ಮಲಯಾಳಿ ಶಿಕ್ಷಕರ ವಿರುದ್ಧ ಮುಂದುವರಿದ ಪ್ರತಿಭಟನೆ

By Kannadaprabha News  |  First Published Oct 16, 2019, 8:55 AM IST

ಬೇಕಲ್ ಶಾಲೆಯ ಬಳಿಕ ಇದೀಗ ಉದುಮ ಶಾಲೆಯಲ್ಲಿಯೂ ಕೂಡ ವಿದ್ಯಾರ್ಥಿಗಳು ಮಲಯಾಳಿ ಶಿಕ್ಷಕರ ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದಾರೆ. 


ಮಂಗಳೂರು [ಅ.16]: ಕನ್ನಡ ಮಾಧ್ಯಮದ ಬೇಕಲ ಫಿಶರೀಸ್‌ ಹೈಯರ್‌ ಸೆಕೆಂಡರಿ ಸ್ಕೂಲ್‌ ಬಳಿಕ ಈಗ ಉದುಮ ಶಾಲೆಯಲ್ಲಿ ಹೊಸದಾಗಿ ನೇಮಕಗೊಂಡ ಮಲಯಾಳಿ ಭಾಷಿಕ ಶಿಕ್ಷಕರ ವಿರುದ್ಧ ಕನ್ನಡಿಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಈ ಶಾಲೆಗೆ ಕನ್ನಡ ಮಾಧ್ಯಮ ಶಿಕ್ಷಕರನ್ನು ನೇಮಕಗೊಳಿಸಿ, ಈ ಮಲಯಾಳಿ ಭಾಷಿಕ ಶಿಕ್ಷಕರನ್ನು ವರ್ಗಾವಣೆಗೊಳಿಸುವಂತೆ ಶಾಲಾ ಶಿಕ್ಷಕ-ರಕ್ಷಕ ಸಮಿತಿ ಸಭೆ ಸೇರಿ ಶಿಕ್ಷಣ ಇಲಾಖೆಯನ್ನು ಆಗ್ರಹಿಸುವ ನಿರ್ಣಯ ಕೈಗೊಂಡಿದೆ.

ವಿದ್ಯಾರ್ಥಿ-ಪೋಷಕರ ಪ್ರತಿಭಟನೆಯಿಂದ ಬೇಕಲ ಫಿಶರೀಸ್‌ ಹೈಯರ್‌ ಸೆಕೆಂಡರಿ ಸ್ಕೂಲ್‌ಗೆ ಹೊಸದಾಗಿ ನೇಮಕಗೊಂಡ ಮಲಯಾಳಿ ಭಾಷಿಕ ಶಿಕ್ಷಕಿ ಸೋಮವಾರ ಮೂರು ತಿಂಗಳ ರಜೆ ಮೇಲೆ ತೆರಳಿದ್ದರು. ಆದರೆ ಉದುಮ ಹೈಯರ್‌ ಸೆಕೆಂಡರಿ ಸ್ಕೂಲ್‌ಗೆ ನೇಮಕಗೊಂಡ ಮಲಯಾಳಿ ಭಾಷಿಕ, ಅಂಧತ್ವದಿಂದ ಬಳಲುತ್ತಿರುವ ಶಿಕ್ಷಕ ಮಂಗಳವಾರವೂ ಶಾಲೆಗೆ ಆಗಮಿಸಿದ್ದಾರೆ. ಇದರಿಂದಾಗಿ ಎರಡನೇ ದಿನವೂ ಇಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ಶಾಲಾ ಆವರಣದಲ್ಲಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಸ್ವಲ್ಪ ಹೊತ್ತು ಪ್ರತಿಭಟನೆ ನಡೆಸಿದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೋಮವಾರ ಶಾಲಾ ಮುಖ್ಯಗುರುವಿನ ಸೂಚನೆ ಮೇರೆಗೆ ತರಗತಿಗೆ ಸಮಾಜ ವಿಜ್ಞಾನ ಪಾಠಕ್ಕೆ ತೆರಳಿದ ಹೊಸ ಶಿಕ್ಷಕ, ಕನ್ನಡ ಭಾಷೆ ಗೊತ್ತಿಲ್ಲದೆ ಪರದಾಡಬೇಕಾಯಿತು. ವಿದ್ಯಾರ್ಥಿಗಳು ಕೂಡ ಮಲಯಾಳಿ ಭಾಷೆ ತಿಳಿಯದೆ ತಿಣುಕಾಡುವಂತಾಯಿತು. ಇದೇ ವೇಳೆ ಅಂಧತ್ವದಿಂದ ಬಳಲುತ್ತಿರುವುದರಿಂದ ಈ ಶಿಕ್ಷಕರು ಬೇರೊಬ್ಬರ ಸಹಾಯವಿಲ್ಲದೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಕನ್ನಡ ಭಾಷೆಯ ಜ್ಞಾನ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವುದು ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಶಾಲಾ ಮುಖ್ಯಗುರುಗಳು ಮೇಲಧಿಕಾರಿಗಳ ಗಮನಕ್ಕೆ ಪತ್ರ ಬರೆದಿದ್ದರು.

ಪಿಟಿಎ ಸಭೆ:  ವಿದ್ಯಾರ್ಥಿ ಹಾಗೂ ಪೋಷಕರ ವಿರೋಧದ ಹಿನ್ನೆಲೆಯಲ್ಲಿ ಉದಮ ಶಾಲಾ ಶಿಕ್ಷಕ-ರಕ್ಷಕ ಸಂಘದ ಸಭೆ ಮಂಗಳವಾರ ನಡೆದಿದೆ. ಈ ಸಭೆಯಲ್ಲಿ ಕನ್ನಡಿಗ ವಿದ್ಯಾರ್ಥಿಗಳ ಹಿತ ಕಾಯುವ ಸಲುವಾಗಿ ಹೊಸದಾಗಿ ನೇಮಕಗೊಂಡ ಶಿಕ್ಷಕರನ್ನು ಬೇರೆ ಕಡೆಗೆ ವರ್ಗಾವಣೆಗೊಳಿಸಬೇಕು. ಇಲ್ಲವೇ ಅವರನ್ನು ರಜೆ ಮೇಲೆ ಕಳುಹಿಸುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಣಯವನ್ನು ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಬುಧವಾರ ಸಲ್ಲಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸತ್ತಾರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಇಂದು ಪ್ರತಿಭಟನೆ:  ಬೇಕಲ ಶಾಲೆಯಲ್ಲಿ ಹೊಸ ಶಿಕ್ಷಕಿ ರಜೆ ಮೇಲೆ ತೆರಳಿದ ಕಾರಣ ಅಲ್ಲಿ ಮಂಗಳವಾರ ಎಂದಿನಂತೆ ತರಗತಿ ನಡೆದಿದೆ. ಉದುಮ ಶಾಲೆಗೆ ಮಂಗಳವಾರ ಹೊಸ ಶಿಕ್ಷಕ ಆಗಮಿಸಿದರೂ ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ತರಗತಿಗೆ ಹಾಜರಾಗಲಿಲ್ಲ. ಈ ಶಿಕ್ಷಕ ರಜೆ ಮೇಲೆ ತೆರಳುವಲ್ಲಿವರೆಗೆ ಅಥವಾ ವರ್ಗಾವಣೆ ವರೆಗೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಬೇಕಲ-ಉದುಮ ಕನ್ನಡ ಮಾಧ್ಯಮ ಶಾಲಾ ರಕ್ಷಕರ ಸಂಘದ ಅಧ್ಯಕ್ಷ ಶಂಕರ್‌ ತಿಳಿಸಿದ್ದಾರೆ.

click me!