ತನ್ನ ಅಸ್ಥಿ ಮಜ್ಜೆದಾನ ಮಾಡಿ ಮಾರಕ ರೋಗದಿಂದ ಬಳಲುತ್ತಿದ್ದ ತನ್ನ ಪುಟ್ಟ ತಮ್ಮನ ಜೀವ ಕಾಪಾಡುವ ಮೂಲಕ ಅಕ್ಕ ಮರುಜನ್ಮ ನೀಡಿದ್ದಾರೆ.
ದಾವಣಗೆರೆ [ಅ.19]: ಹುಟ್ಟಿದ ಕೆಲವೇ ತಿಂಗಳಲ್ಲೇ ತಲಸ್ಸೇಮಿಯಾ ರೋಗವಿರುವುದು ಗೊತ್ತಾದ 5 ವರ್ಷದ ಹೇಮಂತ್‌ಗೆ ಆತನ ಸಹೋದರಿಯ ಎಚ್‌ಎಲ್‌ಎ ಹೊಂದಾಣಿಕೆಯಾಗಿ, ಅಸ್ಥಿಮಜ್ಜೆ ಕಸಿ ನಡೆದು, 12 ತಿಂಗಳ ನಂತರ ಸಂಪೂರ್ಣವಾಗಿ ಮಗು ಈಗ ರೋಗ ಮುಕ್ತ ಎಂದು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಷಾ ಕ್ಯಾನ್ಸರ್ ಚಿಕಿತ್ಸಾ ಕೇಂದ್ರದ ನಿರ್ದೇಶಕ, ಅಸ್ಥಿಮಜ್ಜೆ ಕಸಿ ತಜ್ಞ ಡಾ.ಸುನಿಲ್ ಭಟ್ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ದಾವಣಗೆರೆಯ ಬಾಲಕ ಹೇಮಂತ್ ತಲಸ್ಸೇಮಿಯಾ ರೋಗದಿಂದ ಬಳಲುತ್ತಿದ್ದ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಂದರ್ಭ ಬಾಲಕನ ಸಹೋದರಿ 10 ವರ್ಷದ ನಮ್ರತಾ ಎಚ್‌ಎಲ್‌ಎ ಹೊಂದಾಣಿಕೆಯಾಗಿದ್ದು, ಆತನ ಪಾಲಿಕೆ ವರದಾನವಾಗಿತ್ತು. ರಕ್ತದ ಮರು ಪೂರ್ಣದಲ್ಲಿ ಅಧಿಕ ಕಬ್ಬಿಣದ ಅಂಶ ಸಮಸ್ಯೆ, ಸೋಂಕು ಹಾಗೂ ಅಡ್ಡ ಪರಿಣಾಮದ ಅಪಾಯವೂ ಇಂತಹ ಪ್ರಕರಣದಲ್ಲಿ ಹೆಚ್ಚಾಗಿರುತ್ತದೆ. ಇದೀಗ ಅಸ್ಥಿಮಜ್ಜೆ ಕಸಿಯಾಗಿ 12 ತಿಂಗಳುಗಳೇ ಕಳೆದಿದ್ದು, ಮಗು ಹೇಮಂತ್ ಸಂಪೂರ್ಣ ರೋಗ ಮುಕ್ತವಾಗಿದ್ದು, ಇಡೀ ಕುಟುಂಬವೇ ಸಂಭ್ರಮದಲ್ಲಿದೆ ಎಂದು ಹೇಳಿದರು.
ಸಾಮಾನ್ಯವಾಗಿ ತಲಸೇಮಿಯಾ ರೋಗಿಗಳಲ್ಲಿ ಕೆಂಪು ರಕ್ತ ಕಣದ ಉತ್ಪಾದನೆ ಕಡಿಮೆ ಇದ್ದು, ರೋಗಿಗಳ ಸಾವಿನ ಪ್ರಮಾಣವೂ ಹೆಚ್ಚಾಗಿರುತ್ತದೆ. ಸೂಕ್ತ ಚಿಕಿತ್ಸೆ ನೀಡದಿದ್ದರೆ ಶೇ.90ಕಿಂತಲೂ ಹೆಚ್ಚು ಮಕ್ಕಳು 2 ವರ್ಷದೊಳಗಾಗಿ ಸಾವನ್ನಪ್ಪುತ್ತಾರೆ. ಈ ರೋಗಿಗಳು ಜೀವನಪರ್ಯಂತ ಪ್ರತಿ 3-4 ವಾರಕ್ಕೊಮ್ಮೆ ರಕ್ತದ ಮರು ಪೂರಣ ಮಾಡಿಸಿಕೊಳ್ಳಬೇಕಾದ ಅಗತ್ಯತೆ ಇರುತ್ತದೆ ಎಂದು ತಿಳಿಸಿದರು.
ಪದೇಪದೇ ರಕ್ತ ಮರುಪೂರ್ಣದ ಕಾರಣಕ್ಕೆ ಕಾಲಕ್ರಮೇಣ ರಕ್ತದಲ್ಲಿ ಕಬ್ಬಿಣದ ಅಂಶ ಅಧಿಕಾಗಿ ಲಿವರ್, ಹೃದಯ ಹಾನಿಯಾಗಿ ಸಾವನ್ನಪ್ಪುವ ಸಾಧ್ಯತೆಯೇ ಹೆಚ್ಚು. ತಲಸ್ಸೇಮಿಯಾ ರೋಗಿಗಳಲ್ಲಿ ಈಗ ಅಸ್ಥಿಮಜ್ಜೆ ಕಸಿಯ ಮೂಲಕ ರೋಗದಿಂದ ಮುಕ್ತರಾಗಿಸುವ ವಿಧಾನವು ವರವಾಗಿ ಪರಿಣಮಿಸಿದೆ ಎಂದರು. ಅಸ್ಥಿಮಜ್ಜೆ ಕಸಿಯನ್ನು ಸಾಮಾನ್ಯವಾಗಿ ಸಂಬಂಧಿದ ದಾನಿಗಳು, ಹೊಂದಾಣಿಕೆಯಾಗುವ ಅದರೆ ಸಂಬಂಧವಿಲ್ಲದ ದಾನಿಗಳು, ಹೆಪೋ ಐಡೆಂಟಿಕಲ್ ಡೋನರ್‌ಗಳಿಂದ ಪಡೆಯಲಾಗುತ್ತದೆ ಎಂದು ಡಾ.ಸುನಿಲ್ ಭಟ್ ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಗುವಿನ ತಾಯಿ ಕವಿತಾ ಮಾತನಾಡಿ, ತಮ್ಮ ಮಗು ಹೇಮಂತ್ ತಲಸ್ಸೇಮಿಯಾ ರೋಗಕ್ಕೆ ತುತ್ತಾದ ವಿಚಾರ ಗೊತ್ತಾಗಿ ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ವಾರಕ್ಕೊಮ್ಮೆ ರಕ್ತ ಬದಲಾವಣೆ ಮಾಡಬೇಕು. ಇಲ್ಲವೆಂದರೆ ಮಗು ಬದುಕು ಉಳಿಯುವುದಿಲ್ಲ ಎನ್ನುತ್ತಿದ್ದರು. ನಂತರ ಬೆಂಗಳೂರಿನ ನಾರಾಯಣ ಹೆಲ್ತ್ ಸೆಂಟರ್‌ನ ಡಾ.ಸುನಿಲ್ ಭಟ್‌ರನ್ನು ಭೇಟಿ ಮಾಡಿದಾಗ ಮಗುವಿಗೆ ಚಿಕಿತ್ಸೆ ಸಾಧ್ಯವೆಂಬ ಮಾತು ಹೇಳಿದ್ದು ತಮ್ಮಲ್ಲಿ ಧೈರ್ಯ ತಂದಿತು. ಮಗುವಿನ ಚಿಕಿತ್ಸೆಗಾಗಿ ಸುಮಾರು 10 ಲಕ್ಷ ರು. ಖರ್ಚು ಮಾಡಿದ್ದು, ಈಗ ನಮ್ಮ ಮಗು ಹೇಮಂತ್ ಸಂಪೂರ್ಣ ಗುಣಮುಖವಾಗಿದೆ ಎಂದು ಕವಿತಾ ಹೇಳಿದರು. ಪ್ರಶಾಂತ್, ಪ್ರವೀಣಕುಮಾರ, ಶಂಕರ ನಾರಾಯಣ ಇತರರು ಇದ್ದರು.