ದೇವರ ಕೋಣದ ಮಾಲಿಕತ್ವಕ್ಕೆ ಇದೀಗ ಡಿಎನ್‌ಎ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಈ ಪರೀಕ್ಷೆ ಹೇಗೆ ನಡೆಯುತ್ತದೆ ಎನ್ನುವುದಕ್ಕೆ ಉತ್ತರ ಇಲ್ಲಿದೆ.
ದಾವಣಗೆರೆ [ಅ.18]: ದೇವಿಗೆ ಬಿಟ್ಟಕೋಣ ಹೊನ್ನಾಳಿ ತಾಲೂಕು ಬೇಲಿಮಲ್ಲೂರು ಗ್ರಾಮಕ್ಕೆ ಸೇರಿದ್ದೋ ಅಥವಾ ಶಿವಮೊಗ್ಗ ಜಿಲ್ಲೆ ಹಾರನಹಳ್ಳಿ ಗ್ರಾಮಗಳ ಮಾರಿ ದೇವಿಗೆ ಸೇರಿದ್ದೋ ಎಂಬ ಬಗ್ಗೆ ವಿವಾದಿತ ಕೋಣ ಹಾಗೂ ಉಭಯ ಗ್ರಾಮಸ್ಥರು ಹೇಳಿದ ತಾಯಿ ಎಮ್ಮೆ ರಕ್ತದ ಸ್ಯಾಂಪಲ್, ಡಿಎನ್‌ಎ ತಪಾಸಣೆಗೆ ಹೈದರಾಬಾದ್‌ನ ಸಿಸಿಎಂಬಿ ಲ್ಯಾಬ್‌ಗೆ ಕಳಿಸಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ.
ಹೊನ್ನಾಳಿ ತಾಲೂಕು ಬೇಲಿಮಲ್ಲೂರು ಗ್ರಾಮಸ್ಥರು ಶಿವಮೊಗ್ಗ ಜಿಲ್ಲೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಹಾರನಹಳ್ಳಿ ಗ್ರಾಮಸ್ಥರು ತಮ್ಮ ಊರಿನ ಮಾರಿ ದೇವಿಗೆ ಬಿಟ್ಟಿದ್ದ ಕೋಣವನ್ನು ಕೊಂಡೊಯ್ದಿದ್ದಾರೆ ಎಂಬ ಬಗ್ಗೆ ದೂರು ದಾಖಲಾಗಿದ್ದು, ಕೋಣ ಕಳವು ಪ್ರಕರಣವನ್ನು ಹೊನ್ನಾಳಿ ಪೊಲೀಸರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಬೇಲಿಮಲ್ಲೂರು ಗ್ರಾಮದಲ್ಲಿ ಡಿಸೆಂಬರ್‌ನಲ್ಲಿ ಮಾರಿ ಜಾತ್ರೆಗೆಂದು ಬಿಟ್ಟಿದ್ದು, ಆಗಲೇ ಕೋಣ ಪೂಜೆ ಮಾಡುತ್ತೇವೆ. ಇನ್ನೂ ದಿನಾಂಕ ನಿಗದಿಪಡಿಸಿಲ್ಲವೆಂದು ಹೇಳುತ್ತಾರೆ. ಅದೇ ವೇಳೆ ಹಾರನಹಳ್ಳಿ ಗ್ರಾಮಸ್ಥರನ್ನು ವಿಚಾರಿಸಿದಾಗ ಅದೇ ಕೋಣ ತಮ್ಮ ಊರಿನ ಮಾರಿಗೆ ಬಿಟ್ಟಿದ್ದು, ಡಿಸೆಂಬರ್‌ನಲ್ಲಿ ಜಾತ್ರೆ ಇದೆಯೆಂದಿದ್ದಾರೆ. ಉಭಯ ಗ್ರಾಮಸ್ಥರು ಕೋಣ ತಮ್ಮ ಊರಿನ ದೇವಿಗೆ ಬಿಟ್ಟಿದ್ದೆಂದು ಹೇಳುತ್ತಿದ್ದಾರೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಎರಡೂ ಊರಿನವರೂ ಕೋಣ ತಮ್ಮ ಊರಿನ ದೇವಿಗೆ ಬಿಟ್ಟಿದ್ದು ಎನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಾದಿತ ಕೋಣದ ವಿಚಾರದಲ್ಲಿ ಸತ್ಯಾಸತ್ಯತೆ ಅರಿಯಲು ಇಲಾಖೆ ವೈಜ್ಞಾನಿಕ ವಿಧಾನದ ಮೊರೆ ಹೋಗಲಿದೆ ಎಂದು ತಿಳಿಸಿದರು.
ಎರಡೂವರೆ ವರ್ಷದ ಹಿಂದೆ ತಮ್ಮ ಕೋಣ ಕಳೆದಿದ್ದು, ಅದು ಈಗ ಸಿಕ್ಕಿದೆ ಎಂದು ಹಾರನಹಳ್ಳಿ ಗ್ರಾಮಸ್ಥರು ಹೇಳುತ್ತಿದ್ದು, ಹೊನ್ನಾಳಿ ವ್ಯಾಪ್ತಿಗೆ ಹಾರನಹಳ್ಳಿ ಗ್ರಾಮಸ್ಥರು ಬಂದು ಕೋಣ ಒಯ್ದಿದ್ದಾರೆಂದು ಬೇಲಿಮಲ್ಲೂರು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆಯೂ ತನಿಖೆ ಸಾಗಿದೆ ಎಂದು ಹೇಳಿದರು.
ಮಾಲಿಕತ್ವಕ್ಕೆ ಎರಡು ಗ್ರಾಮಗಳ ಜಿದ್ದಾಜಿದ್ದಿ, ದೇವರಿಗೆ ಬಿಟ್ಟ ಕೋಣಕ್ಕೂ ಡಿಎನ್‌ಎ ಪರೀಕ್ಷೆ...
ಅಶಾಂತಿ, ಗಲಭೆ ಮಾಡದಂತೆ ಉಭಯ ಗ್ರಾಮಸ್ಥರಿಗೂ ಸೂಚನೆ ನೀಡಿದ್ದೇವೆ. ಪ್ರಕರಣ ಇತ್ಯರ್ಥವರೆಗೆ ಗೋ ಶಾಲೆಯಲ್ಲಿ ಕೋಣ ಇಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸದ್ಯಕ್ಕೆ ಕಾನೂನಾತ್ಮಕವಾಗಿ ಪಶು ವೈದ್ಯಕೀಯ ಇಲಾಖೆ ತಜ್ಞರಿಂದ ವಿವಾದಿತ ಕೋಣ ಹಾಗೂ ಎರಡೂ ತಾಯಿ ಕೋಣಗಳ ರಕ್ತ ಮಾದರಿ, ಡಿಎನ್‌ಎ ಸಂಗ್ರಹ ಮಾಡಿ ಹೈದರಾಬಾದ್ ಸಿಸಿಎಂಬಿ ಲ್ಯಾಬ್ ಹಾಗೂ ನಮ್ಮಲ್ಲೂ ಇರುವ ಲ್ಯಾಬ್‌ನಲ್ಲಿ ತಪಾಸಣೆ ಮಾಡುತ್ತೇವೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.