ಪಠ್ಯದಿಂದ ಟಿಪ್ಪು ಕೈಬಿಡುವ ವಿಚಾರ ಸ್ವಾಗತ ಎಂದ ಸಚಿವ ಕೆ.ಎಸ್.ಈಶ್ವರಪ್ಪ| ಧರ್ಮ, ಜಾತಿ ಒಡೆದ ಸಿದ್ದು, ಕಾಂಗ್ರೆಸ್‌ಗೆ ನೀತಿ ಪಾಠ ಮಾಡಿದ ಈಶ್ವರಪ್ಪ| ಸೋನಿಯಾ ಗಾಂಧಿ ತೃಪ್ತಿಪಡಿಸಲು ಸಾವರ್ಕರ್ ಬಗ್ಗೆ ಹಗುರ ಹೇಳಿಕೆಗೆ ಆಕ್ರೋಶ|ಇಬ್ರಾಹಿಂ ಇಷ್ಟು ದಿನ ಸುಮ್ಮನೆ ಇದ್ದುದು ಏಕೆ?|
ದಾವಣಗೆರೆ[ಅ.31]: ತಣ್ಣಗಿದ್ದ ಕರ್ನಾಟಕವನ್ನು ಟಿಪ್ಪು ಹೆಸರನ್ನು ತಂದು ಗೊಂದಲ ಸೃಷ್ಟಿಸಿದ್ದು ಹಿಂದಿನ ಸಿಎಂ ಸಿದ್ದರಾಮಯ್ಯ. ತಣ್ಣನೆ ವಾತಾವರಣ ಮತ್ತೆ ತರಲು ಪ್ರಯತ್ನಿಸುತ್ತಿರುವ ಈಗಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕ್ರಮವನ್ನು ಸ್ವಾಗತಿಸುತ್ತೇವೆ ಎಂದು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಧರ್ಮ, ಧರ್ಮದ ಬಗ್ಗೆ ಹೊಡೆದಾಟ ಹಚ್ಚುವುದು, ಜಾತಿ-ಜಾತಿ ಮಧ್ಯೆ, ತಣ್ಣಗಿದ್ದ ವೀರಶೈವ ಲಿಂಗಾಯತ ಬಗ್ಗೆ ಬೇರೆ ಬೇರೆಯೆಂದು ಧರ್ಮ, ಜಾತಿ ಒಡೆಯುವ ಕೆಲಸವನ್ನು ಸಿದ್ದರಾಮಯ್ಯ, ಕಾಂಗ್ರೆಸ್ ಯಾವಾಗಲೂ ಮಾಡಿಕೊಂಡೇ ಬರುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಮಾಜವನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸ ಮಾಡಿಕೊಂಡು ಬರುತ್ತಿದೆ. ಟಿಪ್ಪು ಹಿಂದು ಸಮಾಜವನ್ನು ಒಡೆದಿದ್ದಾನೆ. ಹಿಂದು ಧರ್ಮದ ಅನೇಕ ದೇವಸ್ಥಾನಗಳನ್ನು ಪುಡಿಪುಡಿ ಮಾಡಿದ್ದಾನೆ. ಈ ಸಮಾಜವನ್ನು ಒಡೆದ ಧರ್ಮಭ್ರಷ್ಟನನ್ನು ಯಾಕೆ ಪಠ್ಯದಲ್ಲಿ ಇಟ್ಟುಕೊಳ್ಳಬೇಕು ಎಂದು ಪ್ರಶ್ನಿಸಿದರು.
ಮಹಾ ಪುರುಷರು ಸಾಕಷ್ಟು ಜನರಿದ್ದಾರೆ. ಸಾವರ್ಕರ್ ಬಗ್ಗೆ ಗೊಂದಲ ತಂದರು. ಸಾವರ್ಕರ್ ಇತಿಹಾಸವೇ ಗೊತ್ತಿಲ್ಲದಂತಹ ವ್ಯಕ್ತಿಯು ಸಾವರ್ಕರ್ ಟೀಕಿಸುವ ಭರದಲ್ಲಿ ಸ್ವಾಭಾವಿಕವಾಗಿ ರಾಷ್ಟ್ರಭಕ್ತರನ್ನು ಟೀಕಿಸುತ್ತಾರಲ್ಲಾ ಕಾಂಗ್ರೆಸ್ಸಿಗರು? ಯಾರು ರಾಷ್ಟ್ರಭಕ್ತರಿರುತ್ತಾರೋ ಅಂತಹವರನ್ನು ಬೆಂಬಲಿಸುವುದು, ಯಾರು ಧರ್ಮವನ್ನು ವಿರೋಧಿಸುತ್ತಾರೋ ಅಂತಹವರನ್ನು ದೂರವಿಡುವುದು ಬಿಜೆಪಿ ವ್ಯವಸ್ಥೆ ಎಂದು ಅವರು ತಿಳಿಸಿದರು.
ಅಲ್ಪಸಂಖ್ಯಾತ ವರ್ಗ ಅಂತಾ ಅನ್ನಲೇ ಬೇಡಿ. ಟಿಪ್ಪು ಬಗ್ಗೆ ಮಂಗಳವಾರ ಇಬ್ರಾಹಿಂ ಏನು ಹೇಳಿದರು. ಇಬ್ರಾಹಿಂ ಬಹು ಸಂಖ್ಯಾತನಾ? ಟಿಪ್ಪು ಒಬ್ಬ ಧರ್ಮಭ್ರಷ್ಟ. ಅನೇಕ ದೇವಸ್ಥಾನ ಒಡೆದಿದ್ದಾನೆ. ಮೂರ್ತಿ ಒಡೆದಿದ್ದಾನೆ. ಡಾ.ಚಿದಾನಂದಮೂರ್ತಿ ಪುಸ್ತಕಗಳಲ್ಲೇ ದಾಖಲೆ ಸಮೇತ ಬರೆದಿದ್ದಾರೆ. ಹೋಲಿಕೆ ಮಾಡುವುದು ಸೂಕ್ತವಲ್ಲ. ಸಾವರ್ಕರ್ ಸಾವರ್ಕರೇ ವೀರ ಸಾವರ್ಕರ್ ಎಂದು ಅವರು ಸ್ಪಷ್ಟಪಡಿಸಿದರು.
ಸಾವರ್ಕರ್‌ಗೆ ಟೀಕಿಸಲು, ಟಿಪ್ಪು ಹೊಗಳಲು ಕಾರಣ ಸೋನಿಯಾ ಗಾಂಧಿ ತೃಪ್ತಿಪಡಿಸಲು. ಸಾವರ್ಕರ್ ಟೀಕಿಸುವುದೂ ಅದೇ ಸೋನಿಯಾ ಗಾಂಧಿಗೆ ತೃಪ್ತಿಪಡಿಸುವುದು. ಆದರೆ, ಈ ವ್ಯವಸ್ಥೆ ಬಿಜೆಪಿಯಲ್ಲಿಲ್ಲ. ವೀರ ಸಾವರ್ಕರ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ಹೋರಾಟಗಾರ. ಅಂಡಮಾನ್‌ಗೆ ಹೋದರೆ ಕಣ್ಣಲ್ಲಿ ನೀರು ಬರುತ್ತದೆ. ಕಥೆ ಹೇಳುತ್ತದೆ ಮರ. ಜೈಲಲ್ಲಿ ಎಷ್ಟುಅನುಭವಿಸಿದವರು ಅಂತಾ ಎಂದು ಅವರು ತಿಳಿಸಿದರು.
ಸಾವರ್ಕರ್‌ರಂತಹ ವ್ಯಕ್ತಿಗೆ ಟೀಕಿಸುವ ಕಾಂಗ್ರೆಸ್ಸಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ಸನ್ನು ಮೂಲೆಗೆ ತಳ್ಳಿ, ಕಾಂಗ್ರೆಸ್ ಸರ್ಕಾರವನ್ನೇ ನಿರ್ನಾಮ ಮಾಡಿದ್ದಾರೆ. ಇದೇ ಮುಂದುವರಿದರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಉಳಿಯದು. ಅಧಿಕಾರ ಇದ್ದ ಪಕ್ಷ 78 ಸ್ಥಾನಕ್ಕೆ ಇಳಿದಿದೆ. ಧರ್ಮ, ಜಾತಿ ಉಳಿದ ಪಕ್ಷದ ಸ್ಥಿತಿ ಏನಾಗಿದೆ ಅರ್ಥ ಮಾಡಿಕೊಳ್ಳಲಿ. ಇದನ್ನು ಮುಂದುವರಿಸದಂತೆ ಕಾಂಗ್ರೆಸ್ಸಿಗೆ ಮನವಿ ಮಾಡುವೆ ಎಂದು ಅವರು ಹೇಳಿದರು.
ಇಬ್ರಾಹಿಂ ಇಷ್ಟು ದಿನ ಸುಮ್ಮನೆ ಇದ್ದುದು ಏಕೆ? ಟಿಪ್ಪು ಜಯಂತಿ ಬಗ್ಗೆ ಇಷ್ಟೊಂದು ಗಲಾಟೆಯಿಂದ ವ್ಯಕ್ತಿ ಸಾಯುತ್ತಿರಲಿಲ್ಲ. ತಲೆ ಕೆಟ್ಟಾಗಲೆಲ್ಲಾ ಒಂದೊಂದು ಹೇಳಿಕೆ ನೀಡುತ್ತಾರೆ. ನಾನ್ಯಾಕೆ ಉತ್ತರ ನೀಡಲಿ. ಸಂವಿಧಾನ ಬದಲಿಸುವ ಪ್ರಯತ್ನ ಬಿಜೆಪಿಯಿಂದ ಆಗಿದೆಯೇ? ಒಂದು ಅಕ್ಷರ ಬದಲಾಯಿಸಿದ್ದೇವಾ? ಇವರೇ ಹತ್ತು ಹತ್ತು ಸಲ ಹೇಳಿಕೊಂಡು ಹೋಗುತ್ತಿದ್ದಾರೆ ಎಂದು ಈಶ್ವರಪ್ಪ ಟೀಕಿಸಿದರು.