ಅಂಚೆ ATM ಕಾರ್ಡ್‌ ಕೊರತೆ, ಕಾರ್ಡ್ ಇಡೀ ದೇಶಕ್ಕೆ ಬೆಂಗಳೂರಿಂದಲೇ ಪೂರೈಕೆ..!

By Kannadaprabha NewsFirst Published Oct 27, 2019, 10:54 AM IST
Highlights

ದೇಶಾದ್ಯಂತ ಎಟಿಎಂ ಕಾರ್ಡ್‌ ಇಲ್ಲದೆ ಕಂಗೆಟ್ಟಿರುವ ಭಾರತೀಯ ಅಂಚೆ ಇಲಾಖೆಗೆ ಕೊನೆಗೂ ಸ್ವಲ್ಪ ಪ್ರಮಾಣದಲ್ಲಿ ಎಟಿಎಂ ಕಾರ್ಡ್‌ಗಳ ಪೂರೈಕೆ ಆರಂಭವಾಗಿದೆ. ಆದರೆ ಉಪ ಅಂಚೆ ಕಚೇರಿಗಳಿಗೆ ಎಟಿಎಂ ಕಾರ್ಡ್‌ ತಲುಪಲು ಇನ್ನೂ ಎರಡು ವರ್ಷ ಕಾಯಬೇಕು. ವಿಶೇಷ ಎಂದರೆ ಇಡೀ ದೇಶಕ್ಕೇ ಬೆಂಗಳೂರಿನಿಂದಲೇ ಎಟಿಎಂ ಕಾರ್ಡ್ ಪೋರೈಕೆಯಾಗಬೇಕು.

ಮಂಗಳೂರು(ಅ.27): ದೇಶಾದ್ಯಂತ ಎಟಿಎಂ ಕಾರ್ಡ್‌ ಇಲ್ಲದೆ ಕಂಗೆಟ್ಟಿರುವ ಭಾರತೀಯ ಅಂಚೆ ಇಲಾಖೆಗೆ ಕೊನೆಗೂ ಸ್ವಲ್ಪ ಪ್ರಮಾಣದಲ್ಲಿ ಎಟಿಎಂ ಕಾರ್ಡ್‌ಗಳ ಪೂರೈಕೆ ಆರಂಭವಾಗಿದೆ. ಆದರೆ ಉಪ ಅಂಚೆ ಕಚೇರಿಗಳಿಗೆ ಎಟಿಎಂ ಕಾರ್ಡ್‌ ತಲುಪಲು ಇನ್ನೂ ಎರಡು ವರ್ಷ ಕಾಯಬೇಕು.

ಎಟಿಎಂ ಕಾರ್ಡ್‌ಗಳಲ್ಲಿ ಸುರಕ್ಷತೆ ತರುವ ದೃಷ್ಟಿಯಿಂದ ಚಿಪ್‌ ಅಳವಡಿಸುವಂತೆ ಭಾರತೀಯ ರಿಸವ್‌ರ್‍ ಬ್ಯಾಂಕ್‌ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಎಟಿಎಂ ಕಾರ್ಡ್‌ನ್ನು ಬದಲಿಸಲು ಹೊರಟ ಭಾರತೀಯ ಅಂಚೆ ಕಚೇರಿ, ಹೊಸ ಕಾರ್ಡ್‌ ಹೊರತರಲು ಬಹಳಷ್ಟುಸಮಯ ತೆಗೆದುಕೊಂಡಿತ್ತು. ಇದರಿಂದಾಗಿ ಕಳೆದ ಒಂದು ವರ್ಷದಿಂದ ಅಂಚೆ ಇಲಾಖೆಯ ಹೊಸ ಎಟಿಎಂ ಕಾರ್ಡ್‌ಗೆ ಬೇಡಿಕೆ ಸಲ್ಲಿಸಿದ ಗ್ರಾಹಕರು ಕಾಯುವ ಪರಿಸ್ಥಿತಿ ತಲೆದೋರಿತ್ತು.

ಮಂಗಳೂರು: ಎರಡು ಬೋಟ್‌ಗಳ 18 ಮಂದಿ ರಕ್ಷಣೆ

ಈಗಾಗಲೇ ಅಂಚೆ ಇಲಾಖೆಯ ಎಟಿಎಂ ಕಾರ್ಡ್‌ ಹೊಂದಿರುವವರು ಹಳೆ ಕಾರ್ಡ್‌ ಬಳಸಲಾಗದೆ, ಹೊಸ ಕಾರ್ಡ್‌ ಸಿಗದೆ ಪರದಾಟ ನಡೆಸುವಂತಾಗಿತ್ತು. ಈ ಬಗ್ಗೆ ಹಲವು ಸಲ ಅಂಚೆ ಕಚೇರಿಗಳಿಗೆ ಎಡತಾಕಿದರೂ ಪ್ರಯೋಜನವಾಗಿರಲಿಲ್ಲ. ಎಟಿಎಂ ಕಾರ್ಡ್‌ಗಳನ್ನು ಮುದ್ರಿಸುವಲ್ಲಿ ಅತಿಯಾದ ವಿಳಂಬದಿಂದಾಗಿ ಹೊಸದಾಗಿ ಖಾತೆ ತೆರೆದ ಗ್ರಾಹಕರೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ದೇಶಕ್ಕೆ ಬೆಂಗಳೂರಿನಿಂದಲೇ ಪೂರೈಕೆ:

ಇಡೀ ದೇಶಕ್ಕೆ ಬೆಂಗಳೂರಿನಿಂದಲೇ ಅಂಚೆ ಎಟಿಎಂ ಕಾರ್ಡ್‌ಗಳ ಪೂರೈಕೆಯಾಗಬೇಕು. ದೇಶಾದ್ಯಂತ ಇರುವ ಅಂಚೆ ಕಚೇರಿಗಳ ಪೈಕಿ ಸುಮಾರು ಒಂದು ಸಾವಿರ ಅಂಚೆ ಕಚೇರಿಗಳಲ್ಲಿ ಎಟಿಎಂ ಮೆಷಿನ್ ಇದೆ. ಗ್ರಾಮೀಣ ಸಣ್ಣ ಅಂಚೆ ಕಚೇರಿಗಳನ್ನು ಹೊರತುಪಡಿಸಿ 25 ಸಾವಿರದಷ್ಟುಸಾಮಾನ್ಯ ಅಂಚೆ ಕಚೇರಿಗಳು ಇವೆ. ಬೆಂಗಳೂರಿನಲ್ಲಿರುವ ಅಂಚೆ ಇಲಾಖೆಯ ನ್ಯಾಶಷನಲ್‌ ಎಟಿಎಂ ಯುನಿಟ್‌ನಿಂದ ದೇಶದ 25 ಸಾವಿರ ಅಂಚೆ ಕಚೇರಿಗಳಿಗೆ ಎಟಿಎಂ ಕಾರ್ಡ್‌ಗಳ ಪೂರೈಕೆಯಾಗಬೇಕು.

ಪ್ರಥಮ ಹಂತದಲ್ಲಿ ಮುಖ್ಯ ಅಂಚೆ ಕಚೇರಿಗಳಿಗೆ ಮಾತ್ರ ಎಟಿಎಂ ಕಾರ್ಡ್‌ ಪೂರೈಕೆಯಾಗಲಿದೆ. ಉಳಿದ ಉಪ ಅಂಚೆ ಕಚೇರಿಗಳಿಗೆ ಹಂತ ಹಂತವಾಗಿ ಎಟಿಎಂ ಕಾರ್ಡ್‌ ತಲುಪಲಿದೆ ಎಂದು ಬೆಂಗಳೂರಿನ ಅಂಚೆ ಇಲಾಖೆ ಉನ್ನತಾಧಿಕಾರಿಗಳು ಹೇಳುತ್ತಾರೆ.

ಕ್ಯಾರ್‌ ಆಯ್ತು, ಈಗ ಇನ್ನೊಂದು ಚಂಡಮಾರುತ ಭೀತಿ.

ಪ್ರಸ್ತುತ ಬೆಂಗಳೂರು ಪ್ರಧಾನ ಅಂಚೆ ಕೇಂದ್ರದಿಂದ ಪ್ರಥಮ ಹಂತದಲ್ಲಿ ಕಳೆದ ಒಂದೂವರೆ ತಿಂಗಳಿಂದ ನಿತ್ಯವೂ 20 ಸಾವಿರ ಎಟಿಎಂ ಕಾರ್ಡ್‌ಗಳನ್ನು ದೇಶಾದ್ಯಂತ ಮುಖ್ಯ ಅಂಚೆ ಕಚೇರಿಗಳಿಗೆ ರವಾನಿಸಲಾಗುತ್ತಿದೆ. ಚೆನ್ನೈನ ಮದ್ರಾಸ್‌ ಪ್ರಿಂಟಿಂಗ್‌ ಸೆಕ್ಯುರಿಟಿ ವಿಭಾಗದಿಂದ ಎಟಿಎಂ ಕಾರ್ಡ್‌ಗಳು ಮುದ್ರಣಗೊಂಡು ಮಂಗಳೂರಿನ ನ್ಯಾಷನಲ್‌ ಎಟಿಎಂ ಯುನಿಟ್‌ಗೆ ಬರುತ್ತದೆ. ಇಲ್ಲಿಂದ ಪಿನ್‌ ನಂಬರು ಅಳವಡಿಕೆ, ಕೋರ್‌ ನೆಟ್‌ವರ್ಕ್ ಲಿಂಕ್‌ ಸೇರಿದಂತೆ ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕವೇ ಅಂತಿಮವಾಗಿ ಸಿದ್ಧಗೊಂಡು ಎಟಿಎಂ ಕಾರ್ಡ್‌ಗಳು ಅಂಚೆ ಕಚೇರಿಗಳಿಗೆ ಪೂರೈಕೆಯಾಗುತ್ತವೆ.

20 ಸಾವಿರ ಅಂಚೆ ಎಟಿಎಂ ಕಾರ್ಡ್‌ಗಳು ಮುಖ್ಯ ಅಂಚೆ ಕಚೇರಿಗೆ ರವಾನೆಯಾಗುತ್ತವೆ. ಮುಖ್ಯಅಂಚೆ ಕಚೇರಿಗಳು ತಲಾ 300 ಎಟಿಎಂ ಕಾರ್ಡ್‌ಗಳನ್ನು ಹಂಚಿಕೊಳ್ಳುತ್ತವೆ. ಅಲ್ಲಿ ಈ ಕಾರ್ಡ್‌ಗಳನ್ನು ಆದ್ಯತೆ ಮೇರೆಗೆ ಗ್ರಾಹಕರಿಗೆ ಹಸ್ತಾಂತರಿಸುತ್ತಿದ್ದಾರೆ. ಒಟ್ಟು 1.25 ಕೋಟಿ ಎಟಿಎಂ ಕಾರ್ಡ್‌ಗಳನ್ನು ಎಲ್ಲ ಅಂಚೆ ಕಚೇರಿಗಳ ಗ್ರಾಹಕರಿಗೆ ತಲುಪಿಸಲು ಇನ್ನೂ ಎರಡು ವರ್ಷ ಬೇಕಾಗಬಹುದು ಎಂದು ಅಂಚೆ ಇಲಾಖೆಯ ಉನ್ನತ ಅಧಿಕಾರಿಗಳು ಹೇಳುತ್ತಾರೆ.

ಈಗಾಗಲೇ ಎಟಿಎಂ ಕಾರ್ಡ್‌ ಹೊಂದಿರುವವರು ಹಳೆ ಕಾರ್ಡ್‌ನ್ನು ನೀಡಿ ಹೊಸ ಎಟಿಎಂ ಕಾರ್ಡ್‌ ಪಡೆಯಬಹುದು. ಹೊಸ ಕಾರ್ಡ್‌ಗಳಿಗೆ ಬೇಡಿಕೆ ಸಲ್ಲಿಸಿದವರು ಕೂಡ ಲಭ್ಯತೆಯ ಮೇರೆಗೆ ಕಾರ್ಡ್‌ ಪಡೆಯಲು ಅವಕಾಶ ಇದೆ ಎನ್ನುತ್ತಾರೆ ಅಧಿಕಾರಿಗಳು.

ವಿತ್ ಡ್ರಾಗೆ ಮಿತಿ ಇಲ್ಲ

ಅಂಚೆ ಇಲಾಖೆಯ ಎಟಿಎಂ ಕಾರ್ಡ್‌ನಿಂದ ಅಂಚೆ ಇಲಾಖೆಯ ಎಟಿಎಂಗಳಲ್ಲಿ ಮಾತ್ರ ಎಷ್ಟುಬಾರಿ ಬೇಕಾದರೂ ಹಣವನ್ನು ಪಡೆಯಬಹುದು. ಇದಕ್ಕೆ ಯಾವುದೇ ಶುಲ್ಕ ವಿಧಿಸಿಲ್ಲ. ಅಲ್ಲದೆ ಅಂಚೆ ಇಲಾಖೆ ಕೋರ್‌ ಬ್ಯಾಂಕಿಂಗ್‌ ಸೌಲಭ್ಯವನ್ನು ಹೊಂದಿರುವುದರಿಂದ ಬೇರೆ ಬ್ಯಾಂಕ್‌ಗಳ ಎಟಿಎಂಗಳಿಂದಲೂ ಅಂಚೆ ಇಲಾಖೆಯ ಎಟಿಎಂ ಕಾರ್ಡ್‌ ಬಳಸಿ ನಗದು ಪಡೆಯಬಹುದು. ಆಗ ಮಾತ್ರ ಆಯಾ ಬ್ಯಾಂಕ್‌ಗಳ ಎಟಿಎಂ ವಿತ್‌ಡ್ರಾ ಮಿತಿ ಅನ್ವಯವಾಗುತ್ತದೆ. ಎಟಿಎಂ ಹೊಂದಿರದ ಸಾಮಾನ್ಯ ಅಂಚೆ ಕಚೇರಿ ಇರುವ ಹಳ್ಳಿಗಳಲ್ಲೂ ಬೇರೆ ಬ್ಯಾಂಕ್‌ಗಳ ಎಟಿಎಂ ಬಳಸಿ ಇದರಲ್ಲಿ ಹಣ ತೆಗೆಯಲು ಸಾಧ್ಯವಿದೆ. ಆದರೆ ಯಾವುದೇ ಖರೀದಿ ವೇಳೆ ಸ್ವೈಪ್ಗೆ ಅವಕಾಶವನ್ನು ಆರ್‌ಬಿಇ ಇನ್ನೂ ನೀಡಿಲ್ಲ ಎನ್ನುತ್ತಾರೆ ಉನ್ನತಾಧಿಕಾರಿಗಳು.

50 ರು.ಗೆ ಅಂಚೆ ಬ್ಯಾಂಕ್‌ ಖಾತೆ!

ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆಯಲು ಕೇವಲ 50 ರು. ಸಾಕು. ಇತರೆ ರಾಷ್ಟ್ರೀಕೃತ ಅಥವಾ ಖಾಸಗಿ ಬ್ಯಾಂಕ್‌ಗಳಂತೆ ಖಾತೆ ತೆರೆಯಲು ಸಾವಿರ ಅಥವಾ ಅದಕ್ಕಿಂತ ಜಾಸ್ತಿ ಇರಲೇ ಬೇಕು ಎಂಬ ಮಾನದಂಡವನ್ನು ಹಾಕಿಲ್ಲ. 50 ರು. ಪಾವತಿಸಿ ಉಳಿತಾಯ ಖಾತೆ ತೆರೆಯುವ ಗ್ರಾಹಕರೂ ಎಟಿಎಂ ಕಾರ್ಡ್‌ ಹೊಂದಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಕಳೆದ ಒಂದು ತಿಂಗಳಿಂದ ಅಂಚೆ ಇಲಾಖೆ ಹೊಸ ಎಟಿಎಂ ಕಾರ್ಡ್‌ಗಳು ಬೆಂಗಳೂರು ಕೇಂದ್ರದಿಂದ ಮಂಗಳೂರು ವಿಭಾಗಕ್ಕೂ ರವಾನೆಯಾಗಿದೆ. ಮೊದಲು ಮುಖ್ಯ ಅಂಚೆ ಕಚೇರಿಗಳಿಗೆ, ಬಳಿಕ ಎರಡು ತಿಂಗಳಲ್ಲಿ ಉಪ ಅಂಚೆ ಕಚೇರಿಗಳಿಗೆ ಪೂರೈಕೆಯಾಗಲಿದೆ ಎಂದು ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಹೇಳಿದ್ದಾರೆ.

-ಆತ್ಮಭೂಷಣ್

click me!