
ನವದೆಹಲಿ: ದೇಶದಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾChaರ ಹಾಗೂ ಭೀಕರ ಕೊ*ಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರಕರಣದ ಮರುತನಿಖೆಗೆ ಆದೇಶಿಸಿರುವ ದೇಶದ ಅತ್ಯುನ್ನತ ನ್ಯಾಯಾಲಯ, ಘಟನೆಯ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ.
ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಅವರು ಅರ್ಜಿ ಸಲ್ಲಿಸಿ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಿ, ನ್ಯಾಯ ಒದಗಿಸಬೇಕು ಎಂದು ಕೋರಿ ಸಲ್ಲಿಸಿದ್ದರು. ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.
ಕಳೆದ ಜುಲೈ ತಿಂಗಳಿನಲ್ಲಿ ನಡೆದ ಅರ್ಜಿಯ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ, ಈ ಹಿಂದೆ ಸಿಬಿಐ ನಡೆಸಿದ್ದ ತನಿಖಾ ವೈಖರಿಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ಮತ್ತು ಅತೃಪ್ತಿಯನ್ನು ವ್ಯಕ್ತಪಡಿಸಿತ್ತು. ತನಿಖೆಯಲ್ಲಿ ಹಲವು ಲೋಪದೋಷಗಳಿದ್ದು, ನೈಜ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ತನಿಖಾ ಸಂಸ್ಥೆ ವಿಫಲವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿತ್ತು.
ಅಂದೇ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯಪೀಠ, ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರಲು ಹಾಗೂ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸಲು ಹೊಸದಾಗಿ ಮರುತನಿಖೆಗೆ ಅನುಮತಿ ನೀಡುವ ಸ್ಪಷ್ಟ ಸುಳಿವು ನೀಡಿತ್ತು.
17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ದುರಂತದ ಬಗ್ಗೆ 2012ರಿಂದ ಕುಟುಂಬಸ್ಥರು ಹಾಗೂ ರಾಜ್ಯದ ಸಾರ್ವಜನಿಕರು ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ವಿಚಾರಣಾ ನ್ಯಾಯಾಲಯವು ಈ ಹಿಂದೆ ಬಂಧಿತನಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಿದ ನಂತರ, ನೈಜ ಕೊಲೆಗಾರ ಯಾರು ಎಂಬ ಯಕ್ಷ ಪ್ರಶ್ನೆ ಇನ್ನೂ ಇದೆ.
ಈಗ ಸುಪ್ರೀಂ ಕೋರ್ಟ್ ನೀಡಿರುವ ಮರುತನಿಖೆಯ ಆದೇಶದಿಂದಾಗಿ ಸೌಜನ್ಯ ತಾಯಿ ಕುಸುಮಾವತಿ ಗೌಡ ಹಾಗೂ ಕುಟುಂಬಸ್ಥರಲ್ಲಿ ನ್ಯಾಯ ಸಿಗುವ ಹೊಸ ಭರವಸೆ ಮೂಡಿದ್ದು, ಕರಾವಳಿ ಭಾಗದಲ್ಲಿ ತೀರ್ಪಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
2012ರ ಅಕ್ಟೋಬರ್‌ನಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅವರ ಅತ್ಯಾ**ರ ಹಾಗೂ ಕ್ರೂರ ಹ**ತ್ಯೆ ನಡೆಯಿತು. ಈ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಸಿಬಿಐ ವಿಶೇಷ ನ್ಯಾಯಾಲಯವು 2023ರಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಸಂತೋಷ್ ರಾವ್ ಅವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿತ್ತು.