ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಿಗೆ ಮತ್ತೆ ಮಲಯಾಳಂ ಶಿಕ್ಷಕರು

By Kannadaprabha News  |  First Published Oct 11, 2019, 9:23 AM IST

ಮತ್ತೆ ಕಾಸರಗೋಡಿನ ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಈ ಸಂಬಂಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. 


ಮಂಗಳೂರು [ಅ.11]: ಕನ್ನಡ ಭಾಷೆ ಕಲಿಯಲು ಶಿಕ್ಷಕರನ್ನು ಮೈಸೂರಿಗೆ ಕಳುಹಿಸಿ ಕನ್ನಡಿಗರಿಗೆ ತಲೆಬಾಗಿದಂತೆ ನಟಿಸಿದ ಕೇರಳ ಸರ್ಕಾರ, ಇದೀಗ ಕನ್ನಡಿಗರ ವಿರೋಧ, ಕೇರಳ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಮತ್ತೆ ಕಾಸರಗೋಡಿನ ಗಡಿನಾಡಿನ ಕನ್ನಡ ಶಾಲೆಗಳಿಗೆ ಮಲಯಾಳಂ ಶಿಕ್ಷಕರ ನೇಮಕವನ್ನು ಮುಂದುವರಿಸಿದೆ. ಇದನ್ನು ವಿರೋಧಿಸಿ ಬೇಕಲ ಸರ್ಕಾರಿ ಶಾಲೆಯ ಕನ್ನಡಿಗ ವಿದ್ಯಾರ್ಥಿಗಳು ಗುರುವಾರ ತರಗತಿ ಬಹಿಷ್ಕರಿಸಿ ದಿನಪೂರ್ತಿ ಪ್ರತಿಭಟನೆ ನಡೆಸಿದರು.

ಈ ಮಧ್ಯೆ ಗಡಿನಾಡ ಕನ್ನಡಿಗರ ಹಿತ ಕಾಯಬೇಕಾದ ಕರ್ನಾಟಕ ಸರ್ಕಾರ ಮಾತ್ರ ಈ ವಿಚಾರದಲ್ಲಿ ಕಿವುಡುತನ ಪ್ರದರ್ಶಿಸುತ್ತಿರುವುದು ಅಲ್ಲಿನ ಕನ್ನಡಪರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ.

Tap to resize

Latest Videos

ಕಳೆದ ವರ್ಷ ಆಗಸ್ಟ್‌ನಲ್ಲಿ ಕಾಸರಗೋಡಿನ ಕನ್ನಡ ಮಾಧ್ಯಮ ಹೈಸ್ಕೂಲ್‌ಗಳಿಗೆ ಮಲಯಾಳಿ ಭಾಷೆಯ ಶಿಕ್ಷಕರನ್ನು ಕೇರಳ ಸರ್ಕಾರ ನೇಮಕಗೊಳಿಸಿತ್ತು. ಕೇರಳ ಲೋಕಸೇವಾ ಆಯೋಗದಲ್ಲಿ ಆಯ್ಕೆಯಾದ 36 ಮಂದಿ ಶಿಕ್ಷಕರ ಪೈಕಿ ಮೂವರು ಶಿಕ್ಷಕರಿಗೆ ಶಿಕ್ಷಣ ಇಲಾಖೆ ನೇಮಕಾತಿ ಪತ್ರವನ್ನು ನೀಡಿತ್ತು. ಇದನ್ನು ವಿರೋಧಿಸಿ ಕಾಸರಗೋಡಿನ ಮಂಗಲ್ಪಾಡಿ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ನಾಗರಿಕರು ಕೂಡ ಹೋರಾಟ ನಡೆಸಿದ್ದರು. 

ಇದರ ಫಲವಾಗಿ ಮಲಯಾಳಿ ಶಿಕ್ಷಕರು ರಜೆ ಮೇಲೆ ತೆರಳಿದ್ದರು. ಬಳಿಕ ಈ ಶಿಕ್ಷಕರನ್ನು ತಿರುವನಂತಪುರಂಗೆ ವರ್ಗಾವಣೆ ಮಾಡಲಾಗಿತ್ತು. ಈ ಪ್ರತಿಭಟನೆ ಬಳಿಕ ಇನ್ನಿಬ್ಬರು ಶಿಕ್ಷಕರು ನೇಮಕಗೊಂಡರೂ ಕರ್ತವ್ಯಕೆ ಹಾಜರಾಗಿರಲಿಲ್ಲ. ಆ ಬಳಿಕ ಅಕ್ಟೋಬರ್‌ನಲ್ಲಿ ಮತ್ತೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಮತ್ತು ಪೈವಳಿಕೆ ಎರಡು ಶಾಲೆಗಳಿಗೆ ಮಲಯಾಳಂ ಶಿಕ್ಷಕರ ನೇಮಕ ಮಾಡಲಾಗಿತ್ತು. ಆಗಲೂ ಪ್ರತಿಭಟನೆ ನಡೆದ ಪರಿಣಾಮ ಇಬ್ಬರು ಶಿಕ್ಷಕರನ್ನು ಕೇರಳ ಸರ್ಕಾರದ ಸೂಚನೆ ಮೇರೆಗೆ ಶಿಕ್ಷಣ ಇಲಾಖೆ ಮೈಸೂರಿನ ಕೇಂದ್ರೀಯ ಭಾಷಾ ಪ್ರತಿಷ್ಠಾನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಕನ್ನಡ ಕಲಿತುಕೊಂಡು ಬರುವಂತೆ ಒಂದು ವರ್ಷ ವೇತನ ಸಹಿತ ರಜೆಯನ್ನು ಮಂಜೂರು ಮಾಡಿತ್ತು.

ಒಬ್ಬರು ಮಲಯಾಳಿ ಶಿಕ್ಷಕರ ಆಗಮನ:  ಇವೆಲ್ಲದರ ಮಧ್ಯೆ ಈಗ ಅಕ್ಟೋಬರ್‌ನಲ್ಲಿ ಬಾಕಿಯುಳಿದ ಶಿಕ್ಷಕರಿಗೆ ನೇಮಕಾತಿ ಆದೇಶವನ್ನು ಶಿಕ್ಷಣ ಇಲಾಖೆ ನೀಡಲು ಹೊರಟಿದೆ. ಹೊಸದುರ್ಗ ತಾಲೂಕಿನ ಬೇಕಲ ಫಿಶರೀಸ್‌ ಹೈಯರ್‌ ಸೆಕೆಂಡರಿ ಸ್ಕೂಲ್‌ ಹಾಗೂ ಇದೇ ತಾಲೂಕಿನ ಉದುಮ ಹೈಯರ್‌ ಸೆಕೆಂಡರಿ ಸ್ಕೂಲ್‌ಗೆ ಗಣಿತ ಶಿಕ್ಷಕರನ್ನು ನೇಮಕಗೊಳಿಸಿ ಆದೇಶ ನೀಡಿದೆ. ಈ ಶಿಕ್ಷಕರಿಗೆ ಅ.14ರೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ. ಈ ಇಬ್ಬರು ಶಿಕ್ಷಕರು ಕೂಡ ಮಲಯಾಳಿ ಭಾಷೆ ಮಾತ್ರ ಗೊತ್ತಿರುವವರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇವರಲ್ಲಿ ಬೇಕಲ್ ಶಾಲೆಗೆ ನೇಮಕಗೊಂಡ ಶಿಕ್ಷಕಿ ತ್ರಿವೆಂಡ್ರಂ ಮೂಲದವರು. ಈಕೆಯ ಹೆಸರು ಅನ್‌ವಿದಿ ದಾಸ್‌. ಈಕೆ ಗುರುವಾರ ಬೇಕಲ ಶಾಲೆಗೆ ಆಗಮಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರು ಗಣಿತ ತರಗತಿಗೆ ಹಾಜರಾಗುವ ವೇಳೆ ಕನ್ನಡಿಗ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಗೆ ಪೊಷಕರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿ ಹಾಗೂ ಪೋಷಕರು ಸಂಜೆ ವರೆಗೆ ಪ್ರತಿಭಟನೆ ನಡೆಸಿದರು. ಕನ್ನಡ ಮಾಧ್ಯಮ ತರಗತಿಗೆ ಕನ್ನಡ ಬಲ್ಲ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಉದುಮ ಶಾಲೆಗೆ ನೇಮಕಗೊಂಡ ಶಿಕ್ಷಕರು ಶುಕ್ರವಾರ ಅಥವಾ ಸೋಮವಾರ ಕರ್ತವ್ಯಕ್ಕೆ ಹಾಜರಾಗುವ ನಿರೀಕ್ಷೆ ಇದ್ದು, ಅಲ್ಲಿಯೂ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸುವುದಾಗಿ ಹೇಳುತ್ತಿದ್ದಾರೆ.

click me!