13 ವರ್ಷಗಳ ಬಳಿಕ ಹೆಲಿಕಾಪ್ಟರ್ ಪ್ರಯಾಣ, ರುಕ್ಮಿಣಿ ನೆನಪಿಸಿಕೊಂಡ ಜನಾರ್ಧನ ರೆಡ್ಡಿ!

By Suvarna NewsFirst Published Mar 25, 2023, 8:02 PM IST
Highlights

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ವಿಧಾನಸಭಾ ಚುನಾವಣೆಗೆ ಅಖಾಡಕ್ಕೆ ಧುಮುಕಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿ ಬರೋಬ್ಬರಿ 13 ವರ್ಷಗಳ ಬಳಿಕ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮಾಡಿದ್ದಾರೆ.  ಈ ವೇಳೆ ತಮ್ಮ ರುಕ್ಮಿಣಿಯನ್ನು ನೆನಪಿಸಿಕೊಂಡಿದ್ದಾರೆ. ಜನಾರ್ಧನ ರೆಡ್ಡಿಯ ಹೆಲಿಕಾಪ್ಟರ್ ಪಯಣದ ಹಿಂದಿದೆ ರೋಚಕ ಕತೆ

ಬೆಂಗಳೂರು(ಮಾ.25):  ಕರ್ನಾಟಕ ವಿಧಾನಸಭಾ ಚುನಾವಣೆಗೆ ಹೊಸ ಪಕ್ಷ ಸ್ಥಾಪಿಸಿ ಅಖಾಡಕ್ಕಿಳಿದಿರುವ ಜನಾರ್ಧನ ರೆಡ್ಡಿ ಮಿಂಚಿನ ಪ್ರಚಾರ ನಡೆಸುತ್ತಿದ್ದಾರೆ.  ಕಾರ್ಯಕ್ರಮದ ನಿಮಿತ್ತ ಜನಾರ್ಧನ ರೆಡ್ಡಿ ಸಿಂಧನೂರಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮಾಡಿದ್ದಾರೆ. ರಾಜಕಾರಣಿಗಳು ಹೆಲಿಕಾಪ್ಟರ್ ಪ್ರಯಾಣ ಹೊಸದೇನಲ್ಲ, ಇದರಲ್ಲಿ ಅಚ್ಚರಿಯೂ ಇಲ್ಲ. ಆದರೆ ಜನಾರ್ಧನ ರೆಡ್ಡಿ ಈ ಬಾರಿಯ ಹೆಲಿಕಾಪ್ಟರ್ ಪ್ರಯಾಣದಲ್ಲಿ ಕೆಲ ವಿಶೇಷತೆಗಳಿವೆ. ಜನಾರ್ಧನ ರೆಡ್ಡಿ ಬರೋಬ್ಬರಿ 13 ವರ್ಷಗಳ ಬಳಿಕ ಹೆಲಿಕಾಪ್ಟರ್ ಪ್ರಯಾಣ ನಡೆಸಿದ್ದಾರೆ. 

ರೆಡ್ಡಿ ತಮ್ಮ ರುಕ್ಮಿಣಿ ಬದಲು ಬೇರೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದಾರೆ. ಬರೋಬ್ಬರಿ 13 ವರ್ಷಗಳ ಅಂದರೆ 2011ರಲ್ಲೇ ರೆಡ್ಡಿ ಹೆಲಿಕಾಪ್ಟರ್ ಪ್ರಯಾಣ ಕೊನೆಯಾಗಿತ್ತು. ಬಳಿಕ ಜೈಲುವಾಸ ಸೇರಿದಂತೆ ಹಲವು ಅಡೆತಡೆಗಳಿಂದ ರೆಡ್ಡಿ ಹೆಲಿಕಾಪ್ಟರ್‌ನಿಂದ ದೂರ ಉಳಿದಿದ್ದರು. ಇದೀಗ ಮತ್ತೆ ರೆಡ್ಡಿ ಗತವೈಭವ ಮರುಕಳಿಸುತ್ತಿದೆ.  ಜನಾರ್ಧನ ರೆಡ್ಡಿ 13 ವರ್ಷದ ಮೊದಲು ಬಹುತೇಕ ಪ್ರಯಾಣ ಹೆಲಿಕಾಪ್ಟರ್‌ನಲ್ಲೇ ಸಾಗುತ್ತಿತ್ತು. ಇದಕ್ಕೆ ಕಾರಣ ರುಕ್ಮಣಿ.

ಕೆಆರ್‌ಪಿಪಿ ಅಧಿಕಾರಕ್ಕೆ ಬಂದರೆ ಉಚಿತ ಶಿಕ್ಷಣ: ಜನಾರ್ದನ ರೆಡ್ಡಿ

ಒಬಳಾಂಪುರಂ ಮೈನಿಂಗ್ ಕಂಪನಿ ಮೂಲಕ ಅತೀ ದೊಡ್ಡ ಸಾಮ್ರಾಜ್ಯ ಕಟ್ಟಿದ ಜನಾರ್ಧನ ರೆಡ್ಡಿ ಬೆಲ್ 407 ಹೆಲಿಕಾಪ್ಟರ್ ಖರೀದಿಸಿದ್ದರು. ಇದಕ್ಕೆ ರುಕ್ಮಿಣಿ ಎಂದು ಹೆಸರಿಟ್ಟಿದ್ದರು. ಈ ಬೆಲ್ 407 ಹೆಲಿಕಾಪ್ಟರ್‌ನ್ನು ಜನಾರ್ಧನ ರೆಡ್ಡಿ ಅಂದು ಬರೋಬ್ಬರಿ 12 ಕೋಟಿ ರೂಪಾಯಿಗೆ ಖರೀದಿಸಿದ್ದರು. 2006ರಲ್ಲಿ  ರೆಡ್ಡಿ 12 ಕೋಟಿ ರೂಪಾಯಿಯ ಹೆಲಿಕಾಪ್ಟರ್ ಖರೀದಿಸಿದ್ದರು. ಈ ಹೆಲಿಕಾಪ್ಟರ್‌ನ್ನು ಲೋನ್ ಮೂಲಕ ರೆಡ್ಡಿ ಖರೀದಿಸಿದ್ದರು. 2 ಕೋಟಿ ರೂಪಾಯಿ ಡೌನ್ ಪೇಮೆಂಟ್ ನೀಡಿ ಉಳಿದ ಹಣಕ್ಕೆ ಲೋನ್ ಮಾಡಿದ್ದರು.

ಜನಾರ್ಧನ ರೆಡ್ಡಿ ರುಕ್ಮಿಣಿ ಹೆಲಿಕಾಪ್ಟರ್ ಪ್ರತಿ ತಿಂಗಳ ಕಂತು 10.31 ಲಕ್ಷ ರೂಪಾಯಿ. ಬೆಂಗಳೂರು ವಿಮಾನ ನಿಲ್ದಾಣ ಅಥಾರಿಟಿಗೆ ಪ್ರತಿ ತಿಂಗಳು 75,000 ರೂಪಾಯಿ ಏರ್‌ಪೋರ್ಟ್ ಬಾಡಿಗೆ ಕಟ್ಟುತ್ತಿದ್ದರು. ಇದಕ್ಕೆ ಪೈಲೆಟ್, ಇಂಧನದ ಖರ್ಚು ಬೇರೆ. ಇವೆಲ್ಲಾ ಸೇರಿಸಿದರೆ ಪ್ರತಿ ತಿಂಗಳು ಜನಾರ್ಧನ ರೆಡ್ಡಿ ಹೆಲಿಕಾಪ್ಟರ್ ಕಂತು ಹಾಗೂ ಓಟಾಡಟಕ್ಕೆ ಕನಿಷ್ಠ 15 ಲಕ್ಷ ರೂಪಾಯಿ ತೆಗೆದಿಡುತ್ತಿದ್ದರು.

ರೆಡ್ಡಿ ಬಂಧನದ ಬಳಿಕ ಹಲವು ವಿಚಾರಗಳ ಕುರಿತು ತಲೆಕೆಡಿಸಿಕೊಂಡಿದ್ದರು. ಇದರಲ್ಲಿ ರುಕ್ಮಿಣಿ ಕೂಡ ಒಂದು. ಮುದ್ದಾಗಿ ನೋಡಿಕೊಂಡ ಹೆಲಿಕಾಪ್ಟರ್ ಕುರಿತು ರೆಡ್ಡಿಗೆ ವಿಶೇಷ ಕಾಳಜಿ. ಹೀಗಾಗಿ ಜೈಲಿನಿಂದಲೇ ರೆಡ್ಡಿ, ವಿಶೇಷ ಸಿಬಿಐ ಕೋರ್ಟ್‌ಗೆ ಮನವಿಯೊಂದನ್ನು ಸಲ್ಲಿಸಿದ್ದರು. 2012ರಲ್ಲಿ ಈ ಮನವಿ ಸಲ್ಲಿಸಿದ ರೆಡ್ಡಿ, ತನ್ನ ಐಷಾರಾಮಿ ಹೆಲಿಕಾಪ್ಟರ್ ಪರಿಸ್ಥಿತಿ ಹೇಗಿದೆ. ಅದನ್ನು ಹಾಳಾಗದಂತೆ ನೋಡಿಕೊಳ್ಳಬೇಕಿದೆ. ಪೊಲೀಸರು ವಶಪಡಿಸಿಕೊಂಡಿರುವ ಹೆಲಿಕಾಪ್ಟರ್ ಹಾಗೂ ಐಷಾರಾಮಿ ವಾಹನಗಳ ಸ್ಥಿತಿಗತಿ ಕುರಿತು ಕಳವಳ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದರು.

ಕೊಪ್ಪಳದಲ್ಲಿ ತಂದೆ ತಾಯಿ ಇಲ್ಲದ ಮಕ್ಕಳನ್ನು ದತ್ತು ಪಡೆದ ಗಾಲಿ ಜನಾರ್ಧನ ರೆಡ್ಡಿ!

ಕೇವಲ ಹೆಲಿಕಾಪ್ಟರ್ ಮಾತ್ರವಲ್ಲ. ರೆಡ್ಡಿ ಬಳಿ 5 ಕೋಟಿ ರೂಪಾಯಿಯ ವೋಲ್ವೋ ಬಸ್ ಕೂಡ ಇದೆ. ಈ ಬಸ್ ಹೆಸರು ಕೂಡ ರುಕ್ಮಿಣಿ. ಇದು ರಾಜಕೀಯ ರೋಡ್ ಶೋಗಳಿಗಾಗಿ ಮಾಡಿಫೈ ಮಾಡಲಾಗಿರುವ ಬಸ್. ಇದಕ್ಕಾಗಿ ಸಿಬ್ಬಂದಿಗಳು ಇದ್ದಾರೆ. ಆದರೆ 2011ರಲ್ಲಿ ಪೊಲೀಸರು ಈ ಬಸ್‌ನ್ನು ವಶಕ್ಕೆ ಪಡೆದಿದ್ದರು.

ರೆಡ್ಡಿ ಬಳಿ ಸರಿಸುಮಾರು 5 ಕೋಟಿ ರೂಪಾಯಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್, ಮೆಸರಾತಿ, ವೋಕ್ಸ್‌ವ್ಯಾಗನ್, BMW , ಕಾಂಟಿನೆಂಟಲ್ ಜಿಟಿ ಕೊಪೆ, ರೇಂಜ್ ರೋವರ್ ಸ್ಪೋರ್ಟ್ಸ್ ಕಾರು, ಮರ್ಸಡಿಸ್ ಬೆಂಜ್ ಲಿಮೌಸಿನ್, ಟೋಯೋಟಾ ಲ್ಯಾಂಡ್ ಕ್ರೂಸರ್, ಆಡಿ, ಮಿಸ್ತುಬಿಶಿ ಪಜೆರೋ ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ.

13 ವರ್ಷಗಳ ಬಳಿಕ ರೆಡ್ಡಿ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮಾಡಿ ಸಂತಸ ಹಂಚಿಕೊಂಡಿದ್ದಾರೆ.  ನಿನ್ನೆ ಬಹಳ ಸಂತೋಷವಾದ ದಿನ, ಸಿಂಧನೂರಿಗೆ ಕಾರ್ಯಕ್ರಮದ ನಿಮಿತ್ತ ತೆರಳ ಬೇಕಾದ ಕಾರಣ 13 ವರ್ಷಗಳ ನಂತರ ಆಕಸ್ಮಿಕವಾಗಿ ಹೆಲಿಕ್ಯಾಪ್ಟರ್ ಅಲ್ಲಿ ಪ್ರಯಾಣಿಸುವ ಸಂಧರ್ಭ ಒದಗಿತು. ಬೆಂಗಳೂರಿಂದ ಸಿಂಧನೂರಿಗೆ ಹಾರಾಟದ ಮಧ್ಯದಲ್ಲಿ ನನ್ನ ತವರು ಜಿಲ್ಲೆ ಬಳ್ಳಾರಿಯ ಮೇಲೆ ಹಾದು ಹೋಗುವ ದೃಶ್ಯವನ್ನು ಕಂಡು ಒಂದು ಕ್ಷಣ ಭಾವುಕನಾದೆನು. ಬಳ್ಳಾರಿಗೆ ತೆರಳಲು ಆಗದಿದ್ದರೂ ಸಹ ಆಕಸ್ಮಿಕ ಪ್ರಯಾಣದಲ್ಲಿ ನನ್ನ ಬಳ್ಳಾರಿಯನ್ನು ಮೇಲಿನಿಂದ ವೀಕ್ಷಿಸುವ ಭಾಗ್ಯ ನನ್ನದಾಯಿತು ಎಂದು ಜನಾರ್ಧನ ರೆಡ್ಡಿ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

click me!