
ಬೆಳಗಾವಿ, [ಮೇ.24]: ಲೋಕಸಭಾ ಫಲಿತಾಂಶ ಬಳಿಕ ರಾಜೀನಾಮೆ ನೀಡುತ್ತೇನೆಂದು ಹೇಳಿರುವ ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸೇರುವುದು ಖಚಿತವಾದಂತಿದೆ.
ಇದಕ್ಕೆ ಪೂರಕವೆಂಬಂತೆ ಬಿಜೆಪಿ ಮುಖಂಡರ ಬ್ಯಾನರ್ನಲ್ಲಿ ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಫೋಟೊ ಕಾಣಿಸಿಕೊಂಡಿದ್ದು, ಕಾಂಗ್ರೆಸ್ ತೊರೆಯುತ್ತಾರೆ ಎನ್ನುವುದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಅಣ್ಣಸಾಹೇಬ್ ಜೊಲ್ಲೆ ಆಯ್ಕೆಯಾಗಿದ್ದು, ಅವರಿಗೆ ಅಭಿನಂದನೆ ಸಲ್ಲಿಸಲು ಸ್ಥಳೀಯ ಬಿಜೆಪಿ ಮುಖಂಡರು ನಿಪ್ಪಾಣಿ ಪಟ್ಟಣದಲ್ಲಿ ಬ್ಯಾನರ್ ಹಾಕಿಸಿದ್ದಾರೆ.
ಈ ಬ್ಯಾನರ್ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇನ್ನಿತರ ಬಿಜೆಪಿ ಮುಖಂಡರ ಫೋಟೊ ಹಾಕಿಸಿದ್ದರು.
ಈ ಫೋಟೊಗಳ ಜತೆ ರಮೇಶ್ ಜಾರಕಿಹೊಳಿ ಫೋಟೊ ಕಾಣಿಸಿಕೊಂಡಿದ್ದು, ರಮೇಶ್ ಜಾರಕಿಹೊಳಿ, ಅಣ್ಣಸಾಹೇಬ್ ಜೊಲ್ಲೆ ಪರ ಪರೋಕ್ಷವಾಗಿ ಕೆಲಸ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಇದ್ರಿಂದ ಜಿಲ್ಲಾ ಕಾಂಗ್ರೆಸ್ ಮುಖಂಡರಿಗೆ ಹಾಗೂ ಪರಾಜಿತ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಗೆ ಇರಿಸು ಮುರುಸಾಗಿದೆ. ಈ ಫೋಟೋ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಾರಾ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.