2022ರ ಏ.1ರಿಂದ 15 ವರ್ಷ ಹಳೆಯ ಸರ್ಕಾರಿ ವಾಹನಗಳು ರಸ್ತೆಯಿಂದ ಔಟ್| ಹಳೆಯ ವಾಹನ ಗುಜರಿಗೆ ಹಾಕುವ ಯೋಜನೆ ಕರಡು ವರದಿ ಪ್ರಕಟ| 15 ವರ್ಷ ಹಳೆಯ ಸರ್ಕಾರಿ ವಾಹನ ನೋಂದಣಿ ನವೀಕರಣ ಬಂದ್
ನವದೆಹಲಿ(ಮಾ.14): ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ 15 ವರ್ಷ ಹಳೆಯ ಸರ್ಕಾರಿ ವಾಹನಗಳನ್ನು ರಸ್ತೆಯಿಂದ ಹಿಂದಕ್ಕೆ ಪಡೆಯುವ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ಕೊಟ್ಟಿದೆ. ಈ ಕುರಿತು ಕರಡು ಮಸೂದೆ ಬಿಡುಗಡೆ ಮಾಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2022ರ ಏ.1ರಿಂದ 15 ವರ್ಷದಷ್ಟುಹಳೆಯದಾದ ಸರ್ಕಾರಿ ವಾಹನಗಳ ನೋಂದಣಿಯನ್ನು ನವೀಕರಣ ಮಾಡುವುದಿಲ್ಲ ಎಂದು ಪ್ರಕಟಿಸಿದೆ. ಈ ಸಂಬಂಧ ಅದು ಸಲಹೆ, ಆಕ್ಷೇಪ, ಅಭಿಪ್ರಾಯಗಳನ್ನು ಆಹ್ವಾನಿಸಿದೆ.
ಒಂದು ವೇಳೆ ಈ ಕರಡು ವರದಿ ಯಥಾವತ್ತಾಗಿ ಜಾರಿಗೆ ಬಂದರೆ 2022ರ ಏ.1ಕ್ಕೆ 15 ವರ್ಷ ಪೂರೈಸಲಿರುವ ಯಾವುದೇ ಸರ್ಕಾರಿ ವಾಹನಗಳ ನೋಂದಣಿಯನ್ನು ನವೀಕರಣ ಮಾಡುವುದು ಸಾಧ್ಯವಿಲ್ಲ.
ಏನಿದು ಯೋಜನೆ?:
ಕೇಂದ್ರ ಸರ್ಕಾರ ಇತ್ತೀಚಿನ ಬಜೆಟ್‌ನಲ್ಲಿ ಸ್ವಯಂಪ್ರೇರಿತ ವಾಹನಗಳನ್ನು ರಸ್ತೆಯಿಂದ ಹಿಂದಕ್ಕೆ ಪಡೆಯುವ ಯೋಜನೆಯನ್ನು ಪ್ರಕಟಿಸಿತ್ತು. ಅದರನ್ವಯ ರಸ್ತೆಗಿಳಿದ 20 ವರ್ಷದ ನಂತರ ಕಾರು, ಬೈಕ್‌ನಂತಹ ಖಾಸಗಿ ವಾಹನಗಳ ತಪಾಸಣೆ ನಡೆಯಬೇಕು ಹಾಗೂ 15 ವರ್ಷದ ನಂತರ ಲಾರಿ, ಬಸ್ಸಿನಂತಹ ವಾಣಿಜ್ಯಿಕ ವಾಹನಗಳ ಪರೀಕ್ಷೆ ನಡೆಸಬೇಕು. ಪರೀಕ್ಷೆ ಸಂದರ್ಭದಲ್ಲಿ ವಾಹನವು ತನ್ನ ಕ್ಷಮತೆ ಕಳೆದುಕೊಂಡಿದ್ದು ಸಾಬೀತಾದರೆ ಅವುಗಳನ್ನು ಗುಜರಿಗೆ ಹಾಕಬೇಕಾಗುತ್ತದೆ. ಈ ಪೈಕಿ ಇದೀಗ ಸರ್ಕಾರಿ ವಾಹನಗಳಿಗೆ ಸಂಬಂಧಿಸಿದ ನಿಯಮಗಳ ಕುರಿತ ಕರಡು ಮಸೂದೆ ಬಿಡುಗಡೆ ಮಾಡಲಾಗಿದೆ. ಖಾಸಗಿ ವಾಹನಗಳನ್ನು ಗುಜರಿಗೆ ಹಾಕುವ ನೀತಿಯ ಕುರಿತು ಈ ಮಸೂದೆಯಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ.
ಯಾರಿಗೆ ಅನ್ವಯ?:
ಕೇಂದ್ರ, ರಾಜ್ಯ ಸರ್ಕಾರದ ವಾಹನಗಳು, ಕೇಂದ್ರಾಡಳಿತ ಪ್ರದೇಶ, ಸರ್ಕಾರಿ ಸ್ವಾಮ್ಯದ ಉದ್ಯಮಗಳು, ಮುನಿಸಿಪಲ್, ಸ್ವಾಯತ್ತ ಸಂಸ್ಥೆಗಳ ವಾಹನಗಳಿಗೆ ಈ ನೀತಿ ಅನ್ವಯವಾಗಲಿದೆ.
ಯೋಜನೆ ಏಕೆ?:
ಹೊಸ ವಾಹನಗಳಿಗೆ ಹೋಲಿಸಿದರೆ ಹಳೆಯ ವಾಹನಗಳು 10-12 ಪಟ್ಟು ಹೆಚ್ಚು ಮಾಲಿನ್ಯ ಉಂಟು ಮಾಡುತ್ತವೆ. ಇಂಥ ವಾಹನಗಳನ್ನು ಹಿಂದಕ್ಕೆ ಪಡೆಯುವುದರಿಂದ ಪರಿಸರ ಸ್ನೇಹಿ ಮತ್ತು ಇಂಧನ ಕ್ಷಮತೆಯ ವಾಹನ ಸಂಚಾರ ಸಾಧ್ಯವಾಗುತ್ತದೆ. ಜೊತೆಗೆ ಈ ಯೋಜನೆಯಿಂದಾಗಿ ಹಳೆಯ ವಾಹನ ಉದ್ಯಮದಲ್ಲಿ 10000 ಕೋಟಿ ರು. ಬಂಡವಾಳ ಹೂಡಿಕೆಯಾಗಲಿದೆ, 50000 ಜನರಿಗೆ ಉದ್ಯೋಗ ಸಿಗುತ್ತದೆ ಎಂಬುದು ಸರ್ಕಾರದ ಆಶಯ.