ಆಂಧ್ರಪ್ರದೇಶದ ತಿರುಮಲದಲ್ಲಿ ನಡೆದ ಇತ್ತೀಚಿನ ಘಟನೆಯಲ್ಲಿ ಬೃಹತ್ ಹೆಬ್ಬಾವು (Python) ರಸ್ತೆ ದಾಟುತ್ತಿದ್ದ ಕಾರಣದಿಂದ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿರುವುದು ವರದಿಯಾಗಿದೆ.
ಹೆದ್ದಾರಿಗಳು ಹಾಗೂ ಘಾಟ್ ರಸ್ತೆಗಳಲ್ಲಿ ವಾಹನಗಳಿಗೆ ವನ್ಯಜೀವಿಗಳು ಅಡ್ಡ ಬರುವ ಸಂಗತಿಗಳು ಸರ್ವೆ ಸಾಮಾನ್ಯ. ಕೆಲವೊಮ್ಮೆ ಈ ಪ್ರಾಣಿಗಳು ಅಪಾಯಕಾರಿಯಾಗಿರುವ ಉದಾಹರಣೆಗಳು ಕೂಡ ಇವೆ. ಆಂಧ್ರಪ್ರದೇಶದ ತಿರುಮಲದಲ್ಲಿ ನಡೆದ ಇತ್ತೀಚಿನ ಘಟನೆಯಲ್ಲಿ ಬೃಹತ್ ಹೆಬ್ಬಾವು (Python) ರಸ್ತೆ ದಾಟುತ್ತಿದ್ದ ಕಾರಣದಿಂದ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿರುವುದು ವರದಿಯಾಗಿದೆ. ಈ ಸರೀಸೃಪದ ರಸ್ತೆ ದಾಟುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಾವನ್ನು (Snake) ಗುರುತಿಸಿದ ರಾಜ್ಯ ಬಸ್ ಒಂದು ಹೆದ್ದಾರಿಯಲ್ಲಿ ನಿಂತು ಅದಕ್ಕೆ ದಾರಿ ಮಾಡಿಕೊಟ್ಟಿತ್ತು. ಇದರೊಂದಿಗೆ ಇತರ ಅನೇಕ ವಾಹನಗಳು ಕೂಡ ಕೆಲ ಕಾಲ ನಿಂತು ಕಾಯಬೇಕಾಯಿತು.
ತಿರುಪತಿ-ತಿರುಮಲ ಹೆದ್ದಾರಿಯಲ್ಲಿ (highway) ತಡರಾತ್ರಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಸಂಚಾರ ವಿರಳವಾದ ಹಿನ್ನೆಲೆಯಲ್ಲಿ ಹಾವು ರಸ್ತೆ ದಾಟಲು ಯತ್ನಿಸುತ್ತಿತ್ತು. ಬಸ್ಸಿನ ಚಾಲಕ ಹಾವನ್ನು ಕಂಡ ನಂತರ ಬಸ್ ನಿಲ್ಲಿಸಿ ಹಾವು ಸುರಕ್ಷಿತವಾಗಿ ರಸ್ತೆ ದಾಟಲು ಅನುವು ಮಾಡಿಕೊಟ್ಟರು.
ಭಾರತದಲ್ಲಿ ಬಹಳಷ್ಟು ರಸ್ತೆಗಳು ದಟ್ಟ ಕಾನನದ ಮೂಲಕ ಹೋಗುತ್ತವೆ ಮತ್ತು ಈ ರಸ್ತೆಗಳಲ್ಲಿ ಇಂತಹ ಘಟನೆಗಳು ಸಾಕಷ್ಟು ಸಾಮಾನ್ಯವಾಗಿದೆ. ಅದಕ್ಕಾಗಿಯೇ ಇಂತಹ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ಇಂತಹ ರಸ್ತೆಗಳಲ್ಲಿ ವಿಶೇಷವಾಗಿ ರಾತ್ರಿ ವೇಳೆ ಕಾಡು ಪ್ರಾಣಿಗಳು ರಸ್ತೆ ದಾಟುತ್ತವೆ. ಈ ಸಂದರ್ಭಗಳಲ್ಲಿ ವೇಗವಾಗಿ ಚಾಲನೆ ಮಾಡುವುದರಿಂದ ಈ ಪ್ರಾಣಿಗಳಿಗೆ ಹಾನಿಯಾಗುವ ಅಪಾಯವಿದೆ.
ಇತ್ತೀಚೆಗೆ ಪಶ್ಚಿಮ ಘಟ್ಟದ ರಸ್ತೆಯೊಂದರಲ್ಲಿ ಕಾಡಾನೆಗಳು ವಾಹನ ಸವಾರರನ್ನು ಅಡ್ಡ ಹಾಕಿದ ಸುದ್ದಿ ವರದಿಯಾಗಿತ್ತು. ಕೆಲ ವರ್ಷಗಳ ಹಿಂದೆ ಬಿಸಿಲೆ ಘಾಟ್‌ನಲ್ಲಿ ಆನೆ (Elephant) ದಾಳಿಯಿಂದ ಯುವಕನೋರ್ವ ಮೃತಪಟ್ಟಿದ್ದು ಕೂಡ ವರದಿಯಾಗಿತ್ತು. ಜೊತೆಗೆ, ರೈಲ್ವೆ ಹಳಿಯಲ್ಲಿ ಮರಿ ಆನೆಗಳು ಸಾವನ್ನಪ್ಪಿರುವ ಘಟನೆಗಳು ಕೂಡ ಬೆಳಕಿಗೆ ಬರುತ್ತಿರುತ್ತದೆ.
ಇತ್ತೀಚೆಗಷ್ಟೆ, ಮಜಾ ಮಾಡಲು ಕಾಡಿನ ರಸ್ತೆಯಲ್ಲಿ ವಾಹನದಿಂದ ಇಳಿದ ಮೂವರು ಸ್ನೇಹಿತರ ವಿಡಿಯೋ ವೈರಲ್ ಆಗಿತ್ತು. ಅವರ ಮೇಲೆ ದಾಳಿ ಮಾಡಿದ ಕಾಡಾನೆ ಅವರ ವಾಹನಗಳನ್ನೂ ಹಿಂಬಾಲಿಸಿತ್ತು. ಕೆಲವು ವರ್ಷಗಳ ಹಿಂದೆ ಅಸ್ಸಾಂನ ಕಾಜಿರಂಗದಲ್ಲಿ ಘೇಂಡಾಮೃಗವೊಂದು ಕಾರುಗಳ ಮೇಲೆ ದಾಳಿ ನಡೆಸಿತ್ತು.
ಕೆಲವು ಜನರು ಮಾರ್ಗಕ್ಕೆ ಅಡ್ಡ ಬರುವ ವನ್ಯಜೀವಿಗಳನ್ನು ಶೂಟ್ ಮಾಡಲು ಯತ್ನಿಸಿದಾಗ ಅವು ಹಿಂಸಾತ್ಮಕವಾಗಿ ವರ್ತಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಮತ್ತು ಕಾಡು ಪ್ರಾಣಿಗಳಿಗೆ ತೊಂದರೆಯಾಗದಂತೆ ರಸ್ತೆ ದಾಟಲು ಬಿಡುವುದು ಉತ್ತಮ.
ಇದನ್ನೂ ಓದಿ: ಚಿಕನ್ ಶವರ್ಮಾ ತಿಂದು ಕಾಸರಗೋಡಿನ ಯುವತಿ ಸಾವು; ಶಿಗೆಲ್ಲಾ ಬ್ಯಾಕ್ಟಿರೀಯಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದಿಷ್ಟು
ಭಾರತೀಯ ರಸ್ತೆಗಳಲ್ಲಿ ಯಾವಾಗಲೂ ವೇಗದ ಮಿತಿಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ರಸ್ತೆಗಳು ಖಾಲಿಯಾಗಿದ್ದರೂ ಸಹ, ಪ್ರಾಣಿಗಳು ಅಥವಾ ಜಾನುವಾರುಗಳು ರಸ್ತೆಗೆ ಅನಿರೀಕ್ಷಿತವಾಗಿ ಪ್ರವೇಶಿಸುವುದರಿಂದ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕಾಗುತ್ತದೆ ರಸ್ತೆಗಳಲ್ಲಿ ಯಾವುದೇ ಪ್ರಾಣಿ ಅಥವಾ ಜಾನುವಾರು ಕಾಣಿಸಿಕೊಂಡಾಗ, ವೇಗವನ್ನು ಕಡಿಮೆ ಮಾಡಿ ನಿಲ್ಲಿಸುವುದು ಸುರಕ್ಷಿತ ಮಾರ್ಗವಾಗಿದೆ. ಅನೇಕ ಬಾರಿ ಪ್ರಾಣಿಗಳು ಕೊನೆಯ ಕ್ಷಣದಲ್ಲಿ ತಮ್ಮ ಮನಸ್ಸನ್ನು ಬದಲಾಯಿಸುತ್ತವೆ ಮತ್ತು ತಮ್ಮ ದಾರಿಯ ದಿಕ್ಕನ್ನು ಬದಲಾಯಿಸಬಹುದು.
ಹೆಚ್ಚಿನ ಪ್ರಾಣಿಗಳು ತುಂಬಾ ಶಾಂತವಾಗಿರುತ್ತವೆ ಮತ್ತು ಕೆರಳಿಸುವವರೆಗೂ ದಾಳಿ ಮಾಡುವುದಿಲ್ಲ. ಕಾಡು ಪ್ರಾಣಿಗಳು ತುಂಬಾ ಅನಿರೀಕ್ಷಿತವಾಗಿರುವುದರಿಂದ ಅಪಾಯಕಾರಿಯಾಗಿ ಹತ್ತಿರ ಹೋಗಬಾರದು.
ಇದನ್ನೂ ಓದಿ: ಈದ್ ಪಾರ್ಟಿಯಲ್ಲಿ ಬಿರಿಯಾನಿ ಜೊತೆ ಆಭರಣ ನುಂಗಿದ ವ್ಯಕ್ತಿ
ಕಾಡು ಆನೆಗಳ ಹಿಂಡುಗಳು ಸಾಮಾನ್ಯವಾಗಿ ಭಾರತದ ಕಾಡುಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಲ್ಲಿ ರಸ್ತೆಗಳನ್ನು ದಾಟುವುದನ್ನು ಕಾಣಬಹುದು. ವಾಹನವನ್ನು ನಿಲ್ಲಿಸಿ ಯಾವುದೇ ತೊಂದರೆಯಿಲ್ಲದೆ ಪ್ರಾಣಿಗಳು ರಸ್ತೆ ದಾಟಲು ಕಾಯಬೇಕು.