
ನವದೆಹಲಿ(ಜ.27) ಬಿಟೆಕ್ ಸೇರಿದಂತೆ ಬಹುಬೇಡಿಕೆಯ ಪದವಿ ಪಡೆಯುವವರು ಕೈತುಂಬ ಸಂಬಳದ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ಜೊತೆಗೆ ತಮ್ಮ ಪದವಿ ಕ್ಷೇತ್ರದಲ್ಲಿನ ಅವಕಾಶಗಳನ್ನು ಹುಡುಕಿ ಸ್ಟಾರ್ಟ್‌ಅಪ್ ಸೇರಿ ಇತರ ಹೈಟೆಕ್ ಉದ್ಯಮಗಳನ್ನು ಆರಂಭಿಸುತ್ತಾರೆ. ಆದರೆ 22 ವರ್ಷದ ಬಿಟೆಕ್ ಯುವತಿ ತಾಪ್ಸಿ ಉಪಾಧ್ಯಾಯ ತಳ್ಳುಗಾಡಿಯಲ್ಲಿ ಪಾನಿಪೂರಿ ಬ್ಯೂಸಿನೆಸ್ ಆರಂಭಿಸಿ ಯಶಸ್ಸು ಕಂಡಿದ್ದಾಳೆ. ಸ್ಕೂಟಿಯಿಂದ ಆರಂಭಿಸಿದ ಈಕೆಯ ಉದ್ಯಮ ಇದೀಗ ಮಹೀಂದ್ರ ಥಾರ್ ವರೆಗೂ ಬಂದಿದೆ. ತನ್ನ ಪಾನಿಪೂರಿ ಗಾಡಿಯನ್ನು ಎಳೆದುಕೊಂಡು ಹೋಗಲು ತಾಪ್ಸಿ ಹೊಚ್ಚ ಹೊಸ ಮಹೀಂದ್ರ ಥಾರ್ ಖರೀದಿಸಿದ್ದಾಳೆ. ಯುವತಿಯ ಸಾಹಸ ಹಾಗೂ ಯಶಸ್ಸಿನ ಪಯಣಕ್ಕೆ ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರ ಮನಸೋತಿದ್ದಾರೆ. ಒಬ್ಬರ ಯಶಸ್ಸಿನಲ್ಲಿ ಮಹೀಂದ್ರ ಥಾರ್ ಕೂಡ ಪಾಲುದಾರರಾಗಿದೆ ಅನ್ನೋದು ಮತ್ತಷ್ಟು ಖುಷಿ ನೀಡಿದೆ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.
ಯುವತಿಯ ವಿಡಿಯೋ ಹಂಚಿಕೊಂಡಿರುವ ಆನಂದ್ ಮಹೀಂದ್ರ, ಆಫ್ ರೋಡ್ ವಾಹನಗಳು ಏನು ಮಾಡಬೇಕು? ಇತರ ವಾಹನಗಳು ಹೋಗಲು ಸಾಧ್ಯವಾಗದ, ಹಿಂದೆಂದೂ ಹೋಗದ ಸ್ಥಳಗಳಿಗೆ ಪ್ರಯಾಣ ಮಾಡಲು ಸಹಾಯ ಮಾಡುತ್ತದೆ. ಅಂದರೆ ಅಸಾಧ್ಯವಾದದ್ದನ್ನು ಅನ್ವೇಷಣೆ ಮಾಡಲು, ಅಂಡ್ವೆಂಚರ್‌ಗೆ ಆಫ್ ರೋಡ್ ವಾಹನ ಸಹಾಯ ಮಾಡುತ್ತದೆ. ಇದರ ಜೊತೆಗೆ ನಮ್ಮ ವಾಹನ, ಕಾರುಗಳು ತಮ್ಮ ತಮ್ಮ ಬೆಳವಣಿಗೆಗೆ, ಕನಸುಗಳನ್ನು ಸಾಕಾರಗೊಳಿಸಲು ಸಹಾಯ ಮಾಡಬೇಕು ಎಂದು ನಾವು ಬಯಸುತ್ತೇವೆ. ಈ ನಿಟ್ಟಿನಲ್ಲಿ ಈ ವಿಡಿಯೋವನ್ನು ನಾನು ಯಾಕೆ ಇಷ್ಟಪಡುತ್ತೇನೆ ಬಿಡಿಸಿ ಹೇಳಬೇಕಾಗಿಲ್ಲ ಎಂದು ಆನಂದ್ ಮಹೀಂದ್ರ ಹೇಳಿಕೊಂಡಿದ್ದಾರೆ.
ಬಾಲಕನ ಹೊಟ್ಟೆಯೊಳಗಿದೆ ಟ್ರಾಕ್ಟರ್, ಮಿಮಿಕ್ರಿಗೆ ಮನಸೋತ ಆನಂದ್ ಮಹೀಂದ್ರ!
ದೆಹಲಿಯ ತಿಲಕನಗರದಲ್ಲಿ ತಾಪ್ಸಿ ಉಪಾಧ್ಯಾಯ ತಳ್ಳುಗಾಡಿ ಮೂಲಕ ತಮ್ಮ ಪಾನಿಪೂರಿ ಬ್ಯೂಸಿನೆಸ್ ಆರಂಭಿಸಿದ್ದಾರೆ. ಬಿಟೆಕ್ ಪದವೀಧರೆಯಾಗಿರುವ ತಾಪ್ಸಿ ಪಾನಿಪೂರಿ ಉದ್ಯಮ ಆರಂಭಿಸಿದಾಗ ಕೊಂಕು ನುಡಿದವರೇ ಹೆಚ್ಚು. ಕಾರಣ ಬಿಟೆಕ್ ಪದವಿ ಪಡೆದು ರಸ್ತೆ ಬದಿಯಲ್ಲಿ, ಅದರಲ್ಲೂ ತಳ್ಳುಗಾಡಿಯಲ್ಲಿ ಪಾನಿಪೂರಿ ಮಾರಾಟ ಮಾಡುವುದಕ್ಕಿಂತ ದೆಹಲಿಯಲ್ಲೇ ಕೈತುಂಬ ವೇತನದ ಉದ್ಯೋಗಳಿವೆ ಎಂದಿದ್ದರು. ಆದರೆ ಸವಾಲಾಗಿ ಸ್ವೀಕರಿಸಿ ತಳ್ಳುಗಾಡಿಯಲ್ಲಿ ಪಾನಿಪೂರಿ ಮಾರಾಟ ಆರಂಬಿಸಿದ ತಾಪ್ಸಿ ಪಯಣದ ವಿಡಿಯೋ ಬಾರಿ ವೈರಲ್ ಆಗಿತ್ತು.
ಸ್ಕೂಟಿ ಬಳಿಕ ರಾಯಲ್ ಎನ್‌ಫೀಲ್ಡ್ ಮೂಲಕ ತನ್ನ ಪಾನಿಪೂರಿ ತಳ್ಳುಗಾಡಿಯನ್ನು ಎಳೆಯುತ್ತಿದ್ದ ತಾಪ್ಸಿ ಇದೀಗ ಉದ್ಯಮವನ್ನು ವಿಸ್ತರಿಸಿ ಯಶಸ್ಸು ಕಂಡಿದ್ದಾಳೆ. ಇದರ ಬೆನ್ನಲ್ಲೇ ಹೊಚ್ಚ ಹೊಸ ಮಹೀಂದ್ರ ಥಾರ್ ಖರೀದಿಸಿ ಎಲ್ಲರಿಗೂ ಮಾದರಿಯಾಗಿದ್ದಾಳೆ.
10 ಸಾವಿರ ರೂಗೆ ಕಾರು ತಯಾರಿಸುತ್ತೀರಾ? ಪರ್ಫೆಕ್ಟ್ ಉತ್ತರ ನೀಡಿದ ಆನಂದ್ ಮಹೀಂದ್ರ!