ಪ್ರತಿ ವರ್ಷವೂ ಚಾರ್ಮಾಡಿಯಲ್ಲಿ ಸಮಸ್ಯೆಳು ತಪ್ಪುವುದಿಲ್ಲ. ಭೀಕರ ಪ್ರವಾಹಕ್ಕೆ ಕೊಚ್ಚಿ ಹೋದ ಚಾರ್ಮಾಡಿ ನದಿ ಪಾತ್ರಗಳಲ್ಲಿ ತಡೆಗೋಡೆ ಹಾಗೂ ಅಂತರ ಎಂಬಲ್ಲಿಗೆ ಶಾಶ್ವತ ಸೇತುವೆ ನಿರ್ಮಿಸಿಕೊಡಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಮಂಗಳೂರು(ಅ.25): ಭೀಕರ ಪ್ರವಾಹಕ್ಕೆ ಕೊಚ್ಚಿ ಹೋದ ಚಾರ್ಮಾಡಿ ನದಿ ಪಾತ್ರಗಳಲ್ಲಿ ತಡೆಗೋಡೆ ಹಾಗೂ ಅಂತರ ಎಂಬಲ್ಲಿಗೆ ದೊಡ್ಡ ಸೇತುವೆಯ ನಿರ್ಮಾಣಕ್ಕೆ ಸಹಕರಿಸುವುದಾಗಿ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಕಳೆದ ಆ. 9 ರಂದು ಸಂಭವಿಸಿದ ಜಲಸ್ಫೋಟದ ಸಂದರ್ಭ ನಾಶವಾದ ಚಾರ್ಮಾಡಿ ಪ್ರದೇಶದ ಅರಣ ಪಾದೆಗೆ ಶಾಸಕ ಹರೀಶ ಪೂಂಜ ಅವರ ವಿನಂತಿಯ ಮೇರೆಗೆ ಗುರುವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
undefined
ಉಳ್ಳಾಲದಲ್ಲಿ ಕಡಲು ಬಿರುಸು: ಅಪಾಯದಂಚಿನಲ್ಲಿ ಮನೆಗಳು
ಬೆಳ್ತಂಗಡಿಯಲ್ಲಿ ನದಿ ಪಾತ್ರ ಸಂಪೂರ್ಣ ಬದಲಾಗಿದೆ. ಹಲವಾರು ವರ್ಷಗಳಿಂದ ಬೆಳೆಸಿದ ಕೃಷಿ ನಾಶವಾಗಿದೆ. ಜನ ಸಂಕಷ್ಟದಲ್ಲಿದ್ದಾರೆ. ವೆಂಟೆಡ್ ಡ್ಯಾಂ ಇರುವಲ್ಲಿ ಅಧಿಕ ಹಾವಳಿಯಾಗಿದೆ. ಪ್ರವಾಹದಲ್ಲಿ ಬಂದ ದೊಡ್ಡ ಬಂಡೆಗಳನ್ನು ನೋಡಿ ಆಶ್ಚರ್ಯವಾಗಿದೆ. ಹಾನಿಗಳಿಗೆ ಸರ್ಕಾರ ಈಗಾಗಲೇ ಪರಿಹಾರ ಘೋಷಣೆ ಮಾಡಿದೆ. ಕೃಷಿ ನಾಶಕ್ಕೆ ಒಂದು ಹೆಕ್ಟೇರ್‌ಗೆ 38 ಸಾವಿರ ಹಾಗು ಮನೆ ನಿರ್ಮಾಣಕ್ಕೆ 5 ಲಕ್ಷ ರು. ನೀಡಲಾಗುತ್ತದೆ ಎಂಬುದನ್ನು ಈಗಾಲೇ ತಿಳಿಸಲಾಗಿದೆ ಎಂದಿದ್ದಾರೆ.
ಶಾಶ್ವತ ತಡೆಗೋಡೆ:
ಜನರು ಇಲ್ಲಿ ತಡೆಗೋಡೆ ಹಾಗೂ ಸೇತುವೆಯ ಬೇಡಿಕೆ ಇಟ್ಟಿದ್ದಾರೆ. ಅವರ ಅಹವಾಲಿಗೆ ಅನುಸಾರವಾಗಿ ಇಲ್ಲಿನ ಶಾಶ್ವತ ಪರಿಹಾರದ ನಿಟ್ಟಿನಲ್ಲಿ ಸುಮಾರು ಎರಡೂವರೆ ಕಿ.ಮೀ.ನಷ್ಟುಶಾಶ್ವತ ತಡೆಗೋಡೆ ಹಾಗು ದೊಡ್ಡ ಸೇತುವೆಗೆ ಕೂಡಲೇ ಮಂಜೂರಾತಿ ನೀಡುವುದಾಗಿ ಭರವಸೆ ನೀಡಿದರು.
ಇಲ್ಲಿನ ಭೌಗೋಳಿಕತೆಗೆ ಅನುಸಾರವಾಗಿ ದೀರ್ಘಾವಧಿ ಪರಿಹಾರವನ್ನು ತಜ್ಞರ ಜೊತೆ ಚರ್ಚಿಸಿ ಅನುಷ್ಠಾನಕ್ಕೆ ತರಲಿದ್ದೇವೆ. ಮುಂದಿನ ದಿನಗಳಲ್ಲಿ ನೀರಿನ ಬಳಕೆಯ ಬಗ್ಗೆಯೂ ದೂರದೃಷ್ಟಿಯ ಯೋಜನೆಗಳನ್ನು ತರಲಾಗುವುದು. ಪಶ್ಚಿಮ ಘಟ್ಟಪ್ರದೇಶಗಳು ಅತಿ ಸೂಕ್ಷ್ಮ ಪರಿಸರ ಹೊಂದಿದ್ದು, ಇಲ್ಲಿನ ಭೌಗೋಳಿಕತೆಗೆ ಮನುಷ್ಯನಿಂದ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಮನುಷ್ಯನ ಕ್ರಿಯಾ ಚಟುವಟಿಕೆಗಳಿಗೆ, ಅಭಿವೃದ್ಧಿಗೆ ತೊಂದರೆಯಾಗದಂತೆ ಪ್ರಕೃತಿಯನ್ನು ಉಳಿಸಬೇಕು ಎಂದರು.
ಕರಾವಳಿಗೆ ಅಪ್ಪಳಿಸಲಿದ್ಯಾ ಸೈಕ್ಲೋನ್ ಕ್ಯಾರ್...?
ಅರಣ್ಯ ಮಾಫಿಯಾದ ಬಗ್ಗೆ ಗಮನ ಹರಿಸುತ್ತೇನೆ ಎಂದು ಆಶ್ವಾಸನೆ ನೀಡಿದರು. ತೋಟದಲ್ಲಿರುವ ಮರಳನ್ನು ತೆರವುಗೊಳಿಸಲು ಕೃಷಿಕರಿಗೆ ಈಗಾಗಲೇ ಅನುಮತಿಯನ್ನು ಸಂಬಂಧಪಟ್ಟಇಲಾಖೆ ನೀಡಿದೆ. ಇನ್ನು ನದಿಗೆ ತಡೆಗೋಡೆಯನ್ನು ಕಟ್ಟುವ ಸಂದರ್ಭದಲ್ಲಿ ನದಿಯಲ್ಲಿರುವ ಹೂಳನ್ನು ತೆಗೆದು ಬದಿಗೆ ಹಾಕಲಾಗುವುದು. ಯಾವುದಕ್ಕೂ ಮಳೆ ಸಂಪೂರ್ಣವಾಗಿ ನಿಲ್ಲಬೇಕಾಗುತ್ತದೆ ಎಂದು ಶಾಸಕ ಹರೀಶ ಪೂಂಜ ವಿವರಿಸಿದ್ದಾರೆ.
ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷೆ ಶೈಲಜಾ, ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಎಸ್.ಪಿ. ಲಕ್ಷ್ಮೀಪ್ರಸಾದ್, ಸರ್ಕಲ್ ಸಂದೇಶ್ ಪಿ.ಜಿ., ತಾ.ಪಂ. ಸದಸ್ಯರಾದ ಶಶಿಧರ ಎಂ. ಕಲ್ಮಂಜ, ಕೊರಗಪ್ಪ ಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಕಾರ್ಯದರ್ಶಿ ಸೀತಾರಾಮ ಬಿ.ಎಸ್., ಪಿಡಿಒ ಪ್ರಕಾಶ್ ಶೆಟ್ಟಿನೊಚ್ಚ, ತಹಸೀಲ್ದಾರ ಗಣಪತಿ ಶಾಸ್ತ್ರೀ, ಕಂದಾಯ ನಿರೀಕ್ಷಕ ರವಿ ಕುಮಾರ್, ಧರ್ಮಸ್ಥಳ ಠಾಣಾಧಿಕಾರಿ ಅವಿನಾಶ ಗೌಡ, ಸ್ಥಳೀಯರಾದ ಕೃಷ್ಣ ಭಟ್, ಕೃಷ್ಣ ಕುಮಾರ್, ಉಮೇಶ್ ಚಾರ್ಮಾಡಿ, ರವಿ ಕುಮಾರ್, ಮುಂಡಾಜೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಎನ್.ಎಸ್.ಗೋಖಲೆ, ನಾರಾಯಣ ಫಡ್ಕೆ ಮತ್ತಿತರರು ಇದ್ದರು.
ಮಾದಕವಸ್ತು ನಿಯಂತ್ರಣಕ್ಕೆ ಪೊಲೀಸ್ ವರಿಷ್ಠರಿಗೆ ಸೂಚನೆ
ಹೊರ ರಾಜ್ಯದಿಂದ ಬರುತ್ತಿರುವ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮಕ್ಕೆ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪೋಲಿಸರ ನೈಟ್‌ಬೀಟ್‌ನ್ನು ಜನಸ್ನೇಹಿಯಾಗಿ ಮಾಡುವಲ್ಲಿ ನೀಲ ನಕಾಶೆಯನ್ನು ವರಿಷ್ಠಾಧಿಕಾರಿಗಳು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ. ದೇಶವಿರೋಧಿ, ರಾಜ್ಯ ವಿರೋಧಿಗಳ ಹುಟ್ಟಡಗಿಸಲು ಸಕಲ ಪ್ರಯತ್ನಗಳನ್ನು ಗೃಹ ಇಲಾಖೆ ಮಾಡಲಿದೆ ಎಂದಿದ್ದಾರೆ.