ಮಂಗಳೂರಿನಲ್ಲಿ ಬಿರುಸಿನ ಮಳೆ ಸುರಿಯುತ್ತಿದ್ದು, ಸೋಮೇಶ್ವರ ಉಚ್ಚಿಲ ಮತ್ತು ಉಳ್ಳಾಲದಲ್ಲಿ ಸಮುದ್ರದ ಅಲೆಗಳು ಬಿರುಸುಗೊಂಡಿದೆ. ತೀರ ಪ್ರದೇಶದ ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಇದ್ದು, ಎಚ್ಚರಿಕೆಯಲ್ಲಿರುವಂತೆ ಸೂಚಿಸಲಾಗಿದೆ.
ಮಂಗಳೂರು(ಅ.25): ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸೋಮೇಶ್ವರ ಉಚ್ಚಿಲ ಮತ್ತು ಉಳ್ಳಾಲದಲ್ಲಿ ಸಮುದ್ರದ ಅಲೆಗಳು ಬಿರುಸುಗೊಂಡಿದ್ದು, ಹಲವು ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದೆ. ಕಲ್ಲಾಪು ಬಳಿ ತೋಡು ಮತ್ತು ತಡಗೋಡೆ ಕುಸಿದು ರಸ್ತೆಗೆ ಹಾನಿಯಾಗಿದೆ.
ಕಳೆದೆರಡು ದಿನಗಳಿಂದ ಮಳೆ ಪ್ರಮಾಣ ಹೆಚ್ಚಾಗಿದ್ದು ಗುರುವಾರ ಬೆಳಗ್ಗಿನಿಂದ ಸಮುದ್ರದ ಬಿರುಸಾದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು. ಉಳ್ಳಾಲದ ಕೈಕೋ, ಕಿಲೇರಿಯಾನಗರ, ಸೀಗ್ರೌಂಡ್ ಬಳಿ ತಾತ್ಕಾಲಿಕ ತಡೆಗೋಡೆಗಳು ಸಮುದ್ರಪಾಲಾದರೆ, ಸೋಮೇಶ್ವರ ಉಚ್ಚಿಲ ಫೆರಿಬೈಲ್ ಬಳಿ ಮೋಹನ್ ಮತ್ತು ಅಶೋಕ್ ಅವರ ಮನೆಗಳಿಗೆ ಅಪ್ಪಳಿಸಿದರೆ, ಕಾಂತಪ್ಪ , ಅಬ್ಬಾಸ್, ಅಜೀಝ್ ಸೇರಿದಂತೆ ಸುಮಾರು 15 ಮನೆಗಳ ಅಂಗಳಕ್ಕೆ ಸಮುದ್ರದ ಉಪ್ಪು ನೀರು ನುಗ್ಗಿದ್ದು, ಬಳಿಕ ಸೋಮೇಶ್ವರ ಪುರಸಭೆ ಮತ್ತು, ಸ್ಥಳೀಯರು ಸೇರಿ ನೀರನ್ನು ಜೆಸಿಬಿ ಮೂಲಕ ನೀರನ್ನು ತೆರವುಗೊಳಿಸಿದರು. ಬಟ್ಟಪ್ಪಾಡಿ ಬಳಿ ತೆಂಗಿನ ಮರಗಳು ಸಮುದ್ರ ಪಾಲಾಗಿದೆ.
ಕರಾವಳಿಗೆ ಅಪ್ಪಳಿಸಲಿದ್ಯಾ ಸೈಕ್ಲೋನ್ ಕ್ಯಾರ್...?
ಸ್ಥಳಾಂತರಕ್ಕೆ ಸೂಚನೆ: ಅಪಾಯದಲ್ಲಿರುವ ಮನೆಗಳ ಕುಟುಂಬದ ಸದಸ್ಯರನ್ನು ಸ್ಥಳಾಂತರಕ್ಕೆ ಶಾಸಕ ಯು.ಟಿ. ಖಾದರ್ ಸೂಚಿಸಿದ್ದಾರೆ. ಎರಡು ದಿನಗಳಲ್ಲಿ ಭಾರಿ ಮಳೆಯಾಗುವ ಸೂಚನೆಯ ಹಿನ್ನಲೆಯಲ್ಲಿ ಮನೆಗಳಲ್ಲಿದ್ದವರನ್ನು ತೆರವು ಮಾಡುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
32 ಕೋಟಿ ಮಂಜೂರು:
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೋಮೇಶ್ವರ ಉಚ್ಚಿಲ ಕಡಲ್ಕೊರೆತ ಸ್ಥಳಕ್ಕೆ ಭೇಟಿ ನೀಡಿ, ಈಗಾಗಲೇ ಸೋಮೇಶ್ವರ, ಉಚ್ಚಿಲ ಮತ್ತು ಉಳ್ಳಾಲದ ಕಡಲ್ಕೊರೆತ ಪ್ರದೇಶಗಳಿಗೆ ತುರ್ತು ನಿಧಿಯಡಿ 32 ಕೋಟಿ ರು. ಮಂಜೂರು ಮಾಡಿದ್ದು , ತುರ್ತು ಕ್ರಮಕ್ಕಾಗಿ ಬಂದರು ಇಲಾಖೆ ಮತ್ತು ಜಿಲ್ಲಾಧಿಕಾರಿ ಅವರೊಂದಿಗೆ ಸಭೆ ಕರೆಯಲಾಗಿದೆ ಎಂದರು.
ಈಗಾಗಲೇ ಸೋಮೇಶ್ವರ ಉಚ್ಚಿಲದಲ್ಲಿ ಶಾಶ್ವತ ಕಾಮಗಾರಿ ಆರಂಭಗೊಂಡಿದ್ದು ಮಳೆ ಮುಗಿದ ಕೂಡಲೆ ಕಾಮಗಾರಿ ಅಭಿವೃದ್ಧಿ ಕಾರ್ಯ ಮುಂದುವರಿಯಲಿದೆ ಎಂದರು.
ಶಾಸಕ ಖಾದರ್ ಭೇಟಿ:
ಶಾಸಕ ಯು.ಟಿ.ಖಾದರ್ ಭೇಟಿ ನೀಡಿ, ಸೋಮೇಶ್ವರ ಉಚ್ಚಿಲ ಪ್ರದೇಶಕ್ಕೆ ಈಗಾಗಲೇ 124 ಕೋಟಿ ರು. ವೆಚ್ಚದಲ್ಲಿ ಕಡಲ್ಕೊರೆತ ಕಾಮಗಾರಿ ನಡೆಯುತ್ತಿದ್ದು, ಆರಂಭಿಕ ಕಾಮಗಾರಿಯಲ್ಲಿ ಲೋಪದೋಷಗಳಿದ್ದು ಇದರ ಕುರಿತು ತನಿಖೆಗೆ ಒತ್ತಾಯಿಸಲಾಗುವುದು ಎಂದರು.
ರಸ್ತೆ ಕುಸಿತ:
ಕಲ್ಲಾಪು ಪ್ರದೇಶದಲ್ಲಿ ರಸ್ತೆ ಕುಸಿತವಾಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಮರಳು ಮಾಫಿಯದಿಂದ ತೊಂದರೆಯಾಗುತ್ತಿದ್ದು ಮರಳು ಲಾರಿಗಳ ನಿರಂತರ ಸಂಚಾರದಿಂದ ರಸ್ತೆ ಕುಸಿದಿದ್ದು, ಮರಳು ಲಾರಿ ಈ ಪ್ರದೇಶದಲ್ಲಿ ಸಂಚಾರ ನಡೆಸದಂತೆ ನಿರ್ಬಂಧ ಹೇರಬೇಕು ಎಂದು ಜಿಲ್ಲಾಕಾರಿಗೆ ಮನವಿ ಮಾಡಿದ್ದಾರೆ. ಶಾಸಕ ಯು.ಟಿ.ಖಾದರ್ ಸ್ಥಳಕ್ಕೆ ಭೇಟಿ ನೀಡಿದರು.