ಜೈಲಿನಿಂದ ಹೊರ ಬಂದ ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಿದ ರೀತಿ ನೋಡಿದರೆ ಅಚ್ಚರಿಯಾಗುತ್ತದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ದಾವಣಗೆರೆ (ಅ.28): ಅಕ್ರಮ ಹಣ ಸಂಗ್ರಹ ಪ್ರಕರಣದಲ್ಲಿ ಜೈಲು ಸೇರಿ ಬಿಡುಗಡೆಯಾಗಿರುವ ಡಿ.ಕೆ.ಶಿವಕುಮಾರ್ ಜೈಲಿನಿಂದ ಹೊರಗೆ ಬಂದ ನಂತರ ಕಾಂಗ್ರೆಸ್ ಸ್ವಾಗತಿಸಿದ ರೀತಿ, ವಿಜಯೋತ್ಸವ ನೋಡಿದರೆ ಆಶ್ಚರ್ಯವಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಿದ ಪಿ.ವಿ.ಸಿಂಧು, ಅಭಿನಂದನ್ ಅವರು ಬಂದಾಗಲೂ ಈ ರೀತಿ ವಿಜಯೋತ್ಸವ ಆಚರಿಸಿರಲಿಲ್ಲ ಎಂದರು.
ಭ್ರಷ್ಟಾಚಾರ ಮಾಡಿದವರಿಗೆ ಈ ರೀತಿ ಸ್ವಾಗತಿಸಿದ್ದಕ್ಕೆ ನಾಚಿಕೆಯಾಗಬೇಕು. ಇದು ಕಾಂಗ್ರೆಸ್ ದಿವಾಳಿತನವನ್ನು ತೋರಿಸುತ್ತದೆ. ಕೇಸಿನಿಂದ ಅವರು ಹೊರ ಬಂದಿಲ್ಲ. ಈಗ ಸಿಕ್ಕಿರುವುದು ಬೇಲ್ ಮಾತ್ರ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇನ್ನು ತಪ್ಪು ಮಾಡಿಲ್ಲವೆಂದು ನಿರ್ಧರಿಸಲು ಕೋರ್ಟ್ ಇದೆ. ಇವರೇ ಈಗ ನಿರ್ಧಾರ ಮಾಡಿಕೊಂಡಿದ್ದಾರೆ ಎಂದು ಸಚಿವ ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದರು.
ಇನ್ನುಅನರ್ಹ ಶಾಸಕರ ಬಗ್ಗೆಯೂ ಪ್ರಸ್ತಾಪಿಸಿದ ಈಶ್ವರಪ್ಪ, ಬಿಜೆಪಿ ಸರ್ಕಾರ ರಚನೆಯಲ್ಲಿ ಅನರ್ಹ ಶಾಸಕರ ತ್ಯಾಗವಿದೆ. ಅವರನ್ನು ಗೌರವಪೂರ್ಣವಾಗಿ ನಡೆಸಿಕೊಳ್ಳುವ ಕೆಲಸ ಬಿಜೆಪಿ ಮಾಡುತ್ತದೆ. ಅವರನ್ನು ಅಪಮಾನ ಮಾಡುವ ಪ್ರಶ್ನೆಯೇ ಇಲ್ಲ. ಸೀಟು ಹಂಚಿಕೆ ಮಾಡಿ ಅವರಿಗೆ ಕೊಡಲಾಗುತ್ತದೆ ಎಂದು ಸಚಿವ ಈಶ್ವರಪ್ಪ ಹೇಳಿದರು.