ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶ ಇಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ನೀಡಿದ ನಿರ್ಬಂಧ ಆದೇಶವನ್ನು ಪೊಲೀಸ್ ಇಲಾಖೆ ಹಿಂಪಡೆದಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಮಂಗಳೂರು (ಆ.04): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶ ಇಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ನೀಡಿದ ನಿರ್ಬಂಧ ಆದೇಶವನ್ನು ಪೊಲೀಸ್ ಇಲಾಖೆ ಹಿಂಪಡೆದಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದು, ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆ ಆದೇಶ ವಾಪಾಸ್ ಪಡೆಯಲಾಗಿದ್ದು, ತತ್‌ಕ್ಷಣದಿಂದ ಆದೇಶವನ್ನು ಪೊಲೀಸ್ ಇಲಾಖೆ ವಾಪಾಸ್ ಪಡೆದಿದೆ. ಇನ್ನು ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವೆರೆಗೆ ಬೈಕ್‌ನಲ್ಲಿ ಹಿಂಬದಿ ಸವಾರರಿಗೆ ಪೊಲೀಸ್ ಇಲಾಖೆ ನಿರ್ಬಂಧ ವಿಧಿಸಿತ್ತು. ಸದ್ಯ ಭಾರೀ ವಿರೋಧದ ಬೆನ್ನಲ್ಲೇ ಆದೇಶವನ್ನು ವಾಪಾಸ್ ಪಡೆಯಲಾಗಿದ್ದು, ಪರಿಷ್ಕೃತ ಅಧಿಕೃತ ಆದೇಶ ಹೊರಡಿಸುವ ಬಗ್ಗೆ ಕಮಿಷನರ್ ಮಾಹಿತಿ ನೀಡಿದ್ದಾರೆ.
ಪ್ರವೀಣ್ ಮತ್ತು ಮಸೂದ್ ಪ್ರಕರಣದ ತನಿಖೆ ಮಾಹಿತಿ ಪಡೆದಿದ್ದೇನೆ: ಎಡಿಜಿಪಿ ಅಲೋಕ್ ಕುಮಾರ್ ಬೆಳ್ಳಾರೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಬಳಿಕ ಪ್ರವೀಣ್ ಮತ್ತು ಮಸೂದ್ ಪ್ರಕರಣದ ತನಿಖೆ ಮಾಹಿತಿ ಪಡೆದಿದ್ದೇನೆ. ಸಂಗ್ರಹಿಸಿದ ಸಾಕ್ಷ್ಯ, ವಶಕ್ಕೆ ಪಡೆದ ವಸ್ತುಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಯಾವ ರೀತಿ ತನಿಖೆ ಆಗ್ತಿದೆ ಅನ್ನೋ ಬಗ್ಗೆ ಕೂಡಾ ಮಾಹಿತಿ ಪಡೆದಿದ್ದೇನೆ. ಎನ್‌ಐಎಗೆ ಕೊಟ್ಟಿದ್ದರೂ ಕೂಡ ಕರ್ನಾಟಕ ಪೊಲೀಸರು ತನಿಖೆ ಮಾಡುತ್ತಾರೆ. ಸದ್ಯ ಎನ್‌ಐಎಗೆ ಹಸ್ತಾಂತರ ಆಗಿಲ್ಲ, ಆದರೂ ಅವರಿಗೆ ಬೆಂಬಲ ಕೊಡ್ತೇವೆ. ಎನ್‌ಐಎಗೆ ಹಸ್ತಾಂತರ ಆದ ತಕ್ಷಣ ಅವರು ಬಂದು ಮಾಹಿತಿ ಪಡೀತಾರೆ. ಈಗಾಗಲೇ ಎನ್‌ಐಎ ನಮ್ಮ ಸಂಪರ್ಕದಲ್ಲಿದ್ದು, ನಾವು ಅವರಿಗೆ ಮಾಹಿತಿ ಶೇರ್ ಮಾಡ್ತಾ ಇದೀವಿ. ಎನ್‌ಐಎ ಹಾಗೂ ಬೇರೆ ಕೇಂದ್ರಿಯ ತನಿಖಾ ದಳದ ಜೊತೆಗೂ ಪ್ರವೀಣ್ ಕೇಸ್ ಮಾಹಿತಿ ಹಂಚಿದ್ದೇವೆ ಎಂದರು.
ಕಾಳಿ ಮಠದ ಋಷಿಕುಮಾರ್ ಸ್ವಾಮೀಜಿ ವಿರುದ್ಧ ಕಾನೂನು ಕ್ರಮ: ಎಡಿಜಿಪಿ ಅಲೋಕ್ ಕುಮಾರ್
ನೈಟ್ ಕರ್ಫ್ಯೂ 8 ಗಂಟೆಯಿಂದ ಹಾಕುವ ಬಗ್ಗೆ ಮುಂದೆ ಡಿಸಿ ನಿರ್ಧರಿಸ್ತಾರೆ: ಇನ್ನು ನೈಟ್ ಕರ್ಫ್ಯೂನಲ್ಲಿ ಎರಡು ಮೂರು ಗಂಟೆ ವಿನಾಯಿತಿ ನೀಡುವ ಬಗ್ಗೆ ಚಿಂತಿಸಲಾಗಿದ್ದು, ಈ ಬಗ್ಗೆ ಮುಂದೆ ಡಿಸಿ ನಿರ್ಧರಿಸುತ್ತಾರೆ. ನಮಗೆ ಪ್ರವೀಣ್ ಕೇಸ್ ನಲ್ಲಿ ಭಾಗಿಯಾದವರ ಸುಳಿವು ಸಿಕ್ಕಿದೆ. ನೇರವಾಗಿ ಭಾಗಿಯಾದವರು ಮೊದಲೇ ಅಲರ್ಟ್ ಆಗಿರ್ತಾರೆ. ಆದರೆ ನಮಗೆ ಅವರ ಗುರುತಿನ ಬಗ್ಗೆ ಪತ್ತೆಯಿದೆ. ಸದ್ಯ ಪ್ರಮುಖ ಆರೋಪಿಗಳು ಅವರ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಕೊಲೆಗಾರರನ್ನ ಕರ್ನಾಟಕ ಪೊಲೀಸರೇ ಹಿಡಿಯಬೇಕು. ಎನ್‌ಐಎಗೆ ಮೊದಲು ನಾವೇ ಅವರನ್ನು ಹಿಡಿಯಬೇಕು. ಅವರು ನಮಗೆ ತುಂಬಾ ಹತ್ತಿರ ಇದಾರೆ, ಹಿಡೀತಿವಿ ಎಂದು ಅಲೋಕ್ ಕುಮಾರ್ ತಿಳಿಸಿದರು.
ಫಾಝಿಲ್ ಹತ್ಯೆ-ಶಂಕಿತರ ಸುಳಿವು ಪತ್ತೆ: ಸುರತ್ಕಲ್‌ನಲ್ಲಿ ಜು.28ರಂದು ರಾತ್ರಿ ನಡೆದ ಮೊಹಮ್ಮದ್ ಫಾಝಿಲ್ ಹತ್ಯೆಯ ದುಷ್ಕರ್ಮಿಗಳು ಸುಳಿವು ಲಭ್ಯವಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಪೊಲೀಸರು ನಿರಾಕರಿಸಿದ್ದಾರೆ. ಇಲ್ಲಿವರೆಗೆ ಒಟ್ಟು 21 ಮಂದಿಯನ್ನು ಶಂಕೆ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅದರಲ್ಲಿ 6 ಮಂದಿ ತೀವ್ರ ಶಂಕಿತರನ್ನು ವಿಚಾರಣೆಗೆ ಗುರಿಪಡಿಸಲಾಗಿದೆ. ಆರೋಪಿಗಳ ಸುಳಿವು ಬಹುತೇಕ ಲಭ್ಯವಾಗಿದ್ದು, ಶೀಘ್ರವೇ ಬಂಧಿಸುವ ವಿಶ್ವಾಸ ಇದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
Mangaluru murder case; ಜಾಲತಾಣಗಳ ವಿರುದ್ಧ ಗಂಭೀರ ಕ್ರಮಕ್ಕೆ ಚಿಂತನೆ: ADGP Alok Kumar
ಹತ್ಯೆಗೆ ಕಾರಣ ಪತ್ತೆಗೆ ಕ್ರಮ: ಇದೇ ವೇಳೆ ಫಾಝಿಲ್ ಬದಲು ಬೇರೊಬ್ಬರ ಹತ್ಯೆಗೆ ಹಂತಕರು ಸ್ಕೆಚ್ ಹಾಕಿದ್ದರು. ಅದು ತಪ್ಪಿದ ಬಳಿಕ ಅನ್ಯಕೋಮಿನ ಸ್ಥಳೀಯ ಅಂಗಡಿ ಮಾಲೀಕನ ಹತ್ಯೆಗೆ ಯತ್ನಿಸಲಾಗಿತ್ತು. ಅದು ಅಸಾಧ್ಯವಾದಾಗ ಫಾಝಿಲ್‌ನ್ನು ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದ್ದೆ. ಆದರೆ ಆರೋಪಿಗಳ ಪತ್ತೆಯಾಗದ ವಿನಃ ಹತ್ಯೆಗೆ ನಿಖರ ಕಾರಣ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.