
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಗುರುವಾರ ರಾತ್ರಿ ಮಂಗಳೂರಿನಲ್ಲಿ ಡಿನ್ನರ್ ಸಭೆ ನಡೆಯಿತು. ಆಹ್ವಾನವಿದ್ದರೂ ಬಿಜೆಪಿ ಶಾಸಕರು, ಸಂಸದರು ಸಭೆಗೆ ಗೈರಾದರು. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಶಾಸಕರು, ಸಂಸದರಿಗೆ ಡಿನ್ನರ್ ಕೂಟಕ್ಕೆ ಆಹ್ವಾನ ನೀಡಲಾಗಿತ್ತು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಸಂಪುಟದ ಸಚಿವರು ಸೇರಿದಂತೆ ಕಾಂಗ್ರೆಸ್ ಶಾಸಕರು, ಪಕ್ಷದ ನಾಯಕರು, ಅಧಿಕಾರಿಗಳು ಡಿನ್ನರ್ ಸಭೆಯಲ್ಲಿ ಭಾಗವಹಿಸಿದ್ದರು. ಡಿನ್ನರ್‌ನಲ್ಲಿ ಸಸ್ಯಾಹಾರ ಮೆನು ಮಾತ್ರವಲ್ಲದೆ ಕರಾವಳಿಯ ಸಾಂಪ್ರದಾಯಿಕ ಕೋರಿ ರೊಟ್ಟಿ, ನೀರ್‌ದೋಸೆ ಸೇರಿದಂತೆ ವಿವಿಧ ಮೀನಿನ ಖಾದ್ಯಗಳಿದ್ದವು. ಕರಾವಳಿಯ ಜಾನಪದ ಹಾಗೂ ಸಾಂಸ್ಕೃತಿಕ ವೈಭವ ಸಾರುವ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ಸಭೆ ವೇಳೆ ಡಿ.ಕೆ. ಶಿವಕುಮಾರ್ ಅವರು ಸಚಿವ ಯು.ಟಿ. ಖಾದರ್, ಕಾಂಗ್ರೆಸ್ ಶಾಸಕರು ಹಾಗೂ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ದಿನವಿಡೀ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿರುವುದರಿಂದ ಡಿನ್ನರ್ ಕೂಟಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂಬ ಸುಳಿವನ್ನು ಶಾಸಕ ಭರತ್ ಶೆಟ್ಟಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮೊದಲೇ ನೀಡಿದ್ದರು. ಕರಾವಳಿ ಬಿಜೆಪಿ ನಿಯೋಗ ಈಗಾಗಲೇ ಬೆಂಗಳೂರಿನಲ್ಲಿ ಸಿಎಂ ಅವರನ್ನು ಭೇಟಿಯಾಗಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಬೇಡಿಕೆಗಳ ಮನವಿ ಸಲ್ಲಿಸಿತ್ತು. ಅಭಿವೃದ್ಧಿ ವಿಚಾರವಾಗಿ ಸಭೆ ಕರೆದರೆ ಎಲ್ಲಿಗೂ ಬರುತ್ತೇವೆ. ನಮ್ಮ ಮನವಿಗಳಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇಡೀ ಸಚಿವ ಸಂಪುಟ ಮಂಗಳೂರಿಗೆ ಆಗಮಿಸುತ್ತಿರುವುದನ್ನು ಸ್ವಾಗತಿಸುತ್ತೇವೆ ಎಂದು ಬಿಜೆಪಿ ಶಾಸಕರು ತಿಳಿಸಿದ್ದರು.
ವಿಮಾನ ನಿಲ್ದಾಣದಿಂದ ನೇರವಾಗಿ ಕದ್ರಿ ಸರ್ಕ್ಯೂಟ್ ಹೌಸ್‌ಗೆ ಆಗಮಿಸಿದ ಸಿಎಂ ಡಿ.ಕೆ. ಶಿವಕುಮಾರ್ ಅವರು ಸಚಿವ ಯು.ಟಿ. ಖಾದರ್, ಕಾಂಗ್ರೆಸ್ ಶಾಸಕರು ಹಾಗೂ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿ ಅಹವಾಲು ಸ್ವೀಕರಿಸಿದರು.
ನಗರದ ಪಡೀಲಿನಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಡೆಯಲಿದ್ದು, ಇದಕ್ಕಾಗಿ ಸರ್ವಸಿದ್ಧತೆ ಕೈಗೊಳ್ಳಲಾಗಿದೆ. ಬೃಹತ್ ಜಿಲ್ಲಾಧಿಕಾರಿ ಸಂಕೀರ್ಣದ ಎರಡನೇ ಮಹಡಿಯಲ್ಲಿ ಸಚಿವ ಸಂಪುಟ ಸಭೆಗಾಗಿ ಹವಾನಿಯಂತ್ರಿತ ಪ್ರತ್ಯೇಕ ಮಿನಿ ಹಾಲ್ ಸಿದ್ಧಪಡಿಸಲಾಗಿದೆ.
ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರು ಕುಳಿತುಕೊಳ್ಳಲು ಅನುವಾಗುವಂತೆ ಆಸನಗಳು, ಟೇಬಲ್ ಮತ್ತು ಸಂಪೂರ್ಣ ಹವಾನಿಯಂತ್ರಿತ ಹಾಲ್ ಸಿದ್ಧಗೊಳಿಸಲಾಗುತ್ತಿದೆ. ಸುಮಾರು ಮೂರು ಗಂಟೆ ಅವಧಿಯಲ್ಲಿ ಸಂಪುಟ ದರ್ಜೆಯ ಸಚಿವರು ಮತ್ತು ಮುಖ್ಯಮಂತ್ರಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಬೆಳವಣಿಗೆ ವಿಚಾರದಲ್ಲಿ ಚರ್ಚೆ ನಡೆಸಲಿದ್ದಾರೆ. ಮಿನಿಟ್ ಸಿದ್ಧಪಡಿಸಲು ಬೆಂಗಳೂರಿನಿಂದ ಬಂದಿರುವ ಕೆಲಸಗಾರರು ಅಂತಿಮ ಹಂತದ ಸಿದ್ಧತೆಯಲ್ಲಿದ್ದಾರೆ.
ಮೊದಲ ಬಾರಿಗೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಪುಟ ಸಭೆ ನಡೆಯುತ್ತಿದ್ದು, ಇಡೀ ರಾಜ್ಯ ಸರ್ಕಾರವೇ ಮಂಗಳೂರಿಗೆ ಆಗಮಿಸುತ್ತಿದೆ. ಬಹುತೇಕ ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಬೇರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಭಾಗವಹಿಸುತ್ತಿಲ್ಲ ಎನ್ನಲಾಗಿದೆ. ಸಂಪುಟ ಸಭೆ ನಡೆಯುವ ಮಿನಿ ಹಾಲ್ ಜಾಗಕ್ಕೆ ಉಸ್ತುವಾರಿ ಸಚಿವ ಯು.ಟಿ. ಖಾದರ್ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಇದೇ ವೇಳೆ ಸಂಪುಟ ಸಭೆ ನಡೆಯುವ ಜಿಲ್ಲಾಧಿಕಾರಿ ಸಂಕೀರ್ಣಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.