ಏಪ್ರಿಲ್ 1 ರಿಂದ ಕರ್ನಾಟಕದ 66 ಟೋಲ್ ಪ್ಲಾಜಾಗಳಲ್ಲಿ ಶೇ.3 ರಿಂದ ಶೇ.5 ರಷ್ಟು ಟೋಲ್ ದರ ಹೆಚ್ಚಳವಾಗಲಿದೆ. ಬೆಂಗಳೂರು ಸುತ್ತಮುತ್ತಲಿನ ಪ್ರಮುಖ ಟೋಲ್ ಪ್ಲಾಜಾಗಳಲ್ಲಿಯೂ ದರ ಏರಿಕೆಯಾಗಲಿದೆ.
ಬೆಂಗಳೂರು (ಮಾ.26): ರಾಜ್ಯದಲ್ಲಿ ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಏಪ್ರಿಲ್ ತಿಂಗಳಿಂದ ಮತ್ತೊಂದು ಬರೆ ಬೀಳಲಿದೆ. ಏಪ್ರಿಲ್ 1 ರಂದು ರಾಜ್ಯಾದ್ಯಂತ ಇರುವ 66 ಪ್ಲಾಜಾಗಳಲ್ಲಿ ಟೋಲ್ ದರಗಳು ಶೇ. 3 ರಿಂದ ಶಢ.5 ರಷ್ಟು ಹೆಚ್ಚಾಗಲಿವೆ. ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ.
ಬೆಂಗಳೂರಿನ ಸುತ್ತಲೂ ಇರುವ ಪ್ರಮುಖ ಹೆದ್ದಾರಿಗಳ ಟೋಲ್ ಪ್ಲಾಜಾಗಳಾದ ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ (ಬೆಂಗಳೂರು-ಮೈಸೂರು), ನಂಗ್ಲಿ (ಬೆಂಗಳೂರು-ತಿರುಪತಿ), ಬಾಗೇಪಲ್ಲಿ (ಬೆಂಗಳೂರು-ಹೈದರಾಬಾದ್), ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ), ಮತ್ತು ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ) ಸೇರಿದಂತೆ ಎಲ್ಲ ಟೋಲ್ ಪ್ಲಾಜಾಗಳಲ್ಲಿ ದರ ಹೆಚ್ಚಳ ಅನ್ವಯವಾಗಲಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ರಸ್ತೆ ಬಳಕೆದಾರರಿಗೆ ಕೆಲವು ರಿಯಾಯಿತಿಗಳನ್ನು ನೀಡಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕಗಳಿಗೆ ನೀತಿಯನ್ನು ಪರಿಚಯಿಸಲು ಸಜ್ಜಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾರ್ಚ್ 19 ರಂದು ರಾಜ್ಯಸಭೆಗೆ ತಿಳಿಸಿದ್ದು, 2023-24 ರಲ್ಲಿ ಭಾರತದಲ್ಲಿ ಒಟ್ಟು ಟೋಲ್ ಸಂಗ್ರಹವು 64,809.86 ಕೋಟಿ ರೂ.ಗಳನ್ನು ತಲುಪಿದೆ, ಇದು ಹಿಂದಿನ ವರ್ಷಕ್ಕಿಂತ 35% ಹೆಚ್ಚಾಗಿದೆ. 2019-20 ರಲ್ಲಿ ಸಂಗ್ರಹವು 27,503 ಕೋಟಿ ರೂ.ಗಳಷ್ಟಿತ್ತು. ಇದೀಗ ಮತ್ತಷ್ಟು ಹೆಚ್ಚು ಹಣ ಸಂಗ್ರಹವಾಗಲಿದೆ.
ಇದನ್ನೂ ಓದಿ: ಎಟಿಎಂನಲ್ಲಿ ಹಣ ಡ್ರಾ ಮಾಡುವುದು ಇನ್ನು ಮುಂದೆ ದುಬಾರಿ: ವಿತ್‌ಡ್ರಾ ಶುಲ್ಕ ಹೆಚ್ಚಳ
ಕರ್ನಾಟಕದಲ್ಲಿ 66 ಟೋಲ್ ಪ್ಲಾಜಾಗಳಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಎಲ್ಲಾ ಟೋಲ್ ಪ್ಲಾಜಾಗಳನ್ನು ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹದ ನಿರ್ಣಯ) ನಿಯಮಗಳು, 2008 ಮತ್ತು ಸಂಬಂಧಿತ ರಿಯಾಯಿತಿ ಒಪ್ಪಂದದ ಪ್ರಕಾರ ಸ್ಥಾಪಿಸಲಾಗಿದೆ. ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರಯಾಣ ನಿರ್ವಾಹಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ತಿಳಿಸಿದ್ದಾರೆ.
2008 ರ ನಿಯಮಗಳಿಗೆ ಅನುಸಾರವಾಗಿ ಸಗಟು ಬೆಲೆ ಸೂಚ್ಯಂಕವನ್ನು ಆಧರಿಸಿ ಶುಲ್ಕಗಳನ್ನು ಹೆಚ್ಚಿಸಲಾಗಿದೆ. ಇದು ಪೂರ್ವನಿಯೋಜಿತ ಹೆಚ್ಚಳವಾಗಿದೆ. ನಾವು ಪ್ರವಾಸಿ ಕ್ಯಾಬ್‌ಗಳು ಮತ್ತು ಟ್ಯಾಕ್ಸಿಗಳನ್ನು ನಿರ್ವಹಿಸುತ್ತೇವೆ ಮತ್ತು ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸುತ್ತೇವೆ' ಎಂದು ಖಾಸಗಿ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡದ್ದಾರೆ.
ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೊಂದು ದರ ಏರಿಕೆ ಬಿಸಿ, ಏಪ್ರಿಲ್‌ನಿಂದ ವಾಹನ ಖರೀದಿ ದುಬಾರಿ