೀನಾದ ಮೇಲಿನ ಪೂರ್ಣ ಅವಲಂಬನೆ ಕಡಿಮೆ ಮಾಡಿ ಭಾರತ ಅಥವಾ ವಿಯೆಟ್ನಾಂನಲ್ಲಿ ಕಂಪನಿಯ ಅಸೆಂಬ್ಲಿಂಗ್‌ ಘಟಕ ಆರಂಭಿಸುವ ಬಗ್ಗೆ ಕಾರ್ಯಪ್ರವೃತ್ತವಾಗುವಂತೆ ತನ್ನ ಪೂರೈಕೆದಾರರಿಗೆ ಆ್ಯಪಲ್‌ ಸಂಸ್ಥೆ ಸೂಚನೆ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.
 

click me!