‘ಕ್ಯಾರ್‌’ ಚಂಡಮಾರುತಕ್ಕೆ 2ನೇ ದಿನವೂ ಕರಾವಳಿ ತತ್ತರ

By Kannadaprabha NewsFirst Published Oct 27, 2019, 11:06 AM IST
Highlights

ಅರಬ್ಬಿ ಸಮುದ್ರದಲ್ಲಿ ‘ಕ್ಯಾರ್‌’ ಚಂಡಮಾರುತದ ಪ್ರಭಾವದಿಂದ ಕರಾವಳಿ ಪ್ರದೇಶ 2ನೇ ದಿನವಾದ ಶನಿವಾರವೂ ತತ್ತರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನವಿಡಿ ಮಳೆ- ಚಳಿಗಾಳಿಯ ವಾತಾವರಣವಿತ್ತು. ಇದೀಗ ಚಂಡಮಾರುತ ಒಮನ್‌ ದೇಶದತ್ತ ತೆರಳಿರುವುದರಿಂದ ಕರಾವಳಿಯಲ್ಲಿ ಮುಂದಿನ ದಿನಗಳಲ್ಲಿ ಮಳೆ ಇಳಿಮುಖವಾಗುವ ಸಾಧ್ಯತೆಯಿದೆ.

ಮಂಗಳೂರು(ಅ.27): ಅರಬ್ಬಿ ಸಮುದ್ರದಲ್ಲಿ ‘ಕ್ಯಾರ್‌’ ಚಂಡಮಾರುತದ ಪ್ರಭಾವದಿಂದ ಕರಾವಳಿ ಪ್ರದೇಶ 2ನೇ ದಿನವಾದ ಶನಿವಾರವೂ ತತ್ತರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನವಿಡಿ ಮಳೆ- ಚಳಿಗಾಳಿಯ ವಾತಾವರಣವಿತ್ತು. ಇದೀಗ ಚಂಡಮಾರುತ ಒಮನ್‌ ದೇಶದತ್ತ ತೆರಳಿರುವುದರಿಂದ ಕರಾವಳಿಯಲ್ಲಿ ಮುಂದಿನ ದಿನಗಳಲ್ಲಿ ಮಳೆ ಇಳಿಮುಖವಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ಉಂಟಾಗಬಹುದಾದ ಸಂಭಾವ್ಯ ವಿಪತ್ತು ನಿರ್ವಹಣೆಗೆ ಕೋಸ್ಟ್‌ ಗಾರ್ಡ್‌ ಸರ್ವ ಸನ್ನದ್ಧವಾಗಿದೆ.

ದ.ಕ. ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದುದರಿಂದ ಎಲ್ಲ ಶಾಲೆ ಮತ್ತು ಪಿಯುವರೆಗಿನ ಕಾಲೇಜುಗಳಿಗೆ ಶನಿವಾರವೂ ರಜೆ ಘೋಷಿಸಲಾಗಿತ್ತು. ಆಗಾಗ ಕೆಲಹೊತ್ತು ಧಾರಾಕಾರ ಮಳೆಯಾದದ್ದು ಬಿಟ್ಟರೆ ದಿನವಿಡಿ ಬಿಡದೇ ಮಳೆ ಸುರಿಯುತ್ತಲೇ ಇತ್ತು. ಅಲ್ಲದೆ, ಸಾಮಾನ್ಯ ಚಳಿಯನ್ನೂ ಮೀರಿ ಥಂಡಿ ಆವರಿಸಿತ್ತು. ಚಂಡಮಾರುತದ ಪ್ರಭಾವದಿಂದ ಭಾರೀ ಕುಳಿರ್ಗಾಳಿ ಬೀಸುತ್ತಿತ್ತು.

ಅಂಚೆ ATM ಕಾರ್ಡ್‌ ಕೊರತೆ, ಕಾರ್ಡ್ ಇಡೀ ದೇಶಕ್ಕೆ ಬೆಂಗಳೂರಿಂದಲೇ ಪೋರೈಕೆ..!

ಕೋಸ್ಟ್‌ ಗಾರ್ಡ್‌ ಸನ್ನದ್ಧ: ಚಂಡಮಾರುತದಿಂದ ಉಂಟಾಗಬಹುದಾದ ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಕೋಸ್ಟ್‌ ಗಾರ್ಡ್‌ ದೇಶದ ಪಶ್ಚಿಮ ಕರಾವಳಿಯುದ್ದಕ್ಕೂ ಸರ್ವಸನ್ನದ್ಧವಾಗಿದೆ. ಒಂದು ಏರ್‌ಕ್ರಾಫ್ಟ್‌ನ್ನು ಕೋಸ್ಟ್‌ಗಾರ್ಡ್‌ ಏರ್‌ ಎನ್‌ಕ್ಲೇವ್‌ನಲ್ಲಿ ಇರಿಸಲಾಗಿದ್ದು, ಆಗಾಗ ಹಾರಾಟ ನಡೆಸಿ ಮೀನುಗಾರಿಕಾ ಬೋಟುಗಳ ಸುರಕ್ಷತೆಯನ್ನು ಖಾತ್ರಿಪಡಿಸಲಾಗುತ್ತಿದೆ. ಕರ್ನಾಟಕ ಮತ್ತು ಗೋವಾ ತೀರ ಪ್ರದೇಶಗಳ ಕಣ್ಗಾವಲಿಗೆ ಏಳೆಂಟು ಹಡಗುಗಳನ್ನು ನಿಯೋಜಿಸಲಾಗಿದೆ. ರಾಜ್ಯ ಸರ್ಕಾರ ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಕೋಸ್ಟ್‌ ಗಾರ್ಡ್‌ ಅಧಿಕಾರಿಗಳು ತಿಳಿಸಿದ್ದಾರೆ.

ಲಂಗರು ಹಾಕಿದ ಬೋಟ್‌ಗಳು: ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಹಿನ್ನೆಲೆಯಲ್ಲಿ ಮೀನುಗಾರಿಕೆ ನಿಷೇಧ ಮಾಡಿದ್ದರಿಂದ ನೂರಾರು ಮೀನುಗಾರಿಕಾ ಬೋಟುಗಳು ತೀರ ಪ್ರದೇಶಗಳಲ್ಲಿ ಲಂಗರು ಹಾಕಿವೆ. ಮಂಗಳೂರು, ಉಡುಪಿ ಬಂದರುಗಳಲ್ಲಿ ಮಾತ್ರವಲ್ಲದೆ, ಎನ್‌ಎಂಪಿಟಿ ಆವರಣದಲ್ಲೂ ಬೋಟುಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ಅ.31ರವರೆಗೆ ಕಡಲಬ್ಬರ ಹೆಚ್ಚಿರುವುದರಿಂದ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ದೀಪಾವಳಿ ಖರೀದಿಗೆ ತೊಂದರೆ: ಭಾನುವಾರ ನಾಡಿನೆಲ್ಲೆಡೆ ದೀಪಾವಳಿ ಸಡಗರ. ಅದಕ್ಕಾಗಿ ವಿವಿಧ ಸಾಮಗ್ರಿಗಳ ಖರೀದಿಗೆ ಮಳೆಯಿಂದಾಗಿ ಅಡ್ಡಿಯಾಯಿತು. ಸದಾ ಗಿಜಿಗುಡುತ್ತಿದ್ದ ಕೇಂದ್ರ ಮಾರುಕಟ್ಟೆಯಲ್ಲಿ ಜನರ ಸಂಖ್ಯೆ ಕಡಿಮೆಯಿತ್ತು. ದೀಪಾವಳಿ ಬಂತೆಂದರೆ ನಗರದ ಬೀದಿಗಳಲ್ಲಿ ಹೂ ಮತ್ತಿತರ ವಸ್ತುಗಳ ವ್ಯಾಪಾರ ಭರಾಟೆ ಜೋರಾಗಿರುತ್ತಿತ್ತು. ಆದರೆ ಮಳೆಯಿಂದಾಗಿ ವ್ಯಾಪಾರಿಗಳ ಸಂಖ್ಯೆಯೂ ಕಡಿಮೆಯಿತ್ತು. ಭಾನುವಾರದಿಂದ ಮಳೆ ಇಳಿಮುಖವಾಗುವ ನಿರೀಕ್ಷೆ ಇರುವುದರಿಂದ ಮಳೆ ಕಳೆದು ದೀಪಾವಳಿ ರಂಗೇರಲಿದೆ.

ಟ್ರಾಫಿಕ್‌ ಜ್ಯಾಂ: ಕೆಲವೊಮ್ಮೆ ದಿಢೀರ್‌ ಮಳೆ ಸುರಿದಿದ್ದರಿಂದ ಏಕಾಏಕಿ ರಸ್ತೆಗಳ ಮೇಲೆ ಕೃತಕ ಪ್ರವಾಹ ಉಂಟಾಗಿ ಮಂಗಳೂರಿನಲ್ಲಿ ಟ್ರಾಫಿಕ್‌ ಜ್ಯಾಂ ಸಮಸ್ಯೆ ಉದ್ಭವಿಸಿತ್ತು. ಪರಿಸ್ಥಿತಿ ನಿಯಂತ್ರಿಸಲು ಟ್ರಾಫಿಕ್‌ ಪೊಲೀಸರು ಹರಸಾಹಸಪಡುತ್ತಿದ್ದರು.

ಕೇಂದ್ರ ಮಾರುಕಟ್ಟೆಯಲ್ಲಿ ಕೊಳಚೆ: ನಗರದ ಕೇಂದ್ರ ಮಾರುಕಟ್ಟೆಪರಿಸರದಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟು ಕೆಲಕಾಲ ಕೊಳಕು ನೀರು ನಿಂತಿದ್ದರಿಂದ ಅಲ್ಲಿನ ವ್ಯಾಪಾರಿಗಳು, ಸಾರ್ವಜನಿಕರು ತೊಂದರೆಗೊಳಗಾದರು. ಕೊನೆಗೆ ಪಾಲಿಕೆ ಸಿಬ್ಬಂದಿ ಆಗಮಿಸಿ ನೀರು ಹರಿದುಹೋಗಲು ಅನುವು ಮಾಡಿಕೊಟ್ಟು ಪರಿಸ್ಥಿತಿ ನಿಯಂತ್ರಿಸಿದರು.

ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಿದೆ. ಸುಳ್ಯ, ಪುತ್ತೂರು, ಉಪ್ಪಿನಂಗಡಿ ಪ್ರದೇಶಗಳಲ್ಲಿ ಮಧ್ಯಾಹ್ನ ವರೆಗೆ ಬಿಟ್ಟು ಬಿಟ್ಟು ಭಾರಿ ಮಳೆ ಸುರಿದಿದೆ. ಸಂಜೆ ಮಳೆ ಕಡಿಮೆಯಾಗಿತ್ತು. ಸುಬ್ರಹ್ಮಣ್ಯ ಮತ್ತು ಮೂಡುಬಿದಿರೆಯಲ್ಲಿ ಮಧ್ಯಾಹ್ನ ಮಳೆಯಾಗಿದೆ. ಸಂಜೆ ಮಳೆ ಕ್ಷೀಣಿಸಿದೆ. ಯಾವುದೇ ಪ್ರದೇಶಗಳಲ್ಲಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಸಸಿಹಿತ್ಲು ಬೀಚ್‌ ಬಳಿ ತೀವ್ರಗೊಂಡ ಕಡಲ್ಕೊರೆತ: ಹಳೆಯಂಗಡಿ, ಕಿನ್ನಿಗೋಳಿ, ಮೂಲ್ಕಿ, ಕಟೀಲು ಸೇರಿದಂತೆ ಮೂಲ್ಕಿ ಹೋಬಳಿಯಲ್ಲಿ ಶನಿವಾರ ಬೆಳಗ್ಗಿನಿಂದ ಬಿರುಸಿನ ಮಳೆಯಾಗಿದ್ದು ಕೆಲವು ಕಡೆ ಕೃತಕ ನೆರೆ ಉಂಟಾಗಿದೆ.

ಹಳೆಯಂಗಡಿ ಪಂಚಾಯಿತಿ ವ್ಯಾಪ್ತಿಯ ಸಸಿಹಿತ್ಲುವಿನಲ್ಲಿ ಕಡಲ ಅಬ್ಬರ ಜೋರಾಗಿದ್ದು ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಸಸಿಹಿತ್ಲು ಮುಂಡಾ ಬೀಚ್‌ ಬಳಿಯ ಅಂಗಡಿಗಳು ನೀರುಪಾಲಾಗುವ ಭೀತಿ ಎದುರಾಗಿದೆ. ಬೆಳಗ್ಗಿನಿಂದಲೇ ಸಮುದ್ರದ ಅಬ್ಬರ ಜೋರಾಗಿದ್ದು ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ಕೆಲವು ಸಮಯಗಳ ಹಿಂದೆ ಮಳೆಗಾಲದಲ್ಲಿ ಸಮುದ್ರ ಕೊರೆತಕ್ಕೆ ಸಸಿಹಿತ್ಲು ಸರ್ಫಿಂಗ್‌ ಖ್ಯಾತಿಯ ಮುಂಡಾ ಬೀಚ್‌ನಲ್ಲಿ ಅಂಗಡಿ ನೀರು ಪಾಲಾಗಿತ್ತು. ಇದೀಗ ಮತ್ತೆ ಭಾರಿ ಮಳೆಯಿಂದ ಸಮುದ್ರದ ಅಲೆಗಳು ಅಬ್ಬರಿಸುತ್ತಿದ್ದು ಸಸಿಹಿತ್ಲು ಮುಂಡಾ ಬೀಚ್‌ ಹಾಗೂ ಅಂಗಡಿಗಳು ಸಮುದ್ರಪಾಲಾಗುವ ಭೀತಿ ಎದುರಿಸುತ್ತಿದೆ. ಕೂಡಲೇ ತಾತ್ಕಾಲಿಕ ತಡೆಗೋಡೆ ಕಾಮಗಾರಿ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಸೈಕ್ಲೋನ್ ಎಫೆಕ್ಟ್: ಕೊಡಗಿನ ಮಳೆಗೆ ಕಂಗಾಲಾದ ಕಾಫಿ ಬೆಳೆಗಾರರು

ಬೀಚ್‌ ಪ್ರದೇಶದಲ್ಲಿ ಕಡಲಿನ ಕೊರೆತ ಮುಂದುವರಿದಿದೆ. ಇಲ್ಲಿನ ಗಾಳಿಮರಗಳು ಸಮುದ್ರ ಪಾಲಾಗುತ್ತಿದೆ. ಅಳಿವೆ ಪ್ರದೇಶದಲ್ಲಿಯೂ ಇದೇ ಪರಿಸ್ಥಿತಿ ಇದ್ದು ಪ್ರವಾಸಿಗರು ಎಚ್ಚರದಿಂದ ಇರಲು ಸ್ಥಳೀಯ ಮೀನುಗಾರರೇ ಎಚ್ಚರಿಸುತ್ತಿದ್ದಾರೆ. ರಭಸದ ಗಾಳಿಯಿಂದ ಅಥವಾ ಪ್ರಕ್ಷುಬ್ದ ಸಮುದ್ರದ ಅಲೆಯಿಂದ ಯಾವುದೇ ರೀತಿಯ ಹಾನಿ ಅಥವಾ ಅಪಾಯವು ಕಂಡು ಬಂದಿಲ್ಲ. ಆದರೂ ಮೀನುಗಾರರೊಂದಿಗೆ ಸ್ಥಳೀಯರು ಎಚ್ಚರದಿಂದ ಇರಲು ಸೂಚನೆ ನೀಡಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿ ಮೋಹನ್‌ ಪತ್ರಿಕೆಗೆ ತಿಳಿಸಿದ್ದಾರೆ. ಹಳೆಯಂಗಡಿ ಬಳಿಯ ಕೊಳುವೈಲು ಪ್ರದೇಶದಲ್ಲಿಯೂ ಕೆಲ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಇನ್ನೆರಡು ದಿನದಲ್ಲಿ ಮಳೆ ಮುಂದುವರಿದಲ್ಲಿ ಇಲ್ಲಿ ನೆರೆ ಬೀಳುವ ಸಾಧ್ಯತೆ ಇದೆ.

cyclone kyarr effect contnues for second day in coastal karnataka

click me!