ಗುಜರಿ ನೀತಿಯಡಿ ಹಳೆಯ ವಾಹನ ತ್ಯಜಿಸಿ ಹೊಸ ವಾಹನ ಖರೀದಿಸಿದ್ರೆ ಶೇ.5ರಷ್ಟು ರಿಯಾಯ್ತಿ!

By Suvarna NewsFirst Published Mar 8, 2021, 4:47 PM IST
Highlights

ಕೇಂದ್ರ ಸರಕಾರ ಈಗಾಗಲೇ ಸ್ವಯಂ ವಾಹನ ಗುಜರಿ ನೀತಿ ಜಾರಿಯನ್ನು ಘೋಷಿಸಿದೆ. ಈ ನೀತಿಯಡಿ ತಮ್ಮ ಹಳೆಯ ವಾಹನಗಳನ್ನು ಕೊಟ್ಟು ಹೊಸ ವಾಹನ ಖರೀದಿಸಿದರೆ ಶೇ.4ರಷ್ಟು ರಿಯಾಯ್ತಿಯನ್ನು ಆಟೋ ಕಂಪನಿಗಳು ನೀಡಲಿವೆ. ಜೊತೆಗೆ ಸರಕಾರ ಸೂಚಿಸಿದ ವಯಸ್ಸಿನ ಮಿತಿ ದಾಟಿದ ಹಳೆಯ ವಾಹನಗಳು ಪರೀಕ್ಷೆಯಲ್ಲಿ ಫೇಲ್ ಆದರೆ ದಂಡದ ಜೊತೆಗೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.

ಇತ್ತೀಚೆಗಷ್ಟೇ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಸ್ವಯಂ ಗುಜರಿ ನೀತಿ ಜಾರಿ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದರು. ಆದರೆ, ಈ ಗುಜರಿ ನೀತಿ ಹೇಗೆ ಕಾರ್ಯನಿರ್ವಹಿಸಲಿದೆ, ಯಾರಿಗೆ ಅನ್ವಯಿಸುತ್ತದೆ, ಹಳೆಯ ವಾಹನಗಳ ಒಡೆತನ ಹೊಂದಿರುವ ಮಾಲೀಕರಿಗೆ ಏನು ಸಿಗಲಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಯಾವುದೇ ಉತ್ತರ ಇರಲಿಲ್ಲ.

ಇದೀಗ ಗುಜರಿ ನೀತಿ  ಬಗ್ಗೆ ನಿಧನಾವಾಗಿ ಒಂದೊಂದೇ ಮಾಹಿತಿಗಳು ಹೊರಬೀಳಲಾರಂಭಿಸಿವೆ. ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ, ವಾಹನ ಗುಜರಿ ನೀತಿಯಡಿಯಲ್ಲಿ ಯಾವ ಗ್ರಾಹಕರು ತಮ್ಮ ಹಳೆಯ ವಾಹನವನ್ನು ತ್ಯಜಿಸಿ ಹೊಸ ವಾಹನವನ್ನು ಖರೀದಿಸುತ್ತಾರೋ ಅವರಿಗೆ ಆಟೋ ಕಂಪನಿಗಳಿಂದ ಶೇ.5ರಷ್ಟು ರಿಯಾಯ್ತಿ ಸಿಗಲಿದೆ ಎಂದು ಹೇಳಿದ್ದಾರೆ.

ಮಾರ್ಚ್ ಆಫರ್: Renault ಕಾರುಗಳ ಖರೀದಿಯ ಮೇಲೆ 75 ಸಾವಿರ ರೂ.ವರೆಗೆ ಲಾಭ

ಈ ಮೊದಲೇ ಹೇಳಿದಂತೆ ಸ್ವಯಂ ಗುಜರಿ ನೀತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದರು. ಆದರೆ, ಆಗ ಈ ಕುರಿತು ವಿವರವಾದ ಮಾಹಿತಿಯನ್ನೇನೂ ನೀಡಿರಲಿಲ್ಲ. ಕೋವಿಡ್ 19 ಪರಿಣಾಮದಿಂದ ತೀವ್ರ ಹೊಡೆತ ತಿಂದಿರುವ ಆಟೋಮೊಬೈಲ್ ವಲಯದ ಪುನರುತ್ಥಾನಕ್ಕೆ ಈ ಸ್ವಯಂ ಗುಜರಿ ನೀತಿ ಬಲ ನೀಡಲಿದೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ವಾಹನ ಗುಜರಿ ನೀತಿಯ ಲಾಭಗಳ ಬಗ್ಗೆ ಮಾತನಾಡುತ್ತಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ರಿಯಾಯ್ತಿ ಮಾತ್ರವಲ್ಲದೇ, ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಹಳೆಯ ವಾಹನಗಳ ಮೇಲೆ ಗ್ರೀನ್ ಟ್ಯಾಕ್ಸ್ ಮತ್ತು ಲೆವಿ ಹೇರುವ ಅವಕಾಶಗಳೂ ಇವೆ. ವಾಹನಗಳು ಸ್ವಯಂಚಾಲಿತ ಸೌಲಭ್ಯಗಳಲ್ಲಿ ಕಡ್ಡಾಯವಾಗಿ ಫಿಟ್ನೆಸ್ ಮತ್ತು ಮಾಲಿನ್ಯ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ ಎಂದು ಹೇಳಿದರು.

ವಾಹನ ಗುಜರಿ ನೀತಿಯಡಿಯಲ್ಲಿ 20 ವರ್ಷಗಳಷ್ಟು ಹಳೆಯದಾದ ವೈಯಕ್ತಿಕ ಬಳಕೆಯ ವಾಹನಗಳು ಹಾಗೂ 15 ವರ್ಷಗಳಷ್ಟು ಹಳೆಯದಾದ ಕಮರ್ಷಿಯಲ್ ವಾಹನಗಳು ಪರೀಕ್ಷೆಗೊಳಪಡಬೇಕಾಗುತ್ತದೆ. ಈ ಆಟೋಮೆಟೆಡ್ ಫಿಟ್ನೆಸ್‌ ಪರೀಕ್ಷೆ ಸೌಲಭ್ಯಗಳನ್ನು ಸಾರ್ವಜನಿಕ ಖಾಸಗಿ ಜಂಟಿ ಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ಪ್ರತಿಷ್ಠಾಪಿಸಲಾಗುವುದು. ಈ ಸ್ಕ್ರ್ಯಾಪಿಂಗ್ ಸೆಂಟರ್‌ಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹಾಗೂ ಖಾಸಗಿ ಕಂಪನಿಗಳಿಗೆ ಕೇಂದ್ರ ಸರಕಾರವು ನೆರವು ಒದಗಿಸುತ್ತದೆ. ಆಟೋಮೆಟೆಡ್ ಟೆಸ್ಟ್‌ನಲ್ಲಿ ವಿಫಲವಾಗುವ ವಾಹನಗಳ ಮಾಲೀಕರಿಗೆ ಸಿಕ್ಕಾಪಟ್ಟೆ ದಂಡ ಹಾಕಲಾಗುತ್ತದೆ ಮತ್ತು ಅಂಥ ವಾಹನಗಳನ್ನು ಮುಟ್ಟುಗೋಲು ಕೂಡ ಹಾಕಿಕೊಳ್ಳಬಹುದು.

ಹೋಂಡಾ ಕಾರುಗಳ ಮೇಲೆ ಭರ್ಜರಿ ಆಫರ್, ಮಾರ್ಚ್‌ ಅಂತ್ಯದವರೆಗೆ ಮಾತ್ರ!

ಒಂದು ಅಂದಾಜಿನ ಪ್ರಕಾರ ಈ ಗುಜರಿ ನೀತಿ ಅನುಷ್ಠಾನದಿಂದ ಭಾರತೀಯ ಆಟೋಮೊಬೈಲ್ ಉದ್ಯಮದ ಶೇ.30ರಷ್ಟು ಬೆಳವಣಿಗೆಗೆ ಕಾರಣವಾಗಲಿದೆ. ಈಗ ಉದ್ಯಮ ನಡೆಸುತ್ತಿರುವ ವಾರ್ಷಿಕ 4.5 ಲಕ್ಷ ಕೋಟಿ ವಹಿವಾಟು ಬದಲಿಗೆ ವಾರ್ಷಿಕವಾಗಿ 10 ಲಕ್ಷ ಕೋಟಿ ವಹಿವಾಟು ನಡೆಸಲಿದೆ ಎನ್ನುತ್ತಾರೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು.

ಆಟೋಮೊಬೈಲ್ ಉದ್ಯಮದಲ್ಲಿ ರಫ್ತು ವಹಿವಾಟು ವಾರ್ಷಿಕ 1.45 ಲಕ್ಷ ಕೋಟಿ ರೂಪಾಯಿ ಇದ್ದು ಅದು ಕೂಡ ಗುಜರಿ ನೀತಿ ಜಾರಿಯಿಂದಾಗಿ 3 ಲಕ್ಷ ಕೋಟ ರೂಪಾಯಿವರೆಗೂ ಆಗಲಿದೆ. ಪೂರ್ಣ ಪ್ರಮಾಣದಲ್ಲಿ ಈ ವಾಹನ ಗುಜರಿ ನೀತಿ ಜಾರಿಯಾದರೆ ಕಬ್ಬಿಣ, ಪ್ಲಾಸ್ಟಿಕ್, ರಬ್ಬರ್, ಅಲ್ಯುಮಿನಿಯಮ್ ಇತ್ಯಾದಿ ಲಭ್ಯತೆ ಹೆಚ್ಚಾಗಲಿದೆ. ಇದೇ ವಸ್ತುಗಳನ್ನು ನಾವು ಪುನಃ ಬಿಡಿ ಭಾಗಗಳ ತಯಾರಿಕೆಗೆ ಬಳಸಿಕೊಳ್ಳಬಹುದು. ಇದರಿಂದ ಶೇ.30ರಿಂದ 40ರಷ್ಟು ವೆಚ್ಚವನ್ನು ತಗ್ಗಿಸಬಹುದು ಎನ್ನುತ್ತಾರೆ ಸಚಿವ ನಿತಿನ್ ಗಡ್ಕರಿ ಅವರು.

ಭಾರತದಲ್ಲಿ ಉತ್ಪಾದಿಸಿದ 20 ಲಕ್ಷ ಕಾರನ್ನು ವಿದೇಶಕ್ಕೆ ರಫ್ತು ಮಾಡಿದ ಮಾರುತಿ!

ಗುಜರಿ ನೀತಿಯಿಂದ ಜಾರಿಯಿಂದ ಇಂಧನ ಕ್ಷಮತೆಯ ವಾಹನಗಳ ಸಂಖ್ಯೆಯೂ ಹೆಚ್ಚಲಿದೆ. ಹಸಿರು ಇಂಧನ ಮತ್ತು ವಿದ್ಯುತ್ ಮಾತ್ರವಲ್ಲದೇ ಇಂಧನ ಕ್ಷಣತೆಯ ವಾಹನಗಳ ಜತೆಗೆ ಹೊಸ ತಂತ್ರಜ್ಞಾನಕ್ಕೆ ಒತ್ತು ಸಿಗಲಿದೆ. ಇದರ ಪರಿಣಾಮ, 18 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆಯಲ್ಲಿರು ಕಚ್ಚಾ ತೈಲ ಆಮದು ವಹಿವಾಟನಲ್ಲಿ ಕನಿಷ್ಠ 8 ಲಕ್ಷ ಕೋಟಿ ರೂ. ಕಡಿಮೆ ಮಾಡಲು ಇದರಿಂದ ಸಾಧ್ಯವಾಗಲಿದೆ ಎನ್ನಲಾಗುತ್ತಿದೆ.

ಈ ಹೊಸ ಗುಜರಿ ನೀತಿ ಜಾರಿಗೆ ಬಗ್ಗೆ ಹಲವು ದಿನಗಳಿಂದ  ಕೇಳಿ ಬರುತ್ತಿದೆ. ಕೇಂದ್ರ ಸರಕಾರ ಕೂಡ ನೀತಿ ಜಾರಿಗೆ ಆಸಕ್ತಿ ತೋರಿಸುತ್ತಿದೆ. ಸದ್ಯಕ್ಕೆ ಈ ನೀತಿ ಸ್ವಯಂ ಸ್ವರೂಪದಲ್ಲಿ. ಆದರೆ, ಈ ನೀತಿ ಬಗ್ಗೆ ವ್ಯಾಪಕ ವಿರೋಧಗಳು ಕೇಳಿ ಬರುತ್ತಿವೆ. ಹಳೆಯ ವಾಹನ ಮಾಲೀಕರ ಮೇಲೆ ಈ ನೀತಿಯ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದು ವಿರೋಧಕ್ಕೆ ಕಾರಣವಾಗಿದೆ.

click me!