
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಜಮಲಾಬಾದ್ ಕೋಟೆ ಅಥವಾ ನರಸಿಂಹ ಗಡ (ಗಡಾಯಿಕಲ್ಲು) 17ರಿಂದ ಪ್ರವಾಸಿಗರ ವೀಕ್ಷಣೆ ಮತ್ತು ಚಾರಣಕ್ಕೆ ಮುಕ್ತವಾಗಲಿದೆ. ಮಳೆಗಾಲದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಪ್ರವೇಶ ನಿರ್ಬಂಧ ವನ್ನು ಬೆಳ್ತಂಗಡಿ ವನ್ಯಜೀವಿ ವಿಭಾಗ ತೆರವುಗೊಳಿಸಿದೆ.
ಗಡಾಯಿಕಲ್ಲು ಪ್ರದೇಶದಲ್ಲಿ ಮಳೆಗಾಲದ ಸಂದರ್ಭ ಬಂಡೆ ಹಾಗೂ ಚಾರಣದ ಹಾದಿಗಳು ಜಾರುವ ಸ್ಥಿತಿ ಇರುವುದರಿಂದ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪ್ರವೇಶ ನಿರ್ಬಂಧಿಸಲಾಗಿತ್ತು. ಬೇಸಿಗೆ ಅವಧಿಯಲ್ಲಿ ಕಾಡಿಚ್ಚು ಹಾಗೂ ಬೆಂಕಿ ಅವಘಡಗಳ ಸಾಧ್ಯತೆ, ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ಗಣತಿ ಸೇರಿದಂತೆ ವಿವಿಧ ಕಾರಣ ಗಳಿಂದಲೂ ಪ್ರವಾಸಿಗರ ಪ್ರವೇಶವನ್ನು ಹಂತಹಂತವಾಗಿ ನಿರ್ಬಂಧಿಸಲಾಗಿತ್ತು.
ಈ ಹಿಂದೆ ಜೂ.1ರಿಂದ ಗಡಾಯಿಕಲ್ಲು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗಿತ್ತು. ಪ್ರವೇಶ ಆರಂಭವಾದ ಒಂದೇ ವಾರದಲ್ಲಿ ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದರು. ಆದರೆ ಜೂ.14ರಿಂದ ಮತ್ತೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಬಳಿಕ ಮಳೆ ಇಲ್ಲದ ಕಾರಣ ಮತ್ತೆ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಜು.8ರಿಂದ ಚಾರಣಕ್ಕೆ ಮುಂದುವರಿಸಲಾಗಿತ್ತು. ಮಧ್ಯೆ ಮತ್ತೆ ಮಳೆ ಸುರಿದ ಹಿನ್ನಲೆಯಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಈಗ ಮಳೆ ಕಡಿಮೆಯಾಗಿದ್ದು, ಚಾರಣದ ಹಾದಿ ಹಾಗೂ ಸುರಕ್ಷತಾ ಅಂಶಗಳನ್ನು ಪರಿಶೀಲಿಸಿದ ಬಳಿಕ 17ರಿಂದ ಮತ್ತೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ವನ್ಯಜೀವಿ ವಿಭಾಗ ತಿಳಿಸಿದೆ.
ಗಡಾಯಿಕಲ್ಲು ಕರ್ನಾಟಕದ ಅತ್ಯಂತ ವಿಶಿಷ್ಟ ಐತಿಹಾಸಿಕ ಹಾಗೂ ನೈಸರ್ಗಿಕ ತಾಣಗಳಲ್ಲಿ ಒಂದಾಗಿದೆ. ಸಮುದ್ರಮಟ್ಟದಿಂದ ಸುಮಾರು 3,600 ಅಡಿ ಎತ್ತರದಲ್ಲಿರುವ ಈ ಕೋಟೆ ತನ್ನ ಐತಿಹಾಸಿಕ ಹಿನ್ನೆಲೆ, ನೈಸರ್ಗಿಕ ಸೌಂದರ್ಯ, ವಿಶಿಷ್ಟ ಭೌಗೋಳಿಕ ವೈಶಿಷ್ಟ್ಯಗಳಿಂದ ಅಪಾರ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೊಂದಿದೆ.ಕೋಟೆಯ ಶಿಖರ ತಲುಪಲು ಸುಮಾರು 2 ಸಾವಿರ ಕಲ್ಲಿನ ಮೆಟ್ಟಿಲುಗಳನ್ನು ಏರಬೇಕಾಗಿರುವುದರಿಂದ ಹಿರಿಯ ನಾಗರಿಕರು, ಮಕ್ಕಳು ಹಾಗೂ ದೈಹಿಕವಾಗಿ ಮೆಟ್ಟಿಲುಗಳನ್ನು ಏರಲು ಸಾಧ್ಯವಾಗದ ಅನೇಕ ಪ್ರವಾಸಿಗರಿಗೆ ಈ ಐತಿಹಾಸಿಕ ತಾಣವನ್ನು ವೀಕ್ಷಿಸುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಈ ಐತಿಹಾಸಿಕ ತಾಣವನ್ನು ರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿ ಘೋಷಿಸುವುದರೊಂದಿಗೆ, ಸಾರ್ವಜನಿಕರಿಗೆ ಸುಲಭವಾಗಿ ತಲುಪುವಂತೆ ರೋಪ್‌ವೇ ಯೋಜನೆ ಅನುಷ್ಢಾನಗೊಳಿಸುವುದು ಅತ್ಯಂತ ಅವಶ್ಯಕವಾಗಿದೆ ಎಂಬ ಒತ್ತಾಯವೂ ಸರ್ಕಾರದ ಮುಂದಿದೆ.
ಪ್ರಸ್ತುತ ಮಳೆ ಇಲ್ಲದಿರುವ ಕಾರಣ ತಾಲೂಕಿನ ಕಡಮಗುಂಡಿ, ಎರ್ಮಾಯಿ ಮೊದಲಾದ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಜಲಪಾತಗಳು ಸಾಮಾನ್ಯ ಸ್ಥಿತಿಯಲ್ಲಿ ಧಮ್ಮಿಕ್ಕುತ್ತಿವೆ. ಚಾರ್ಮಾಡಿ ಘಾಟಿಯ ತಾತ್ಕಾಲಿಕ ಜಲಪಾತಗಳಲ್ಲಿ ನೀರಿನ ಧುಮ್ಮಿಕ್ಕುವಿಕೆ ದುರ್ಬಲಗೊಂಡಿದೆ.
ಪ್ರವಾಸಿಗರ ಸಂಖ್ಯೆ ನಿಯಂತ್ರಿಸುವ ಉದ್ದೇಶದಿಂದ ದಿನವೊಂದಕ್ಕೆ ಗರಿಷ್ಠ 500 ಮಂದಿಗೆ ಮಾತ್ರ ಗಡಾಯಿಕಲ್ಲು ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರು ಮುಂಗಡವಾಗಿ ಪೂರ್ವ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ವನ್ಯಜೀವಿ ಇಲಾಖೆ ಸ್ಪಷ್ಟಪಡಿಸಿದೆ.