
ಮಂಗಳೂರು: ಯಶವಂತಪುರ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಶೀಘ್ರದಲ್ಲೇ ಆರಂಭವಾಗಲಿರುವ ಬಹುನಿರೀಕ್ಷಿತ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿನ 16 ಬೋಗಿಗಳ ಎರಡನೇ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ಇಂದು (ಗುರುವಾರ) ನಡೆಯಲಿದೆ.
ರೈಲ್ವೆ ಮಂಡಳಿಯು ಸೆಪ್ಟೆಂಬರ್ 2ರಂದು ನೀಡಿದ್ದ ನಿರ್ದೇಶನದಂತೆ, ಯಶವಂತಪುರದಿಂದ ಮಂಗಳೂರು ಜಂಕ್ಷನ್‌ವರೆಗೆ ಹಾಗೂ ಅಲ್ಲಿಂದ ಮರಳಿ ಯಶವಂತಪುರಕ್ಕೆ ಖಾಲಿ ವಂದೇ ಭಾರತ್ ರೈಲನ್ನು (ರೇಕ್ ಸಂಖ್ಯೆ: IC2015) ಓಡಿಸಿ, ಒಟ್ಟು ಸಂಚಾರ ಸಮಯವನ್ನು ಪರಿಶೀಲಿಸಲಾಗುತ್ತಿದೆ. ವಿಶೇಷವೆಂದರೆ, ಈ ಬಾರಿಯ ಪ್ರಾಯೋಗಿಕ ಸಂಚಾರದಲ್ಲಿ ಕಬಕ–ಪುತ್ತೂರು ನಿಲ್ದಾಣಕ್ಕೂ ನಿಲುಗಡೆ ನೀಡಲಾಗಿದೆ.
ಯಶವಂತಪುರದಿಂದ ಮಂಗಳೂರು ಜಂಕ್ಷನ್‌ಗೆ:
ಯಶವಂತಪುರ: ಬೆಳಿಗ್ಗೆ 6.50ಕ್ಕೆ ನಿರ್ಗಮನ
ಹಾಸನ: ಬೆಳಿಗ್ಗೆ 9.33ಕ್ಕೆ ಆಗಮನ | 9.35ಕ್ಕೆ ನಿರ್ಗಮನ
ಸಕಲೇಶಪುರ: ಬೆಳಿಗ್ಗೆ 10.25ಕ್ಕೆ ಆಗಮನ | 10.30ಕ್ಕೆ ನಿರ್ಗಮನ
ಸುಬ್ರಹ್ಮಣ್ಯ ರೋಡ್: ಮಧ್ಯಾಹ್ನ 12.50ಕ್ಕೆ ಆಗಮನ | 12.55ಕ್ಕೆ ನಿರ್ಗಮನ
ಕಬಕ–ಪುತ್ತೂರು: ಮಧ್ಯಾಹ್ನ 2.34ಕ್ಕೆ ಆಗಮನ | 2.36ಕ್ಕೆ ನಿರ್ಗಮನ
ಪಡೀಲ್: ಮಧ್ಯಾಹ್ನ 2.40
ಮಂಗಳೂರು ಜಂಕ್ಷನ್: ಮಧ್ಯಾಹ್ನ 2.50ಕ್ಕೆ ತಲುಪಲಿದೆ.
ಮಂಗಳೂರು ಜಂಕ್ಷನ್: ಮಧ್ಯಾಹ್ನ 3.10ಕ್ಕೆ ನಿರ್ಗಮನ
ಪಡೀಲ್: ಮಧ್ಯಾಹ್ನ 3.20
ಕಬಕ–ಪುತ್ತೂರು: ಮಧ್ಯಾಹ್ನ 3.38ಕ್ಕೆ ಆಗಮನ | 3.40ಕ್ಕೆ ನಿರ್ಗಮನ
ಸುಬ್ರಹ್ಮಣ್ಯ ರೋಡ್: ಸಂಜೆ 4.35ಕ್ಕೆ ಆಗಮನ | 4.40ಕ್ಕೆ ನಿರ್ಗಮನ
ಸಕಲೇಶಪುರ: ಸಂಜೆ 6.50ಕ್ಕೆ ಆಗಮನ | 6.55ಕ್ಕೆ ನಿರ್ಗಮನ
ಹಾಸನ: ರಾತ್ರಿ 7.45ಕ್ಕೆ ಆಗಮನ | 7.47ಕ್ಕೆ ನಿರ್ಗಮನ
ಯಶವಂತಪುರ: ರಾತ್ರಿ 10.30ಕ್ಕೆ ತಲುಪುವ ನಿರೀಕ್ಷೆಯಿದೆ.
ತಾಂತ್ರಿಕ ಪರಿಶೀಲನೆ ಮತ್ತು ಸುರಕ್ಷತೆ: ಈ ಪ್ರಾಯೋಗಿಕ ಸಂಚಾರದ ಸಮಯದಲ್ಲಿ ರೈಲಿನ ಮೂಲ ಹಾಗೂ ಅಂತಿಮ ನಿಲ್ದಾಣಗಳ ಸಮಯ, ವಿವಿಧ ವಿಭಾಗಗಳ ನಡುವಿನ ಇಂಟರ್‌ಚೇಂಜ್‌ಗಳು ಮತ್ತು ನಿಲುಗಡೆ ಅವಧಿಯನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತದೆ. ವಿಶೇಷವಾಗಿ ಕಠಿಣವಾದ ಶಿರಾಡಿ ಘಾಟ್ ವಿಭಾಗದಲ್ಲಿ ರೈಲಿನ ವೇಗ ಮತ್ತು ಸಂಚಾರ ವ್ಯವಸ್ಥೆಯನ್ನು ತಾಂತ್ರಿಕ ಅಧಿಕಾರಿಗಳು ಹತ್ತಿರದಿಂದ ನಿಗಾವಹಿಸಲಿದ್ದಾರೆ.
ಬೆಂಗಳೂರು ಹಾಗೂ ಮೈಸೂರು ವಿಭಾಗಗಳ ಹಿರಿಯ ವಿಭಾಗೀಯ ಅಧಿಕಾರಿಗಳು, ಟೈಮ್‌ಟೇಬಲ್ ನಿಯಂತ್ರಕರು, ವಿದ್ಯುತ್, ಎಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ವಿಭಾಗಗಳ ಜಂಟಿ ಸಿಬ್ಬಂದಿ ಈ ಪ್ರಾಯೋಗಿಕ ಸಂಚಾರದಲ್ಲಿ ಭಾಗವಹಿಸಿ ಸಂಪೂರ್ಣ ವರದಿ ಸಿದ್ಧಪಡಿಸಲಿದ್ದಾರೆ. ಪ್ರಯಾಣಿಕರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ, ಸಂಚಾರ ಸಮಯವನ್ನು ಆದಷ್ಟು ಕಡಿತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಇಲಾಖೆ ತಿಳಿಸಿದೆ.