ಮಂಗಳೂರಿನ ಪಂಪ್‌ವೆಲ್‌ನಲ್ಲಿ ಸರ್ವೀಸ್ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಈ ಬಸ್ ನಿಲ್ದಾಣ ಕಾಮಗಾರಿಗೆ ಶೀಘ್ರವೇ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ.
ಮಂಗಳೂರು(ಅ.20): ಕೊನೆಗೂ ಮಂಗಳೂರು ನಗರದ ಪಂಪ್‌ವೆಲ್‌ನಲ್ಲೇ ಪ್ರಸ್ತಾವಿತ ಸರ್ವಿಸ್ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಈ ಬಸ್ ನಿಲ್ದಾಣ ಕಾಮಗಾರಿಗೆ ಶೀಘ್ರವೇ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸ್ಮಾರ್ಟ್‌ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಝೀರ್ ಈ ವಿಷಯ ತಿಳಿಸಿದ್ದಾರೆ.
ಮಂಗಳೂರು: ವಾರಾಂತ್ಯದಲ್ಲಿ ಮಳೆ ದೂರ
ಈ ಹಿಂದೆ ಪಂಪ್‌ವೆಲ್‌ನಲ್ಲಿ ಸರ್ವಿಸ್ ಬಸ್ ನಿಲ್ದಾಣ ನಿರ್ಮಿಸುವ ಪ್ರಸ್ತಾಪ ಇತ್ತು. ಆದರೆ ಅದು ಕಾರ್ಯಸಾಧುವಲ್ಲ ಎಂಬ ಕಾರಣಕ್ಕೆ ಅದನ್ನು ಹೊರವಲಯದ ಪಡೀಲಿನಲ್ಲಿ ನಿರ್ಮಿಸಿದರೆ ಉತ್ತಮ ಎಂಬ ನಿರ್ಧಾರಕ್ಕೆ ಬರಲಾಯಿತು. ಆದರೆ ಪಿಪಿಪಿ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಸರ್ವಿಸ್ ಬಸ್ ನಿಲ್ದಾಣವನ್ನು ಮತ್ತೆ ಪಂಪ್‌ವೆಲ್‌ನಲ್ಲೇ ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲಿರುವ ಸುಮಾರು 7.50 ಎಕರೆ ಜಾಗದಲ್ಲಿ 445 ಕೋಟಿ ರು. ಮೊತ್ತದಲ್ಲಿ ಸರ್ವಿಸ್ ಬಸ್ ನಿಲ್ದಾಣ ತಲೆಎತ್ತಲಿದೆ. ಇದನ್ನು ಸ್ಮಾರ್ಟ್‌ಸಿಟಿಯ ಹೈಪರ್ ಕಮಿಟಿಗೆ ಮಂಡಿಸಿ, ಬಳಿಕ ಟೆಂಡರ್ ಕರೆಯಲಾಗುವುದು ಎಂದಿದ್ದಾರೆ.
ಸ್ಟೇಟ್‌ಬ್ಯಾಂಕ್‌ನಲ್ಲಿ ಸಿಟಿ ಬಸ್ ಸ್ಟ್ಯಾಂಡ್:
ಪಂಪ್‌ವೆಲ್‌ನಲ್ಲಿ ಸರ್ವಿಸ್ ಬಸ್ ನಿಲ್ದಾಣ ನಿರ್ಮಾಣವಾದರೆ, ಸ್ಟೇಟ್‌ಬ್ಯಾಂಕ್‌ನಲ್ಲಿ ಸಿಟಿ ಬಸ್ ನಿಲ್ದಾಣ ಮಾತ್ರ ಇರಲಿದೆ. ಇದರಿಂದಾಗಿ ನಗರದಲ್ಲಿ ಸಂಚಾರ ದಟ್ಟಣೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸಲು ಸಾಧ್ಯವಾಗಲಿದೆ ಎಂದು ಮೊಹಮ್ಮದ್ ನಝೀರ್ ಹೇಳಿದ್ದಾರೆ.
ರಸ್ತೆ ವಿಭಾಜಕ ಸ್ಥಳಾಂತರ:
ನಗರದ ಕ್ಲಾಕ್‌ಟವರ್‌ನಿಂದ ಎ.ಬಿ.ಶೆಟ್ಟಿವೃತ್ತದ ವರೆಗಿನ ದ್ವಿಪಥ ರಸ್ತೆಯನ್ನು ಸ್ಮಾರ್ಟ್ ರಸ್ತೆಯಾಗಿ ಮಾರ್ಪಡಿಸಲಾಗುತ್ತಿದೆ. ಇಲ್ಲಿರುವ ರಸ್ತೆ ವಿಭಾಜಕವನ್ನು 1.8 ಮೀಟರ್‌ನಷ್ಟುನೆಹರೂ ಮೈದಾನದ ಕಡೆಗೆ ಸ್ಥಳಾಂತರಿಸಲಾಗುವುದು. ಆ ಭಾಗದಲ್ಲಿ ವಾಹನ ಪಾರ್ಕಿಂಗ್ ಮತ್ತು ಫುಟ್‌ಪಾತ್ ಇರಲಿದೆ. ಲೋಕೋಪಯೋಗಿ ಇಲಾಖೆಯ ಭಾಗದಲ್ಲಿ ಬಸ್ ಬೇ, ಬಸ್ ಶೆಲ್ಟರ್ ಹಾಗೂ ಫುಟ್‌ಪಾತ್ ಇರಲಿದೆ. ಹಾಲಿ ಬಸ್ ಶೆಲ್ಟರ್‌ನ್ನು ಸ್ವಲ್ಪ ಮುಂದಕ್ಕೆ ಸ್ಥಳಾಂತರಿಸಿ, ಅದರ ಹಿಂಭಾಗ ಫುಟ್‌ಪಾತ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಮೊಹಮ್ಮದ್ ನಝೀರ್ ಹೇಳಿದ್ದಾರೆ.
ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!
ಸ್ಮಾರ್ಟ್‌ಸಿಟಿ ಯೋಜನೆಯಡಿ ವೆನ್ಲಾಕ್ ಆಸ್ಪತ್ರೆಗೆ 45 ಕೋಟಿ ರು. ವೆಚ್ಚದಲ್ಲಿ 30 ಬೆಡ್‌ಗಳ ಐಸಿಯು, ವೆನ್ಲಾಕ್‌ನ ಮಿಲಾಗ್ರಿಸ್ ಕಡೆಯ ರಸ್ತೆಯ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಲೇಡಿಗೋಶನ್ ಆಸ್ಪತ್ರೆಗೆ 5 ಕೋಟಿ ರು. ವೆಚ್ಚದಲ್ಲಿ ಇನ್ನೊಂದು ಅಂತಸ್ತು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮಹಾನಗರಪಾಲಿಕೆ ಕಮಿಷನರ್ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಸ್ಮಾರ್ಟ್‌ಸಿಟಿ ನಿರ್ದೇಶಕ ಡಿ.ಪಿ. ಮೆಹ್ತಾ, ಸ್ವತಂತ್ರ ನಿರ್ದೇಶಕಿ ಅಂಬಾ ಶೆಟ್ಟಿ, ಜನರಲ್ ಮೆನೇಜರ್ ಮಹೇಶ್ ಕುಮಾರ್, ಪಾಲಿಕೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಲಿಂಗೇಗೌಡ ಇದ್ದರು.
20 ಸ್ಮಾರ್ಟ್ ಬಸ್ ಶೆಲ್ಟರ್
ಮಂಗಳೂರು ನಗರದಲ್ಲಿ ನಿರ್ಮಿಸಲುದ್ದೇಶಿಸಿದ 20 ಸ್ಮಾರ್ಟ್ ಬಸ್ ಶೆಲ್ಟರ್‌ಗಳಲ್ಲಿ 17 ಬಸ್ ಶೆಲ್ಟರ್‌ಗಳ ಕಾಮಗಾರಿ ಪೂರ್ಣಗೊಂಡಿದೆ. ತಣ್ಣೀರುಬಾವಿ ಹಾಗೂ ಮಣ್ಣಗುಡ್ಡೆ ಬಸ್ ಶೆಲ್ಟರ್ ಕಾಮಗಾರಿ ಸ್ವಲ್ಪ ನಿಧಾನವಾಗಿದೆ ಎಂದು ಮೊಹಮ್ಮದ್ ನಝೀರ್ ಹೇಳಿದರು.
ಮಳೆ ನೀರು ಬೀಳದ ಹಾಗೆ ಸ್ಮಾಟ್ ಬಸ್ ಶೆಲ್ಟರ್ ವಿನ್ಯಾಸದಲ್ಲಿ ಮಾರ್ಪಡು ಮಾಡಲಾಗಿದೆ. ಎ, ಬಿ ಮತ್ತು ಸಿ ಕೆಟಗರಿಯಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಎ ಕೆಟಗರಿಯ ಪ್ರತಿ ಬಸ್ ಶೆಲ್ಟರ್‌ಗೆ 21 ಲಕ್ಷ ರು. ವೆಚ್ಚ ತಗಲಿದೆ. ಇದರಲ್ಲಿ ಇ ಟಾಯ್ಲೆಟ್ ವ್ಯವಸ್ಥೆಯಿದೆ. ಬಿ ಕೆಟಗರಿ ಬಸ್ ಶೆಲ್ಟರ್‌ಗೆ 15 ಲಕ್ಷ ರು. ವೆಚ್ಚ ತಗಲಿದೆ. ಇದರಲ್ಲಿ ಇ ಟಾಯ್ಲೆಟ್ ಸೌಲಭ್ಯವಿಲ್ಲ. ಸಿ ಕೆಟಗರಿ ಪ್ರತಿ ಶೆಲ್ಟರ್‌ಗೆ 12 ಲಕ್ಷ ರು. ವೆಚ್ಚ ತಗಲಿದ್ದು, ಸ್ವಲ್ಪ ಸಣ್ಣದಾಗಿದ್ದು, ಇದರಲ್ಲೂ ಇ ಟಾಯ್ಲೆಟ್ ವ್ಯವಸ್ಥೆ ಇರುವುದಿಲ್ಲ ಎಂದಿದ್ದಾರೆ.
ಕಂಟ್ರೋಲ್ ಸೆಂಟರ್ ಪೂರ್ಣ
ಮಂಗಳೂರು ಮಹಾನಗರಪಾಲಿಕೆ ಕಚೇರಿ ಕಟ್ಟಡದ ಮೊದಲ ಮಹಡಿಯಲ್ಲಿ ಸ್ಮಾರ್ಟ್‌ಸಿಟಿಯ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಕಾಮಗಾರಿ ಪೂರ್ಣಗೊಂಡಿದೆ. ಪರಿಸರ ಸೂಚ್ಯಂಕಗಳ ನೇರ ಪ್ರಸಾರಕ್ಕೆ ಅವಕಾಶವಿದೆ. ಸೆಪ್ಟೆಂಬರ್ 26ರಂದು ಐಟಿ ಸೊಲ್ಯುಶನ್ ಕುರಿತು ಪ್ರಾತ್ಯಕ್ಷಿಕೆ ಕೂಡ ನಡೆಸಲಾಗಿದೆ.
ಸ್ಮಾರ್ಟ್‌ಸಿಟಿಯಡಿ ಸರ್ಕಾರಿ ಕಟ್ಟಡಗಳಿಗೆ ಎಲ್‌ಇಡಿ ಬಲ್‌್ಬ ಅಳವಡಿಕೆ ಕಾರ್ಯ ನಡೆಯುತ್ತಿದೆ. 27 ಸರ್ಕಾರಿ ಕಟ್ಟಡಗಳಲ್ಲಿ 10, 058 ಲೈಟ್ ಅಳವಡಿಕೆ ಪೂರ್ಣಗೊಂಡಿದೆ. ಇದರಿಂದ ಶೇ.30ರಿಂದ 40ರಷ್ಟುವಿದ್ಯುತ್ ಉಳಿತಾಯವಾಗಲಿದೆ ಎಂದು ಮೊಹಮ್ಮದ್ ನಝೀರ್ ಹೇಳಿದ್ದಾರೆ.
ಮಂಗಳೂರು: ವಾರಾಂತ್ಯದಲ್ಲಿ ಮಳೆ ದೂರ