ಜಾಲತಾಣದಲ್ಲಿ ಪೂಜಾರಿ ಸಾವಿನ ವದಂತಿ: ದೂರು

By Kannadaprabha NewsFirst Published Oct 20, 2019, 8:30 AM IST
Highlights

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಇನ್ನಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಪ್ರಸಂಗ ನಡೆದಿದೆ. ಈ ಕುರಿತು ಸ್ವತಃ ಸ್ಪಷ್ಟನೆ ನೀಡಿರುವ ಪೂಜಾರಿ, ನಾನು ಆರೋಗ್ಯವಾಗಿದ್ದೇನೆ ಎಂದಿದ್ದಾರೆ. ಪೂಜಾರಿ ಸಾವಿನ ಕುರಿತ ಸುಳ್ಳು ಸುದ್ದಿ ಶುಕ್ರವಾರ ಏಕಾಏಕಿ ಜಾಲತಾಣಗಳಲ್ಲಿ ಹರಿದಾಡತೊಡಗಿತ್ತು

ಮಂಗಳೂರು(ಅ.20): ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಇನ್ನಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಪ್ರಸಂಗ ನಡೆದಿದೆ. ಈ ಕುರಿತು ಸ್ವತಃ ಸ್ಪಷ್ಟನೆ ನೀಡಿರುವ ಪೂಜಾರಿ, ನಾನು ಆರೋಗ್ಯವಾಗಿದ್ದೇನೆ ಎಂದಿದ್ದಾರೆ.

ಪೂಜಾರಿ ಸಾವಿನ ಕುರಿತ ಸುಳ್ಳು ಸುದ್ದಿ ಶುಕ್ರವಾರ ಏಕಾಏಕಿ ಜಾಲತಾಣಗಳಲ್ಲಿ ಹರಿದಾಡತೊಡಗಿತ್ತು. ಹಲವಾರು ಮಂದಿ ಪೂಜಾರಿ ಅವರಿಗೆ, ಅವರ ಆಪ್ತರಿಗೆ ಕರೆ ಮಾಡಿ ವಿಚಾರಿಸತೊಡಗಿದ್ದರು.

ಬಳಿಕ ಜಾಲತಾಣದಲ್ಲಿ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಲಾಗಿದ್ದರೂ ವದಂತಿ ಹರಿದಾಡುವುದು ನಿಂತಿರಲಿಲ್ಲ.ಹಾಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕುದ್ರೋಳಿ ದೇವಾಲಯದ ಪ್ರಮುಖರಾದ ಪದ್ಮರಾಜ್‌ ಪೊಲೀಸ್‌ ಕಮೀಷನರ್‌ಗೆ ದೂರು ನೀಡಿದ್ದಾರೆ.

ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸರ್ಕಾರದ ವಶಕ್ಕೆ..?

ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಜನಾರ್ದನ ಪೂಜಾರಿ, ಗೋಕರ್ಣನಾಥ ದೇವರ ಆಶೀರ್ವಾದ ನನ್ನ ಮೇಲಿದೆ. ಆರೋಗ್ಯವಾಗಿದ್ದೇನೆ. ಯಾರೂ ಚಿಂತಿಸಬೇಡಿ ಎಂದಿದ್ದಾರೆ. ಪೂಜಾರಿ ಅವರ ಆಪ್ತರಾಗಿರುವ ಹರಿಕೃಷ್ಣ ಬಂಟ್ವಾಳ್‌ ಮಾತನಾಡಿ, ಪೂಜಾರಿಯವರು ಎಂದಿನಂತೆಯೇ ಆರೋಗ್ಯವಾಗಿ ಓಡಾಡಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಕುದ್ರೋಳಿ ದೇವಾಲಯದಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಪ್ರಕಾಶ್‌ ರಾಥೋಡ್‌ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರ ಆರೋಗ್ಯದಲ್ಲಿ ಏನೂ ಏರುಪೇರಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂಥ ಮಟ್ಟಕ್ಕೆ ಯಾರೂ ಇಳಿಯಬಾರದು. ಇನ್ನು 2 ದಿನ ನೋಡುತ್ತೇವೆ. ಮತ್ತೂ ವದಂತಿ ಹಬ್ಬಿಸುವುದು ನಿಲ್ಲಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಮಾತನಾಡಿ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಬಂಟ್ವಾಳ್‌ ತಿಳಿಸಿದ್ದಾರೆ.

ಬೇಕಲ ಶಾಲೆಗೆ ಶೀಘ್ರ ಕನ್ನಡಿಗ ಶಿಕ್ಷಕರ ನೇಮಕ

click me!