ಆನೆಗೂ ಹೆದರದೇ, ರಿವರ್ಸ್ ಡ್ರೈವ್ ಮಾಡಿದ ಚಾಲಕ ಧೈರ್ಯಕ್ಕೆ ಭೇಷ್ ಎನ್ನಲೇ ಬೇಕು!

By Suvarna News  |  First Published Nov 18, 2022, 2:40 PM IST

ಸಿಟ್ಟಿಗೆದ್ದ ಆನೆಯಿಂದ ತಪ್ಪಿಸಿಕೊಳ್ಳಲು ಖಾಸಗಿ ಚಾಲಕರೊಬ್ಬರು ಬಸ್ಸನ್ನು ಹಿಮ್ಮುಖವಾಗಿ ಸುಮಾರು 8 ಕಿಲೋಮೀಟರ್‌ಗಳಷ್ಟು ಓಡಿಸಿರುವ ವೀಡಿಯೊವನ್ನು ಇತ್ತೀಚೆಗೆ ವೈರಲ್‌ ಆಗಿದೆ.


ಅಭಯಾರಣ್ಯಗಳಲ್ಲಿ ಸಫಾರಿ (safari) ಹೊರಟ ವಾಹನಗಳನ್ನು ಕಾಡು ಪ್ರಾಣಿಗಳು ಅಟ್ಟಿಸಿಕೊಂಡು ಬಂದಿರುವುದು ಹಾಗೂ ವಾಹನ ಚಾಲಕರು ಸಿನಿಮೀಯ ಮಾದರಿಯಲ್ಲಿ ಅವುಗಳಿಂದ ಪಾರಾಗಿರುವ ಸುದ್ದಿಗಳನ್ನು ನೀವು ಆಗಾಗ್ಗೆ ಕೇಳುತ್ತಿರುತ್ತೀರಿ. ಜೊತೆಗೆ, ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುವ ಕಾಡು ಪ್ರಾಣಿಗಳು ಮನುಷ್ಯರು, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುವುದು ಹಾಗೂ ಹೊಲಗದ್ದೆಗಳನ್ನು ನಾಶ ಮಾಡುವ ಸುದ್ದಿಗಳು ಕೂಡ ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. 

ಅದೇ ರೀತಿ, ಸಿಟ್ಟಿಗೆದ್ದ ಆನೆಯಿಂದ ತಪ್ಪಿಸಿಕೊಳ್ಳಲು ಖಾಸಗಿ ಚಾಲಕರೊಬ್ಬರು ಬಸ್ಸನ್ನು ಹಿಮ್ಮುಖವಾಗಿ ಸುಮಾರು 8 ಕಿಲೋಮೀಟರ್ಗಳಷ್ಟು ಓಡಿಸಿರುವ ವೀಡಿಯೊವನ್ನು ಇತ್ತೀಚೆಗೆ ವೈರಲ್ ಆಗಿದೆ.
ಈ ವಿಡಿಯೋವನ್ನು ಮಲಯಾಳಂ ಖಾಸಗಿ ವಾಹಿನಿಯೊಂದು ತನ್ನ ಯೂಟ್ಯೂಬ್ (youtube) ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದೆ. ಕೇರಳದ ತ್ರಿಶೂರ್ ಜಿಲ್ಲೆಯ ಅತಿರಪಲ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್ಗೆ ಕಾಡಾನೆ (Wild elephant) ಎದುರಾಗಿದೆ. ಈ ವಿಡಿಯೋ ಪ್ರಕಾರ, ಕಾಡಾನೆ ಮೊದಲು ಬಸ್ಸಿನ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿತ್ತು.  ಆಗ ಬಸ್ಸಿನ ಚಾಲಕ ನಿಧಾನವಾಗಿ ಅದನ್ನು ಹಿಂಬಾಲಿಸಿದ್ದರು. ಆನೆ ರಸ್ತೆಯಿಂದ ಕೆಳಗಿಳಿದು ಮತ್ತೆ ಕಾಡಿನತ್ತ ಹೋಗಹುದು ಎಂದು ನಿರೀಕ್ಷಿಸಿದ್ದರು. ಆದರೆ, ಹಾಗಾಗಲಿಲ್ಲ. ಬದಲಿಗೆ ಬಸ್ ತನ್ನನ್ನು ಹಿಂಬಾಲಿಸುವುದನ್ನು ಗಮನಿಸಿದ ಆನೆ ತಕ್ಷಣವೇ ಬಸ್ಸಿನ ಕಡೆಗೆ ತಿರುಗಿತು.


ತಕ್ಷಣ ವಾಹನ ನಿಲ್ಲಿಸಿದ ಚಾಲಕ, ಆನೆಯನ್ನು ಹೆದರಿಸಲು ಎಂಜಿನ್(engine) ಆನ್ ಮಾಡಿದ್ದಾರೆ. ಆದರೆ, ಇದರಿಂದ ಇನ್ನಷ್ಟು ಕೋಪಗೊಂಡ ಆನೆ ಬಸ್ ಕಡೆಗೆ ನಡೆಯಲಾರಂಭಿಸಿತು. ಬಸ್ಸಿನೊಳಗೆ ಕುಳಿತಿದ್ದವರು ಆತಂಕಗೊಳಗಾದರು. ಆದರೆ ಚಾಲಕ ಮಾತ್ರ ಶಾಂತವಾಗಿದ್ದರು ಮತ್ತು  ನಿಧಾನವಾಗಿ ಬಸ್ ಅನ್ನು ಹಿಮ್ಮುಖವಾಗಿ ಓಡಿಸಲು ಪ್ರಾರಂಭಿಸಿದರು. ಆನೆಯು ಬಸ್ಸನ್ನು ಹಿಂಬಾಲಿಸಲು ಆರಂಭಿಸಿತು. ಬಹಳ ಹೊತ್ತು ಇದೇ ಸ್ಥಿತಿ ಮುಂದುವರಿಯಿತು. ಆನೆಯ ಗಮನವನ್ನು ಬೇರೆಡೆಗೆ ಸೆಳೆಯಲು ಬಸ್ ಚಾಲಕ ಸುಮಾರು 8 ಕಿ.ಮೀ ರಿವರ್ಸ್ ಗೇರ್ ನಲ್ಲಿ ಓಡಿಸಬೇಕಾಯಿತು.

ಕಾಲ ಚಸ್ಮಾ ಹಾಡಿಗೆ ಮೈ ಕೊರೆಯುವ ಚಳಿಯ ನಡುವೆ ಯೋಧರ ಡಾನ್ಸ್

ಈ ಘಟನೆ ನಡೆದ ರಸ್ತೆಯು ತುಂಬಾ ಕಿರಿದಾಗಿದ್ದು, ಬಸ್ನಷ್ಟು ದೊಡ್ಡದಾದ ವಾಹನವನ್ನು ಹಿಮ್ಮುಖವಾಗಿ ಚಲಾಯಿಸುವುದು ಒಂದು ದೊಡ್ಡ ಸಾಹಸದ ಕೆಲಸವೇ ಆಗಿತ್ತು.ಈ ವಿಡಿಯೋದಲ್ಲಿ ಬಸ್ ಚಾಲಕ,  ತಾನು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಇದೇ ಮೊದಲು  ಎಂದು ಹೇಳಿರುವುದನ್ನು ಕಾಣಬಹುದು. ಆನೆ ದಾಳಿ ಬಗ್ಗೆ ಅರಣ್ಯ ಇಲಾಖೆಗೆ ಕೂಡ ಮಾಹಿತಿ ನೀಡಿರುವುದು ವಿಡಿಯೋದಲ್ಲಿ (video) ರೆಕಾರ್ಡ್ ಆಗಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಆನೆಯಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಬಸ್ ಅನ್ನು ಹಿಮ್ಮುಖವಾಗಿ ತೆಗೆದುಕೊಳ್ಳುವಂತೆ ಚಾಲಕನಿಗೆ ಸೂಚನೆ ನೀಡಿದ್ದಾರೆ. ಈ ಬಸ್ ಎದುರಿನ ಆನೆಯ ಹಿಂದಿನ ರಸ್ತೆಯಲ್ಲಿ ಇನ್ನೊಂದು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹಾಗೂ ಇತರೆ ವಾಹನಗಳು ಬರುತ್ತಿರುವುದು ಕಂಡು ಬಂದಿದೆ.

ಅಯ್ಯೋ ಅಳ್ಬೇಡ ಕಣೋ, ನಾನಿದ್ದೀನಿ... ಅಳುತ್ತಿದ್ದ ಮಾಲೀಕನ ಸಂತೈಸುವ ಮಾರ್ಜಾಲ

ಬಸ್ ಅನ್ನು ಹಿಮ್ಮುಖವಾಗಿ ಚಲಾಯಿಸುವ ವೇಳೆ ಅನೇಕ ಬಸ್ ಮೇಲೆ ದಾಳಿ ಮಾಡಲು ಅನೇಕ ಅವಕಾಶಗಳಿದ್ದರೂ, ಅದು ದಾಳಿ ನಡೆಸಿಲ್ಲ. ಬದಲಿಗೆ, ರಸ್ತೆಯಿಂದ ಕೆಳಗಿಳಿಯಲು ಮಾರ್ಗ ಹುಡುಕುತ್ತಿರುವಂತೆ ಕಾಣುತ್ತಿದೆ. ಆದರೆ, ಎರಡು ಬಸ್‌ ನಡುವೆ ಸಿಕ್ಕಿ ಹಾಕಿಕೊಂಡಿದೆ. ಕೊನೆಗೆ ದೀರ್ಘ ಪಯಣದ ನಂತರ ಅಡ್ಡದಾರಿಯಲ್ಲಿ ಆನೆ ಕಾಡಿನಲ್ಲಿ ಮರೆಯಾಗಿದೆ ಎಂದು ಹೇಳಲಾಗುತ್ತಿದೆ. ಅರಣ್ಯ ಸಿಬ್ಬಂದಿ ಸಾಮಾನ್ಯವಾಗಿ ಕಾಡು ಪ್ರಾಣಿಗಳು ಎದುರಾದಾಗ ಇಂಜಿನ್ ಆನ್ ಮಾಡಿ ಶಬ್ದ ಮಾಡುವುದಿಲ್ಲ. ಏಕೆಂದರೆ, ಅದರಿಂದ ಪ್ರಾಣಿಗಳು ಹೆದರಿ ದಾಳಿ ನಡೆಸುವ ಸಾಧ್ಯತೆಗಳಿರುತ್ತದೆ. ಆದ್ದರಿಂದ, ಪ್ರಾಣಿಗಳು ರಸ್ತೆ ದಾಟುತ್ತಿದ್ದರೆ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಎಂಜಿನ್ ಮತ್ತು ದೀಪಗಳನ್ನು ಆಫ್ ಮಾಡಿ ತಾಳ್ಮೆಯಿಂದ ಕಾಯಬೇಕು. ಇದರಿಂದ ಯಾವುದೇ ತೊಂದರೆಯಿಲ್ಲದೆ ರಸ್ತೆ ದಾಟಬಹುದು ಎಂದು ಸಿಬ್ಬಂದಿ ತಿಳಿಸಿದ್ದಾರೆ.

click me!